ಬೆಳಗಾವಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ: ರೂಮ್ನಲ್ಲಿ ಸಿಕ್ಕ ಡೆತ್ ನೊಟ್ ನಲ್ಲಿದೆ?
ಎಲ್ಲೆಡೆ ದಸರಾ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಆದ್ರೆ, ನವರಾತ್ರಿಯ ಮೊದಲ ದಿನವೇ ಘೋರ ಘಟನೆ ನಡೆದಿದೆ. ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ವಸತಿ ನಿಲಯದ ಹಾಸ್ಟೆಲ್ ರೂಮ್ ನಲ್ಲೇ ಅತ್ಮಹತ್ಯೆಗೆ ಶರಣಾಗಿದ್ದಾಳೆ. ಪೋಷಕರು ಸಾಲ ಮಾಡಿ ಓದಿಸುತ್ತಿದ್ದರು. ಆದ್ರೆ, ವಿದ್ಯಾರ್ಥಿನಿ ನೇಣುಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ರೂಮ್ ನಲ್ಲಿ ಡೆತ್ ನೊಟ್ ಪತ್ತೆಯಾಗಿದೆ.

ಬೆಳಗಾವಿ, (ಸೆಪ್ಟೆಂಬರ್ 22): ನರ್ಸಿಂಗ್ ವಿದ್ಯಾರ್ಥಿನಿ (nursing Student)ನೇಣುಬಿಗಿದುಕೊಂಡು ಆತ್ಮಹತ್ಯೆ (Suicide)ಮಾಡಿಕೊಂಡಿರುವ ಘಟನೆ ಬೆಳಗಾವಿಯ (Belagavi) ಸದಾಶಿವನಗರದ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಗ್ರಾಮದ ಸುಮಿತ್ರಾ ಗೋಕಾಕ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಇಂದು (ಸೆಪ್ಟೆಂಬರ್ 22) ಬೆಳಿಗ್ಗೆ ಟಿಫನ್ ತೆಗೆದುಕೊಂಡು ರೂಮ್ ಗೆ ಹೋದವಳು ಹೊರಗಡೆ ಬಂದಿಲ್ಲ. ಸಹಪಾಠಿಗಳು ಕೊಠಡಿ ಬಳಿ ಬಂದು ಬಾಗಿಲು ಬಡಿದರೂ ಸಹ ಸುಮಿತ್ರಾ ಬಾಗಿಲು ತೆರೆದಿಲ್ಲ. ಬಳಿಕ ಬಾಗಿಲು ಮುರಿದು ಪರಿಶಿಲನೆ ನಡೆಸಿದಾಗ ಸುಮಿತ್ರಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಸುಮಿತ್ರಾ ತಂದೆ, ಸಂಬಂಧಿಕರ ಸಮ್ಮುಖದಲ್ಲಿ ಹಾಸ್ಟೆಲ್ ರೂಮ್ ಡೋರ್ ಓಪನ್ ಮಾಡಲಾಗಿದ್ದು, ಮಗಳ ನೇಣು ಬಿಗುದುಕೊಂಡಿರುವುದನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 25 ಸಾವಿರ ರೂ. ಸಾಲಮಾಡಿ ಮಗಳನ್ನು ಕಾಲೇಜಿಗೆ ಸೇರಿಸಿದ್ದೆ. ನನ್ನ ಮಗಳಿಗೆ ಏನಾಗಿದೆ ಹೇಳಿ ಎಂದು ತಂದೆ ದುಂಡಪ್ಪ ಅವರು ವಾರ್ಡನ್ ಕಾಲಿಗೆಬಿದ್ದು ಗೋಳಾಡಿದರು. ಇನ್ನು ಸುಮಿತ್ರಾ ಆತ್ಮಹತ್ಯೆಗೆ ಶರಣಾದ ಕೊಠಡಿಯಲ್ಲಿ ಪೊಲೀಸರು ತಪಾಸಣೆ ಮಾಡಿದರು.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಗ್ರಾಮದ ನಿವಾಸಿಯಾಗಿರುವ ಸುಮಿತ್ರಾ ಆತ್ಮಹತ್ಯೆಗೂ ಮುನ್ನ ಡೆತ್ ನೊಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಪರಿಶೀಲನೆ ವೇಳೆ ರೂಮ್ ನಲ್ಲಿ ಡೆತ್ ನೊಟ್ ಪತ್ತೆಯಾಗಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾಳೆ. ಸದ್ಯ ಸುಮಿತ್ರಾಳ ಮೃತದೇಹವನ್ನು ಪೊಲೀಸರು ಬಿಮ್ಸ್ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



