ದೇವರ ಕಡೆಯಿಂದ ಹೊಡೆಸುತ್ತೇನೆ: ಚಿತ್ರ ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
ಪ್ರಸಿದ್ಧ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಯುವಕ ಮೂರು ವರ್ಷದ ಹಿಂದೆ ಅತ್ಯಾಚಾರ ಆರೋಪದಲ್ಲಿ ಸಿಲುಕಿಕೊಂಡಿದ್ದ. ಬಳಿಕ ದೇವಸ್ಥಾನ ಬಿಟ್ಟು ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಜೀವನ ನಡೆಸುತ್ತಿದ್ದ. ಹೀಗಿದ್ದವ ಇಂದು ತನ್ನದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ರೆ, ಸಾಯುವ ಮುನ್ನ ಯುವಕ ಚಿತ್ರ ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟಿದ್ದಾನೆ. ಅಷ್ಟಕ್ಕೂ ಆತ ಬರೆದ ಡೆತ್ ನೋಟ್ ನಲ್ಲಿ ಎನಿದೆ? ಎನ್ನುವುದು ಇಲ್ಲಿದೆ.

ಬೆಳಗಾವಿ, (ಸೆಪ್ಟೆಂಬರ್ 24): ಚಿತ್ರವಿಚಿತ್ರವಾಗಿ ಡೆತ್ ನೋಟ್ (death Note) ಬರೆದಿಟ್ಟು ಯುವಕನೋರ್ವ (Youth) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ನಗರದ ಕಪಿಲೇಶ್ವರ ರಸ್ತೆಯಲ್ಲಿ. ಸಿದ್ದಾಂತ ಪೂಜಾರಿ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಾಂತ ಪೂಜಾರಿಗೆ ಮದುವೆಯಾಗಿರಲಿಲ್ಲ. ಆದ್ರೆ, ಇಂದು (ಸೆಪ್ಟೆಂಬರ್ 24) ಏಕಾಏಕಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಚಾರ ಗೊತ್ತಾಗುತ್ತಿದ್ದಂತೆ ಖಡೇಬಜಾರ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸಿದ್ದಾಂತ ಪೂಜಾರಿ ಮೊಬೈಲ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಇದನ್ನು ನೋಡಿ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ.
ಸಿದ್ದಾಂತ ಮೊಬೈಲ್ ಪರಿಶೀಲನೆ ಮಾಡಿದ ಪೊಲೀಸರಿಗೆ ಸಾವಿಗೆ ಹಲವಾರು ಕಾರಣ ಬರೆದಿದ್ದಾನೆ. ಅದರಲ್ಲೂ ಕೆಲ ವಿಚಿತ್ರ ಸಂಗತಿಯನ್ನ ಕೂಡ ಆತ ಬರೆದಿದ್ದನ್ನ ನೋಡಿ ಪೊಲೀಸರು ಕೂಡ ಶಾಕ್ ಆಗಿದ್ದಾರೆ. ಇತ್ತ ತನ್ನ ಮಗನ ಸಾವಿಗೆ ಕಾರಣ ಸುಪ್ರಸಿದ್ದ ಕಪಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಎಂದು ತಂದೆ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ: ರೂಮ್ನಲ್ಲಿ ಸಿಕ್ಕ ಡೆತ್ ನೊಟ್ ನಲ್ಲಿದೆ?
ಯುವಕನ ಡೆತ್ ನೋಟ್ ನಲ್ಲೇನಿದೆ?
ತಾನು ಮೇಲೆ ಹೋಗುತ್ತಿದ್ದೇನೆ. ಅಲ್ಲಿ ದೇವರು ಭೇಟಿಯಾದ್ರೆ ತನಗೆ ಕಿರುಕುಳ ಕೊಟ್ಟವರನ್ನ ದೇವರ ಕಡೆಯಿಂದ ಹೊಡೆಸುತ್ತೇನೆ ಎಂದು ಬರೆದಿದ್ದಾನೆ. ಇತ್ತ ತನ್ನ ಅಜ್ಜಿ ಮೃತಪಟ್ಟಾಗ ಮಟನ್ ಮಾಡಿದ್ರೂ ಆದೇ ತನ್ನ ತಿಥಿಗೆ ಮಟನ್ ಮಾಡಬೇಡಿ ಬೇರೆ ಎನಾದರೂ ಮಾಡಿ ಎಂದು ಬರೆದಿದ್ದಾನೆ. ಇದರ ಜೊತೆಗೆ ಮೂರು ವರ್ಷದ ಹಿಂದೆ ತಾನೂ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡ್ತಿದ್ದಾಗ ಅಲ್ಲಿರುವ ಕೆಲವರು ತನ್ನ ಮೇಲೆ ಸುಳ್ಳು ರೇಪ್ ಕೇಸ್ ಹಾಕಿದ್ದರಿಂದ ತನ್ನ ಜೀವನವೇ ಅಲ್ಲಿಂದ ಬರ್ಬಾದಾಯಿತು. ಚೆನ್ನಾಗಿ ಹೊರಟ್ಟಿದ್ದ ಲೈಫ್ ಹಾಳಾಗಿ ಹೋಯಿತು ಎಂದು ಡೆತ್ ನಲ್ಲಿ ಉಲ್ಲೇಖಿಸಿದ್ದಾನೆ.
ಗಣಪತಿ ಹಬ್ಬಕ್ಕೂ ಮುನ್ನವೇ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದ್ರೆ ಹಬ್ಬ ಮಾಡಿ ಮಾಡಿಕೊಂಡರಾಯ್ತು ಎಂದು ಅಂದುಕೊಂಡು ಆಗ ಸಾಯುವುದನ್ನ ಮುಂದೂಡಿದ್ದೆ. ತನ್ನ ಮೇಲೆ ಸುಳ್ಳು ಆರೋಪ ಮಾಡಿದವರನ್ನ ದೇವರ ಕಡೆಯಿಂದ ಹೊಡೆಸುತ್ತೇನೆ. ಯಾರು ಕೂಡ ಅಳಬೇಡಿ ತನ್ನ ಆತ್ಮಕ್ಕೆ ನೋವಾಗುತ್ತೆ. ಇದೆಲ್ಲಾ ಹೇಳಲು ನನಗೆ ಆಗಲ್ಲ. ಯಾಕಂದ್ರೆ ಈಗ ನಾನು ಸತ್ತಿದ್ದೇನೆ. ನೀವೇ ಓದಿಕೊಳ್ಳಿ ಎಂದು ವಿಚಿತ್ರವಾಗಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಘಟನೆ ಸಂಬಂಧ ಖಡೇಬಜಾರ್ ಎಸಿಪಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಇತ್ತ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ನಿಜಕ್ಕೂ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಅದೇನೆ ಕಷ್ಟ ಇರಲಿ ಎದುರಿಸಿ ಬದುಕಬೇಕಿದ್ದ ಯುವಕ ಈ ರೀತಿ ಸಾವಿನ ದಾರಿ ಹಿಡಿದಿದ್ದು ಆ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ.



