ಚಿಕ್ಕೋಡಿ: ಹತ್ಯೆಯಾದ ಜೈನ ಮುನಿ ಕಾಮಕುಮಾರನಂದಿ ಮಹಾರಾಜರ (Kamakumaranandi Maharaj) ಅಂತ್ಯಸಂಸ್ಕಾರ ಇಂದು ಭಕ್ತರ ಕಂಬನಿಯ ನಡುವೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಹಿರೇಕೋಡಿ ಬಳಿ ಇರುವ ನಂದಿಪರ್ವತ ಆಶ್ರಮದ ಪಕ್ಕದ ಜಮೀನಿನಲ್ಲಿ ನೆರವೇರಿತು. ಜೈನಮುನಿಗಳ ಚಿತೆಗೆ ಕಾಮಕುಮಾರನಂದಿ ಮಹಾರಾಜರ ಪೂರ್ವಾಶ್ರಮದ ಅಣ್ಣನ ಮಗ ಭೀಮಗೊಂಡ ಉಗಾರೆ ಅವರು ಅಗ್ನಿಸ್ಪರ್ಶ ಮಾಡಿದರು. ಕಾಮಕುಮಾರನಂದಿ ಮಹಾರಾಜರ ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆ ಕೆಲ ಕ್ಷಣಗಳ ಕಾಲ ಜಿಟಿಜಿಟಿ ಮಳೆಯಾಗಿದೆ.
ನಾಳೆ ಬೆಳಗ್ಗೆ 8 ಗಂಟೆಗೆ ರಕ್ಷಾ ವಿಸರ್ಜನಕ್ಕೆ ಬರುವಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಹತ್ಯೆ ಖಂಡಿಸಿ ನಾಳೆ 10 ಗಂಟೆಗೆ ಚಿಕ್ಕೋಡಿಯ ಆರ್‌ಡಿ ಕಾಲೇಜಿನಿಂದ ಮೌನ ಪ್ರತಿಭಟನಾ ಮೆರವಣಿಕೆ ಹಮ್ಮಿಕೊಳ್ಳಲಾಗಿದ್ದು, ಭಕ್ತರು ಆಗಮಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ: 400 ಅಡಿ ಆಳದ ಕೊಳವೆ ಬಾವಿಯಲ್ಲಿ ಮೃತದೇಹ ಪತ್ತೆ
ಅಂತ್ಯಕ್ರಿಯೆ ಬಳಿಕ ಮಾಹಿತಿ ನೀಡಿದ ನಾಂದಣಿ ಮಠದ ಜಿನಸೇನ ಭಟ್ಟಾಚಾರ್ಯ ಸ್ವಾಮೀಜಿ, ಜಿನಶಾಸನದ ಅದ್ಭುತ ಸೂರ್ಯ ಅಸ್ತವಾಗಿದೆ. ನಾಳೆ ಬಳಗ್ಗೆ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಧ್ವನಿ ಸರ್ಕಾರಕ್ಕೆ ಮುಟ್ಟಬೇಕು. ಜೈನ ಸಮಾಜ ಅಹಿಂಸಪ್ರಿಯ ಸಮಾಜ. ಮಹಾರಾಜರ ಮೇಲೆ ಆದ ಆಘಾತ ಮತ್ತೆ ಯಾರ ಮೇಲೂ ಆಗಬಾರದು. ಆರ್‌ಡಿ ಹೈಸ್ಕೂಲ್ನಿಂದ ಮೌನಪ್ರತಿಭಟನೆ ಮೆರವಣಿಗೆ ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ. ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಬಗ್ಗೆ ವಿಶ್ವಾಸವಿದೆ ಎಂದರು.
ಜೈನ ಮುನಿ ಹತ್ಯೆ ಖಂಡಿಸಿ ಇಂದು ಬೆಳಗಾವಿಯ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಹಲಗಾ ಗ್ರಾಮದ ಸಿದ್ದಸೇನ ಮಹಾರಾಜರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆ ಬಂದ್ ಮಾಡಿ ಆಕ್ರೋಶ ಹೊರಹಾಕಲಾಗಿದೆ. ಪ್ರತಿಭಟನೆಯಲ್ಲಿ ಸಾವಿರಾರು ಜನರು, ಜೈನ ಸಮುದಾಯದ ಮುಖಂಡರು ಭಾಗಿಯಾಗಿದ್ದಾರೆ. ಪ್ರತಿಭಟನೆಯಲ್ಲಿ ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್ ಇದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Sun, 9 July 23