ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿಯ ಪ್ರತಿಷ್ಠಿತ, ಸುಸಜ್ಜಿತ ಹೆಚ್‌ಡಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಜನರ ಗೋಳು ಕೇಳೋರೇ ಇಲ್ಲ!

| Updated By: ಸಾಧು ಶ್ರೀನಾಥ್​

Updated on: Jun 07, 2023 | 3:51 AM

Belagavi rural assembly constituency: ಯಾರಿಗೆ ಹೇಳೋಣ ಪ್ರಾಬ್ಲಮ್ಮು? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿಯ ಪ್ರತಿಷ್ಠಿತ, ಸುಸಜ್ಜಿತ ಹೆಚ್‌ಡಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಜನರ ಗೋಳು ಕೇಳೋರೇ ಇಲ್ಲ!

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿಯ ಪ್ರತಿಷ್ಠಿತ, ಸುಸಜ್ಜಿತ ಹೆಚ್‌ಡಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಜನರ ಗೋಳು ಕೇಳೋರೇ ಇಲ್ಲ!
ಸಚಿವೆ ಹೆಬ್ಬಾಳ್ಕರ್ ಪ್ರತಿನಿಧಿಸುವ ಹೆಚ್‌ಡಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಜನರ ಗೋಳು
Follow us on

ಅದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದ (Belagavi Rural) ಪ್ರತಿಷ್ಠಿತ ಬಡಾವಣೆ‌. ಕೋಟ್ಯಂತರ ರೂಪಾಯಿ ಅನುದಾನ ತಂದು ಆ ಬಡಾವಣೆಗೆ ರಸ್ತೆ, ಚರಂಡಿ ವ್ಯವಸ್ಥೆ ಮಾಡಿದರೂ ಸಹ ಅಲ್ಲಿಯ ಜನರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ಸಮನ್ವಯ ಕೊರತೆಯಿಂದ (Apathy) ಈ ಬಡಾವಣೆ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಷ್ಟಕ್ಕೂ ಯಾವುದು ಆ ಬಡಾವಣೆ? ಆ ಬಡಾವಣೆ ನಿವಾಸಿಗಳು ಹೇಳೋದೇನು? ಬಡಾವಣೆಯಲ್ಲಿ ಸಮಸ್ಯೆಗಳ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು? ಈ ಸ್ಟೋರಿ ನೋಡಿ… ಎಂಟತ್ತು ದಿನಗಳಿಗೊಮ್ಮೆ ಪೂರೈಕೆಯಾಗುವ ಕಲುಷಿತ ನೀರು… ರಸ್ತೆ ಬದಿ ಬಳಕೆ ಮಾಡಲು ಇಟ್ಟ ಟ್ಯಾಂಕ್‌ಗಳು ಖಾಲಿ ಖಾಲಿ… ಹೂಳು ತುಂಬಿರುವ ಚರಂಡಿ… ಇದ್ದ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕವೂ ಬಂದ್… ಕಲುಷಿತ ನೀರು ಇರುವ ಪಾತ್ರೆ ಹಿಡಿದು ಅಳಲು ತೋಡಿಕೊಳ್ಳುತ್ತಿರುವ ಮಹಿಳೆಯರು… ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿಯ ಹೆಚ್. ಡಿ.ಕುಮಾರಸ್ವಾಮಿ ಲೇಔಟ್‌ನಲ್ಲಿ .  (HD Kumaraswamy)

ಸುಸಜ್ಜಿತ ಬಡಾವಣೆಯಲ್ಲಿ ಎಲ್ಲ ಮೂಲಸೌಕರ್ಯ ಸಿಗುತ್ತೆ ಅಂತಾ ಸಾಕಷ್ಟು ಜನ ಲಕ್ಷಾಂತರ ಹಣ ಕೊಟ್ಟು ಸೈಟ್ ಖರೀದಿಸಿ ಮನೆ ಕಟ್ಟಿದ್ದಾರೆ. 500ಕ್ಕೂ ಹೆಚ್ಚು ಕುಟುಂಬಗಳು ಈ ಬಡಾವಣೆಯಲ್ಲಿ ವಾಸವಿವೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡ ಈ ಬಡಾವಣೆಯಲ್ಲಿ ಮೂಲಸೌಕರ್ಯ ಮರಿಚೀಕೆಯಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಸ್ಥಳೀಯ ನಿವಾಸಿಗಳು ಪರದಾಡುತ್ತಿದ್ದಾರೆ.

