ಬೆಳಗಾವಿ: ಕೊವಿಡ್ನಿಂದ ಮೃತಪಟ್ಟ ಚಿನ್ನದ ಅಂಗಡಿ ಮಾಲೀಕನ ಕುಟುಂಬಕ್ಕೆ ತಮ್ಮನಿಂದಲೇ ಮೋಸವಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಚಿನ್ನದಂಗಡಿಯಲ್ಲಿದ್ದ 4 ಕೋಟಿ ಮೌಲ್ಯದ ಚಿನ್ನ ಮತ್ತು ಹಣದೊಂದಿಗೆ ತಮ್ಮ ಪರಾರಿಯಾಗಿದ್ದು, ಈ ವೇಳೆ ಅಂಗಡಿ ಬಾಗಿಲಿಗೆ ಅಣ್ಣನ ಪುತ್ರಿಯ ಫೋನ್ ನಂಬರ್ ಅಂಟಿಸಿ ಹೋಗಿದ್ದಾರೆ.
ಬೆಳಗಾವಿಯ ಪ್ರತಿಷ್ಠಿತ ಮುತಕೇಕರ್ ಜ್ಯುವೆಲರ್ಸ್ ಮಾಲೀಕ ಅನಿಲ್ ಮುತಕೇಕರ್ ಕೊವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಆದರೆ ಅನಿಲ್ ತಮ್ಮ ಅರವಿಂದ್ ಮುತಕೇಕರ್ ಅಂಗಡಿಯಲ್ಲಿದ್ದ ಚಿನ್ನ ಹೊತ್ತು ಪರಾರಿಯಾಗಿದ್ದಾರೆ. ಲಾಕ್‌ಡೌನ್ ವೇಳೆ ನಡೆದ ಘಟನೆ ಅನ್‌ಲಾಕ್ ಬಳಿಕ ಬಯಲಾಗಿದ್ದು, ಚಿನ್ನದಂಗಡಿಗೆ ಆಭರಣ ಮಾಡಿಸಲು ಕೊಟ್ಟಿದ್ದ ಗ್ರಾಹಕರು ಸದ್ಯ ಕಂಗಾಲಾಗಿದ್ದಾರೆ.
ಮುತಕೇಕರ್ ಜ್ಯುವೆಲ್ಲರ್ಸ್, ಎಸ್.ವಿ.ಮುತಕೇಕರ್ & ಕಂ. ಹೆಸರಲ್ಲಿ ಎರಡು ಪ್ರತ್ಯೇಕ ಮಳಿಗೆಗಳಿವೆ. ಪಾರ್ಟ್ನರ್ಶಿಪ್ನಲ್ಲಿ ಅನಿಲ್ ಮತ್ತು ಅರವಿಂದ್ ಚಿನ್ನದ ಅಂಗಡಿ ನಡೆಸುತ್ತಿದ್ದರು. ಜೂನ್ 11ರಂದು ಕೊವಿಡ್ನಿಂದ ಅನಿಲ್ ಮುತಕೇಕರ್ ಮೃತಪಟ್ಟಿದ್ದಾರೆ.
ಅಣ್ಣ ಸಾವನ್ನಪ್ಪಿದ ಬಳಿಕ ಚಿನ್ನದ ಅಂಗಡಿಯಲ್ಲಿನ ಚಿನ್ನ ಮತ್ತು ಹಣ ಲೂಟಿ ಮಾಡಿ ಅರವಿಂದ್ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜುಲೈ ಐದರಂದು ಪುತ್ರಿ ಮತ್ತು ಸಂಬಂಧಿಕರೊಂದಿಗೆ ಚಿನ್ನದ ಅಂಗಡಿಗೆ ಬಂದಿದ್ದ ಅರವಿಂದ್ ಚಿನ್ನ ದೋಚಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಂಬಂಧಿಗಳ ಜೊತೆ ಅರವಿಂದ್ ಮುತಕೇಕರ್ ಚಿನ್ನದಂಗಡಿ ನುಗ್ಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಿಸಿ ಕ್ಯಾಮರಾ ದೃಶ್ಯಾವಳಿ ಸಮೇತ ಖಡೇಬಜಾರ್ ಠಾಣೆಗೆ ಅನಿಲ್ ಮುತಕೇಕರ್ ಪುತ್ರಿ ಸಂಪದಾ ದೂರು ನೀಡಿದ್ದಾರೆ. ಆದರೆ ಆಭರಣ ಮಾಡಿಸಲು ಚಿನ್ನ ನೀಡಿದ ಗ್ರಾಹಕರು ಮಾತ್ರ ಎರಡು ತಿಂಗಳಿಂದ ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ.
ಇದನ್ನೂ ಓದಿ:
ಮೈಸೂರು ಚಿನ್ನದಂಗಡಿ ದರೋಡೆ, ಶೂಟೌಟ್ ಆರೋಪಿಗಳ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ
ಮಡಿವಾಳ: ವೈದ್ಯ ದಂಪತಿ ಮನೆಯಲ್ಲಿ ಕೆಲಸ ಮಾಡುವವರಿಂದಲೇ ಚಿನ್ನಾಭರಣ ಕಳ್ಳತನ; ಆರೋಪಿ ಅಮ್ಮು ಬಂಧನ
Published On - 7:41 am, Fri, 17 September 21