ಬೆಳಗಾವಿ: ಪ್ರತಿವರ್ಷದಂತೆ ಈ ಬಾರಿಯೂ ಉತ್ತರ ಕರ್ನಾಟಕದ ಸುಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಆದ್ರೆ ಇಲ್ಲಿಗೆ ಬರುವ ಭಕ್ತರನ್ನೇ ಟಾರ್ಗೆಟ್ ಮಾಡಿ ಯಲ್ಲಮ್ಮನ ಸನ್ನಿಧಾನದಲ್ಲಿ ಮದ್ಯದ ಘಮ ಹೆಚ್ಚಾಗಿದೆ. ಅಕ್ರಮವಾಗಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಫೆಬ್ರವರಿ ತಿಂಗಳಲ್ಲಿ ಬರುವ ಭಾರತ ಹುಣ್ಣುಮೆಗೆ ಕರ್ನಾಟಕದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಭಂಡಾರದೊಡತಿ ದರ್ಶನಕ್ಕೆ ಆಗಮಿಸುತ್ತಾರೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಹೊರ ರಾಜ್ಯದಿಂದಲೂ ಅಪಾರ ಪ್ರಮಾಣದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಾರತ ಹುಣ್ಣುಮೆ ದಿನದಂದೂ ದೇವಿ ದರ್ಶನ ಪಡೆಯುವುದರಿಂದ ಕಷ್ಟ ಕಾರ್ಪಣ್ಯಗಳು ದೂರ ಆಗುತ್ತವೆ ಅನ್ನೋ ನಂಬಿಕೆ ಇದೆ. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಇಂದು ಸಂಜೆಯಿಂದಲೇ ಭಕ್ತರ ದಂಡು ಜಾತ್ರೆಗೆ ಹರಿದು ಬರುತ್ತೆ. ಒಂದು ದಿನ ಮೊದಲು ಬಂದು ದೇವಿಗೆ ವಿಶೇಷ ಖಾದ್ಯಗಳನ್ನ ಸಿದ್ದಪಡಿಸಿ ನೈವೇದ್ಯ ಹಿಡಿದು ಜಾತ್ರೆ ಆಚರಿಸುವುದು ಸಂಪ್ರದಾಯ.
ಇನ್ನೂ ದೇವಿ ದರ್ಶನ ಪಡೆದು ಪುನೀತರಾಗಲು ಆಗಮಿಸುವ ಭಕ್ತರನ್ನ ಟಾರ್ಗೆಟ್ ಮಾಡಿ ಯಲ್ಲಮ್ಮನ ಸನ್ನಿಧಾನದಲ್ಲಿ ಅಕ್ರಮವಾಗಿ ಮದ್ಯ ರಾಜಾರೋಷವಾಗಿ ಮಾರಾಟವಾಗ್ತಿದೆ. ಸುಮಾರು ನೂರು ಎಕರೆ ಪ್ರದೇಶದಲ್ಲಿ ಅದ್ದೂರಿ ಜಾತ್ರೆ ನಡೆಯುತ್ತಿದ್ದು ಸುಮಾರು ಅರವತ್ತಕ್ಕೂ ಅಧಿಕ ಕೋಲ್ಡ್ರಿಂಕ್ಸ್ ಶಾಪ್ ಗಳು ಜಾತ್ರೆಯಲ್ಲಿ ತೆರೆದಿರುತ್ತಾರೆ. ದೇವಿಯ ಸನ್ನಿಧಾನದಲ್ಲಿದ್ದುಕೊಂಡೇ ಕೆಲವರು ಭಕ್ತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಲ್ಲಮ್ಮನ ಗುಡ್ಡದಲ್ಲಿರುವ ಪ್ರತಿಯೊಂದು ಕೋಲ್ಡ್ರಿಂಕ್ಸ್ ಶಾಪ್ ನಲ್ಲಿ ಇದೀಗ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಕೆಲವು ಅಂಗಡಿಗಳಂತೂ ಒಳಗಡೆ ಭಾಗದಲ್ಲಿ ಬಾರ್ ಮಾದರಿಯಲ್ಲೇ ರೆಡಿ ಮಾಡಿ ಅಲ್ಲೇ ಕುಡಿಯುವ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: Bengaluru News: ರೀಲ್ಸ್ನಲ್ಲಿ ಪರಿಚಯವಾದವನ ಜೊತೆ ಪತ್ನಿ ಹೋಗಿದ್ದಾಳೆಂದು ಪತಿ ದೂರು
ಹೌದು ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಒಂದು ಕಡೆ ಅದ್ದೂರಿಯಾಗಿ ಜಾತ್ರೆ ನಡೆಯುತ್ತಿದ್ರೇ ಇನ್ನೊಂದು ಕಡೆ ಜಾತ್ರೆಯಲ್ಲೇ ಮೂಲೆ ಮೂಲೆಯಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದರಲ್ಲಿ ಚಿಕ್ಕ ಮಕ್ಕಳು ಕೂಡ ಟೆಟ್ರಾ ಪಾಕೆಟ್ ಗಳನ್ನ ಹಣ ಪಡೆದು ಮಾರಾಟ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಮಹಿಳೆಯರು ಕೂಡ ಈ ಅಕ್ರಮ ಸಾರಾಯಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ಮಾಡುತ್ತಿದ್ದಾರೆ. ದೇವಿಯ ಭಂಡಾರ ಸಿಗಬೇಕಿದ್ದ ಜಾಗದಲ್ಲಿ ಇದೀಗ ಎಣ್ಣೆ ಸಿಗುತ್ತಿದ್ದು ಜಿಲ್ಲಾಡಳಿತವೇ ಇದಕ್ಕೆ ನೇರ ಹೊಣೆ ಅಂತಾ ಕೆಲ ಭಕ್ತರು, ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನೂ ಈ ವಿಚಾರ ಅಬಕಾರಿ ಇಲಾಖೆ ಸಿಬ್ಬಂದಿಗೆ ಗೊತ್ತಿದ್ರೂ ಅವರಿಂದ ಹಣ ಪಡೆದು ಸೈಲೆಂಟ್ ಆಗಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದೆ. ಇತ್ತ ಸವದತ್ತಿ ಪೊಲೀಸ್ ಠಾಣೆಯ ಕೆಲ ಸಿಬ್ಬಂದಿ ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ಇದ್ದು ಹೀಗಾಗಿ ಅಕ್ರಮಕ್ಕೆ ಬ್ರೇಕ್ ಹಾಕಬೇಕಿದ್ದವರು ಇದೀಗ ಸಾಥ್ ಕೊಟ್ರಾ ಅನ್ನೋ ಆರೋಪ ಕೇಳಿ ಬರುತ್ತಿದೆ. ಸದ್ಯ ಮೂರು ದಿನಗಳ ಕಾಲ ದೇವಸ್ಥಾನ ಸುತ್ತ ಮೂರು ಕಿಮೀ ವರೆಗೂ ಮದ್ಯ ಮಾರಾಟಕ್ಕೆ ನಿಷೇಧ ಹಾಕಿದ್ದು ಹೀಗಿದ್ರೂ ರಾಜಾರೋಷವಾಗಿ ಮದ್ಯ ಮಾರಾಟ ಆಗ್ತಿರುವುದರಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಸ್ಪಷ್ಟ ಆಗ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:07 pm, Sat, 4 February 23