ಎಂಟತ್ತು ದಿನಕ್ಕೊಮ್ಮೆ ಪೂರೈಕೆಯಾಗುವ ಕುಡಿಯುವ ನೀರು ಸಹ ಕಲುಷಿತವಾಗಿದ್ದು ಬಡಾವಣೆಯಲ್ಲಿ ಇರುವ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯಾದ ಮಾರನೇ ದಿನವೇ ಬಂದ್ ಆಗಿದೆಯಂತೆ‌. ಇನ್ನು ಸುಸಜ್ಜಿತ ಚರಂಡಿ ವ್ಯವಸ್ಥೆ ಕಲ್ಪಿಸಿದ್ದರೂ ಅವುಗಳ ಹೂಳೆತ್ತದ ಹಿನ್ನೆಲೆ ಬ್ಲಾಕ್ ಆಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರು, ‘ಬಡಾವಣೆಯಲ್ಲಿ ರಸ್ತೆ, ಚರಂಡಿ ಸೇರಿ ಹಲವು ಅಭಿವೃದ್ಧಿ ಕೆಲಸ ಏನೋ ಮಾಡಿದ್ದಾರೆ ಆದ್ರೆ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ.

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿದ ದಿನದಿಂದ ಆರಂಭವಾಗುತ್ತಿಲ್ಲ. ತ್ಯಾಜ್ಯ ವಿಲೇವಾರಿ ಬಗ್ಗೆ ಕೇಳಿದ್ರೆ ಕಸದ ಲಾರಿ ರಿಪೇರಿ ಇದೆ ಅಂತಾರೆ. ಬುಡಾ ಅಧಿಕಾರಿಗಳನ್ನು ಕೇಳಿದ್ರೆ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಕೇಳಿ ಅಂತಾರೆ. ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಕೇಳಿದ್ರೆ ನಮ್ನ ಹತ್ತಿರ ಇನ್ನೂ ಫೈಲ್ ಬಂದಿಲ್ಲ ಅಂತಾರೆ. ಯಾರಿಗೇಳೋಣ ನಮ್ಮ ಪ್ರಾಬ್ಲಮ್ ಎಂದು ಅಳಲು ತೋಡಿಕೊಂಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಹೆಚ್‌ಡಿ ಕುಮಾರಸ್ವಾಮಿ ಲೇಔಟ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿದೆ. ಕುಮಾರಸ್ವಾಮಿ ಲೇಔಟ್ ನಿವಾಸಿಗಳು ಮೂಲಸೌಕರ್ಯ ಇಲ್ಲದೇ ಪರದಾಡುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ‘ಹೆಚ್.ಡಿ.ಕುಮಾರಸ್ವಾಮಿ ಲೇಔಟ್ ನಿವಾಸಿಗಳು ಏನೂ ಕಷ್ಟ ಅನುಭವಿಸುತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಅತ್ಯಂತ ಖುಷಿಯಿಂದ ಇರೋರು ಕುಮಾರಸ್ವಾಮಿ ಬಡಾವಣೆ ನಿವಾಸಿಗಳು. 16 ಕೋಟಿ ಅನುದಾನ ತಂದು ಕುಮಾರಸ್ವಾಮಿ ಲೇಔಟ್ ಅಭಿವೃದ್ಧಿ ಮಾಡಿದ್ದೇವೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಈಗ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಬೇಕಾಗಿದೆ. ಕುಡಿಯುವ ನೀರು ಬರುತ್ತಿಲ್ಲ ಅಂದ್ರೆ ಎಲ್ & ಟಿಯವರಿಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ಹಾಗೂ ನಿರ್ವಹಣೆ ಜವಾಬ್ದಾರಿ ಗುತ್ತಿಗೆ ನೀಡಿದ್ದೀವಿ. ಬುಧವಾರ ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ ಕರೆದಿದ್ದು ಈ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದಿದ್ದಾರೆ‌.

ಬೆಳಗಾವಿಯಲ್ಲಿ ಇದೇ ರೀತಿ ಹಲವು ಬಡಾವಣೆಗಳಲ್ಲಿ ಸಮಸ್ಯೆ ಇದೆ. ಸಮರ್ಪಕ ಕುಡಿಯುವ ನೀರು, ಸೂಕ್ತ ತ್ಯಾಜ್ಯ ವಿಲೇವಾರಿ, ಚರಂಡಿ ವ್ಯವಸ್ಥೆ ಇದ್ರೆ ಜನ ಆರೋಗ್ಯಕರವಾಗಿ ಇರಲು ಸಾಧ್ಯ. ಇನ್ನಾದರೂ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕಿದೆ. ಇದು ನನ್ನ ವ್ಯಾಪ್ತಿಗೆ ಬರಲ್ಲ ಎಂಬ ಮನಸ್ಥಿತಿ ಬದಿಗೊತ್ತಿ ಜನಸೇವೆಗೆ ಅಧಿಕಾರಿಗಳು ಅಣಿಯಾಗಲಿ ಎಂಬುದು ಜನರ ಆಶಯ. ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.

ವರದಿ: ಮಹಾಂತೇಶ ಕುರಬೇಟ್, ಟಿವಿ9, ಬೆಳಗಾವಿ