ಬೆಳಗಾವಿ, ಡಿಸೆಂಬರ್ 6: ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಪ್ರಯಾಣಿಸಿ ಎಲ್ಲಿಗೋ ತಲುಪಿದ್ದು, ಅಪಘಾತ ಸಂಭವಿಸಿದ ಬಗ್ಗೆ ವರದಿಗಳನ್ನು ನೋಡಿರುತ್ತೇವೆ. ಗೂಗಲ್ ಮ್ಯಾಪ್ ನಂಬಿ ಕಾರಿನಲ್ಲಿ ಪ್ರಯಾಣಿಸಿದ ಮೂವರು ನಿರ್ಮಾಣ ಹಂತದ ಸೇತುವೆಯಿಂದ ಬಿದ್ದು ಮೃತಪಟ್ಟ ಘಟನೆ ಕಳೆದ ವಾರವಷ್ಟೇ ಉತ್ತರ ಪ್ರದೇಶದ ಬರೇಲಿಯಲ್ಲಿ ಸಂಭವಿಸಿತ್ತು. ಬರೇಲಿಯಿಂದ ಪಿಲಿಭಿತ್‌ಗೆ ಪ್ರಯಾಣಿಸುವ ಮಾರ್ಗದಲ್ಲಿ ಮತ್ತೊಂದು ಇಂಥದ್ದೇ ಘಟನೆ ಸಂಭವಿಸಿ ಪ್ರಯಾಣಿಕರು ಗಾಯಗೊಂಡಿದ್ದರು. ಇದೀಗ ಕರ್ನಾಟಕದ ಬೆಳಗಾವಿಯಲ್ಲಿಯೂ ಗೂಗಲ್ ಮ್ಯಾಪ್ ಯಡವಟ್ಟು ಸಂಭವಿಸಿದೆ.
ಆಂಧ್ರ ಪ್ರದೇಶದಿಂದ ಗೋವಾಕ್ಕೆ ಹೊರಟಿದ್ದ ಮಹಿಳೆಯರು ಸೇರಿದಂತೆ ನಾಲ್ವರಿದ್ದ ಕಾರು ಗೂಗಲ್ ಮ್ಯಾಪ್ ತೋರಿದ ಮಾರ್ಗದಲ್ಲಿ ಪ್ರಯಾಣಿಸಿ ದಟ್ಟಾರಣ್ಯ ಸೇರಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ. ಸದ್ಯ ಕಾರಿನ ಸಮೇತ ಕಣ್ಮರೆಯಾದವರನ್ನು ಪತ್ತೆ ಮಾಡಿ ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರ ಪ್ರದೇಶದಿಂದ ಗೋವಾಕ್ಕೆ ತೆರಳುತ್ತಿದ್ದ ಕಾರಿನಲ್ಲಿದ್ದವರು ಗೂಗಲ್ ಮ್ಯಾಪ್ ಹಾಕಿಕೊಂಡಿದ್ದರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಡಿಗುಂಜಿ ಬಳಿ ಕಾಡಿನಲ್ಲಿ ಕಾರಿನಲ್ಲಿದ್ದವರಿಗೆ ದಾರಿ ತಪ್ಪಿದೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ದಾರಿ ತಪ್ಪಿ ಫಜೀತಿಯಾಗಿದೆ. ಮಧ್ಯರಾತ್ರಿ ದಾರಿ ತಪ್ಪಿದ ಪ್ರಯಾಣಿಕರು, ಹತ್ತು ಕಿಲೋಮೀಟರ್ ಕಾಡಿನಲ್ಲಿ ಪ್ರಯಾಣಿಸಿದ್ದರು. ಅಷ್ಟರಲ್ಲಿ, ರಸ್ತೆ ಮುಗಿದು ಹಳ್ಳ ಕಾಣಿಸಿದೆ. ಆಗ ಪ್ರಯಾಣಿಕರಿಗೆ ದಾರಿ ತಪ್ಪಿದ್ದು ಗೊತ್ತಾಗಿದೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆ ಮೇಲೆ ಹೋಗಿ ಜೀವ ಕಳೆದುಕೊಂಡ ದುರ್ದೈವಿಗಳು
ದಾರಿ ತಪ್ಪಿದ ಪ್ರಯಾಣಿಕರಿಗೆ ಅಲ್ಲಿಂದ ಎತ್ತ ಕಡೆ ತೆರಳಬೇಕು ಎಂಬುದೂ ಗೊತ್ತಾಗಿಲ್ಲ. ಬಳಿಕ ಕಾರಿನ ಚಾಲಕ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿ, ನಾಲ್ವರನ್ನೂ ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬಂದಿದ್ದಾರೆ. ಮುಖ್ಯ ರಸ್ತೆಗೆ ಕರೆದುಕೊಂಡು ಗೋವಾ ದಾರಿ ತೋರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