ಅಂತ್ಯಸಂಸ್ಕಾರ ಮಾಡದೆ ಪ್ರತಿಭಟನೆ ನಡೆಸೋಣ ಎಂದ ಕಾಂಗ್ರೆಸ್ ನಾಯಕಿ: ಕುಟುಂಬಸ್ಥರ ನಡುವೆ ವಾಗ್ವಾದ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 14, 2022 | 8:39 AM

ಶವವನ್ನು ಮನೆಯ ಎದುರೇ ಇರಿಸಿಕೊಂಡು ಪ್ರತಿಭಟನೆ ಮಾಡೋಣ. ಆರೋಪಿಗಳ ಬಂಧನ ಮತ್ತು ಪರಿಹಾರ ಘೋಷಣೆ ನಂತರ ಅಂತ್ಯಸಂಸ್ಕಾರ ಮಾಡೋಣ ಎಂದು ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಸಲಹೆ ಮಾಡಿದರು.

ಅಂತ್ಯಸಂಸ್ಕಾರ ಮಾಡದೆ ಪ್ರತಿಭಟನೆ ನಡೆಸೋಣ ಎಂದ ಕಾಂಗ್ರೆಸ್ ನಾಯಕಿ: ಕುಟುಂಬಸ್ಥರ ನಡುವೆ ವಾಗ್ವಾದ
ಸಂತೋಷ್ ಪಾಟೀಲ್ ಮನೆ ಎದುರು ಅಂತಿಮ ನಮನ ಸಲ್ಲಿಸುತ್ತಿರುವ ಗ್ರಾಮಸ್ಥರು
Follow us on

ಬೆಳಗಾವಿ: ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಮೃತ ಸಂತೋಷ್ ಪಾಟೀಲ್ (Santosh Patil) ಪಾರ್ಥಿವ ಶರೀರದ ಅಂತ್ಯಸಂಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ನಡುವೆ ಬಡಸ ಗ್ರಾಮದಲ್ಲಿ ಗುರುವಾರ ಮುಂಜಾನೆ ವಾಗ್ವಾದ ನಡೆಯಿತು. ಮೃತದೇಹದ ಎದುರು ನಡೆದ ಹಲವು ನಾಟಕೀಯ ಬೆಳವಣಿಗೆಗಳಿಗೆ ಬಡಸ ಗ್ರಾಮದ ಜನರು ಸಾಕ್ಷಿಯಾದರು. ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸುತ್ತಿದ್ದಂತೆ ಹಣೆ ಬಡೆದುಕೊಂಡ ಕುಟುಂಬದ ಸದಸ್ಯರು ಕಣ್ಣೀರಿಟ್ಟರು. ಅಂತಿಮ ಸಂಸ್ಕಾರ ಮಾಡುವ ಕುರಿತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜತೆಗೆ ಮೃತನ ಸೋದರ ಬಸವನಗೌಡ ಪಾಟೀಲ್ ಚರ್ಚೆ ಮಾಡಿದರು. ಶವದ ಅಂತಿಮ ಸಂಸ್ಕಾರ ಮಾಡುವುದು ಬೇಡ. ಶವವನ್ನು ಮನೆಯ ಎದುರೇ ಇರಿಸಿಕೊಂಡು ಪ್ರತಿಭಟನೆ ಮಾಡೋಣ. ಆರೋಪಿಗಳ ಬಂಧನ ಮತ್ತು ಪರಿಹಾರ ಘೋಷಣೆ ನಂತರ ಅಂತ್ಯಸಂಸ್ಕಾರ ಮಾಡೋಣ ಎಂದು ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಸಲಹೆ ಮಾಡಿದರು. ಶಾಸಕಿಯ ಸಲಹೆಯ ನಂತರ ಕುಟುಂಬದ ಸದಸ್ಯರ ನಡುವೆ ಜಗಳ ಆರಂಭವಾಯಿತು. ಕೂಡಲೇ ಮಧ್ಯಸ್ಥಿಕೆ ವಹಿಸಿದ ಗ್ರಾಮದ ಮುಖಂಡರೂ ಸಮಾಧಾನಪಡಿಸಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಹ ಅಂತಿಮ ನಮನ ಸಲ್ಲಿಸಿದರು.

