ಚಿಕ್ಕೋಡಿ: ಜೈನಮುನಿ ಕಾಮಕುಮಾರನಂದಿ ಮಹಾರಾಜರ (Acharya Shri 108 Kamkumarnandi Maharaj) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಜುಲೈ 17ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ (Chikkodi Additional Sessions Court) ಮಂಗಳವಾರ ಆದೇಶ ನೀಡಿದೆ. ಒಂದನೇ ಆರೋಪಿ ನಾರಾಯಣ ಮಾಳಿ, ಎರಡನೇ ಆರೋಪಿ ಹಸನ್ ಸಾಬ್ ಅನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ.
ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣದ ಅರೋಪಿಗಳನ್ನು ಚಿಕ್ಕೋಡಿ ಠಾಣೆ ಪೊಲೀಸರು ರಹಸ್ಯ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್, ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಜೈನಮುನಿಗಳ ಡೈರಿಯನ್ನು ಆರೋಪಿಗಳು ಸುಟ್ಟು ಹಾಕಿದ್ದಾಗಿ ಪ್ರಾಥಮಿಕ ತನಿಖೆ ವೇಳೆ ಮಾಹಿತಿ ದೊರೆತಿದೆ. ಈ ಕುರಿತು ವಿಚಾರಣೆ ವೇಳೆ ಆರೋಪಿಗಳೇ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಮುನಿಯನ್ನು ಕೊಲೆಗೈದು ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಬೈಕ್ನಲ್ಲಿ ಸಾಗಿಸಲಾಗಿತ್ತು. ಜೈನಮುನಿ ಶವದ ಜತೆ ಡೈರಿ ತೆಗೆದುಕೊಂಡು ಹೋಗಿದ್ದ ಆರೋಪಿಗಳು, ಕಟಕಬಾವಿ ಬಳಿಯ ಕಬ್ಬಿನ ಗದ್ದೆ ತಂದಿದ್ದರು. ಬಳಿಕ ಮೃತದೇಹವನ್ನು ತುಂಡು ಮಾಡಿ ಕೊಳವೆಬಾವಿಗೆ ಹಾಕಿದ್ದರು. ನಂತರ ರಕ್ತಸಿಕ್ತ ಬಟ್ಟೆಗಳು, ಡೈರಿಯನ್ನು ಸುಟ್ಟು ಹಾಕಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿರುವ ಪೊಲೀಸರು, ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ. ಜುಲೈ 5ರಂದು ರಾತ್ರಿ ಜೈನಮುನಿಯನ್ನು ಹತ್ಯೆ ಮಾಡಲಾಗಿತ್ತು.
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತದಲ್ಲಿರುವ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಆಶ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ ಮಂಗಳವಾರ ಭೇಟಿ ನೀಡಿದೆ. ಪ್ರಕರಣದ ಸತ್ಯಾಸತ್ಯತೆ ಅರಿಯಲು ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ನಳಿನ್ ಕುಮಾರ್ ಅವರು ಆಶ್ರಮದಲ್ಲಿ ಮಾಹಿತಿ ಪಡೆದಿದ್ದಾರೆ. ಜೈನಮುನಿಗಳ ಸಹಾಯಕಿ ಕುಸುಮಾ ಬಳಿ ಮಾಹಿತಿ ಸಂಗ್ರಹಿದ್ದಾರೆ. ಇದೇ ವೇಳೆ, ಜೈನಮುನಿಗಳನ್ನು ನೆನೆದು ಕುಸುಮಾ ಕಣ್ಣೀರು ಹಾಕಿದ್ದಾರೆ.
ಜೈನಮುನಿಗಳ ಪೂರ್ವಾಶ್ರಮದ ಸಂಬಂಧಿಕರ ಜತೆಗೂ ಬಿಜೆಪಿಯ ತಂಡ ಚರ್ಚೆ ನಡೆಸಿದೆ. ಶಾಸಕರಾದ ಮಹೇಶ್ ಟೆಂಗಿನಕಾಯಿ, ಅಭಯ್ ಪಾಟೀಲ್ ನಳಿನ್ ಜತೆಗೆ ಇದ್ದರು.
– ಸದಾಶಿವ ಜಾಧವ್- ಚಿಕ್ಕೋಡಿ
ರಾಜ್ಯದ ಇನ್ನಷ್ಟುಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Tue, 11 July 23