ಸಂತೋಷ್ ಕುಟುಂಬಕ್ಕೆ ತಕ್ಷಣ 1 ಕೋಟಿ ಪರಿಹಾರ ಕೊಡಿ: ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ
ಮೂವರನ್ನೂ ಬಂಧಿಸಲು ಬೇಕಿರುವಷ್ಟು ಸಾಕ್ಷ್ಯಗಳು ಸಂತೋಷ್ ಮೊಬೈಲ್‌ನಲ್ಲಿ ಇದೆ. ಸಾಕ್ಷ್ಯ ತಿರುಚಲು ಹುನ್ನಾರ ನಡೆಯುತ್ತಿರುವ ಶಂಕೆಯಿಂದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಳಗಾವಿ: ಉಡುಪಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗುತ್ತಿಗೆದಾರ ಸಂತೋಷ್ ನಿರ್ವಹಿಸಿರುವ ₹ 4 ಕೋಟಿ ಬಿಲ್ ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಡಸ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು. ಸಂತೋಷ್ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು. ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಆತ್ಮಹತ್ಯೆ ಪ್ರಕರಣದಲ್ಲಿ ಮೂವರ ವಿರುದ್ಧ ಎಫ್ಐಆರ್ ಆಗಿದ್ದರೂ, ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಮೂವರನ್ನೂ ಬಂಧಿಸಲು ಬೇಕಿರುವಷ್ಟು ಸಾಕ್ಷ್ಯಗಳು ಸಂತೋಷ್ ಮೊಬೈಲ್‌ನಲ್ಲಿ ಇದೆ. ಸಾಕ್ಷ್ಯ ತಿರುಚಲು ಹುನ್ನಾರ ನಡೆಯುತ್ತಿರುವ ಶಂಕೆಯಿಂದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಬಂಧಿಸಿ, ಶಿಕ್ಷೆ ವಿಧಿಸಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದರು. ಸಾಯುವಾಗಲೂ ಸಂತೋಷ್ ಪಾಟೀಲ್ ಕೇಸರಿ ಶಾಲು ಹಾಕಿದ್ದ. ಬಿಜೆಪಿ ಅಭಿಮಾನಿಯಾಗಿದ್ದ. ಆದರೂ ಬಿಜೆಪಿ ನಾಯಕರ ಮನಸ್ಸುಗಳು ಕರಗಲೇ ಇಲ್ಲವೇ? ಹೊಲಸು ರಾಜಕಾರಣ ಬಿಟ್ಟು ಅವರ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ಸತ್ತಿರುವ ಸಂತೋಷ್ ಏನು ಮಾಡಿದರೂ ವಾಪಸ್ ಬರುವುದಿಲ್ಲ. ಆದರೆ ಸಾಕ್ಷಿ ಇದ್ದರೂ ಏಕೆ ಮೂವರು ಆರೋಪಿಗಳನ್ನು ಬಂಧಿಸಿಲ್ಲ. ಸಾಕ್ಷಿ ತಿರುಚಲು ಯತ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು. ಈಶ್ವರಪ್ಪ ಅವರನ್ನು ಸಚಿವಸ್ಥಾನದಿಂದ ವಜಾ ಮಾಡುವುದಷ್ಟೇ ಅಲ್ಲ, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಈ ಎಲ್ಲ ಮಾಹಿತಿಯಿದೆ. ಮೃತ ಸಂತೋಷ್ ಸಹ ಯಡಿಯೂರಪ್ಪ ಅವರ ಕಟ್ಟಾ ಅಭಿಮಾನಿಯಾಗಿದ್ದ. ನಮ್ಮ ಸಮಾಜದ ಹಿರಿಯ ಮುಖಂಡರು ಎಂದು ಯಡಿಯೂರಪ್ಪ ಅವರ ಹೆಸರನ್ನು ತನ್ನ ಕೊನೆಯ ಮೆಸೇಜ್ನಲ್ಲಿ ಉಲ್ಲೇಖಿಸಿದ್ದಾನೆ. ಯಡಿಯೂರಪ್ಪ ಅವರಾದರೂ ಅಂತ್ಯಕ್ರಿಯೆಗೆ ಬರಬಹುದಾಗಿತ್ತು. ಅವರಿಗೆ ಆಗದಿದ್ದರೆ ಇನ್ನೊಬ್ಬರನ್ನಾದರೂ ಕಳಿಸಬಹುದಾಗಿತ್ತು. ಆದರೆ ಅವರೂ ಬರಲಿಲ್ಲ, ಯಾರನ್ನೂ ಕಳಿಸಲಿಲ್ಲ. ಅವರಿಗೆ ಪಕ್ಷವು ಮುಖ್ಯ ಅಲ್ಲ, ರಾಜಕಾರಣ ಮುಖ್ಯ ಎಂದು ದೂರಿದರು.
ರಾಜಕೀಯ ನಾಯಕರು ತಮ್ಮ ಹೊಲಸು ರಾಜಕಾರಣಕ್ಕೆ ಅದೆಷ್ಟು ಜನರ ಬಲಿ ಪಡೆಯುತ್ತಾರೋ ಗೊತ್ತಿಲ್ಲ. ಸಮಾಜದ ಮಗ ಅವನು, ನಮ್ಮ ಸಮಾಜದ ಗುರುಗಳು ಇವತ್ತು ಬಂದು ಸಂತಾಪ ಸೂಚಿಸಿದರು. ಜಾತ್ಯಾತೀತವಾಗಿ ನಾವು ಒಂದೇ ಬೇಡಿಕೆಯನ್ನು ಮುಂದಿಇಡುತ್ತಿದ್ದೇವೆ. ಅವನು ಬಿಜೆಪಿ ಕಾರ್ಯಕರ್ತ. ಸಾಯುವಾಗಲೂ ಅವನು ಕೊರಳಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದ. ಅವನ ಕಟ್ಟರ್ ಅಭಿಮಾನ ಕಂಡಾಗಲೂ ನಿಮ್ಮ ಮನಸ್ಸು ಕರಗಲಿಲ್ವಾ? ನಿಮ್ಮ ಹೊಲಸು ರಾಜಕಾರಣ ಬದಿಗಿಟ್ಟು ಅವರ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ, ಈಶ್ವರಪ್ಪ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ಸಂತೋಷ್ ಪಾಟೀಲ್ ಮೃತದೇಹ ಗುಣಿಗಿಟ್ಟ ಮೇಲೆ ಹೈಡ್ರಾಮ: ಗೊಂದಲದ ನಡುವೆ ಸಮಾಧಿಗೆ ಜೆಸಿಬಿಯಿಂದ ಮಣ್ಣು
Published On - 12:02 pm, Thu, 14 April 22