ಮನೆ ಮುಂಭಾಗದಲ್ಲಿ ಸಂತೋಷ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ಶವದ ಮೇಲೆ ಕೇಸರಿ ಶಾಲು ಹೊದೆಸಿದರು. ಪುರೋಹಿತರು ಹೂ, ಬಿಲ್ವಪತ್ರೆ ಹಾಕಿ ಪೂಜೆ ಮಾಡಿದರು. ಸಂತೋಷ್ ಅವರ ಸ್ನೇಹಿತರು ಮತ್ತು ಸಂಬಂಧಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಒಂದು ಹಂತದಲ್ಲಿ ಸಾವಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಬೇಕೆಂದು ಆಗ್ರಹಿಸಿ, ಶವ ಇಡಲು ಕುಟುಂಬಸ್ಥರು ಮುಂದಾಗಿದ್ದರು. ನ್ಯಾಯ ಸಿಗುವವರೆಗೆ ಹೋರಾಟ ಮಾಡಬೇಕೆಂದು ಕೆಲವರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಹಿಳೆಯರು ಮುಂದೆ ಬಂದು ಎಲ್ಲರನ್ನೂ ಸಮಾಧಾನ ಪಡಿಸಲು ಯತ್ನಿಸಿದರು. ಮನೆ ಎದುರು ಗಲಾಟೆ ಆಗುವುದು ಬೇಡ ಎಂದು ಗೋಗರೆದರು. ಈ ವೇಳೆ ಕುಟುಂಬಸ್ಥರ ಮಧ್ಯೆ ಪರಸ್ಪರ ನೂಕಾಟ, ತಳ್ಳಾಟ ನಡೆಯಿತು. ನ್ಯಾಯ ಸಿಗುವವರೆಗೂ ಹೋರಾಟ ಮಾಡೋಣ ಎಂದು ಕೆಲವರು ಪಟ್ಟು ಹಿಡಿದರು. ಕೊನೆಗೆ ಗ್ರಾಮದ ಹಿರಿಯರು ಎಲ್ಲರನ್ನೂ ಸಮಾಧಾನಪಡಿಸಿದರು.

ಗ್ರಾಮದಲ್ಲಿ ಮದುವೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಶೀಘ್ರ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಪಡಿಸಿದರು. ಮನೆ ಮುಂಭಾಗದಲ್ಲಿದ್ದ ಪಾರ್ಥಿವ ಶರೀರವನ್ನು ಆಂಬುಲೆನ್ಸ್​ಗೆ ಸ್ಥಳಾಂತರಿಸಲಾಯಿತು. ಮೃತನ ಸಹೋದರ ಬಸವನಗೌಡ ವಿರೋಧದ ನಡುವೆಯೂ ಗ್ರಾಮದ ಮುಖಂಡರು ಮತ್ತು ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಮುಂದಾದರು. ಶವವಿಟ್ಟು ಹೋರಾಟ ಮಾಡುವುದಾಗಿ ಸಹೋದರ ಬಸವನಗೌಡ ಹೇಳಿದರೂ ಗ್ರಾಮದ ಮುಖಂಡರು ಕೇಳಲಿಲ್ಲ.

ಇದನ್ನೂ ಓದಿ: ಸ್ವಗ್ರಾಮ ತಲುಪಿದ ಸಂತೋಷ್ ಮೃತದೇಹ: ಬಡಸದಲ್ಲಿ ಕುಟುಂಬಸ್ಥರ ಆಕ್ರಂದನ

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಮೋದಿ; ಬಿ.ಎಲ್. ಸಂತೋಷ್‌ಗೆ ಬುಲಾವ್