ಜನವರಿಯಲ್ಲಿ ಜಂಟಿ ಅಧಿವೇಶನ: ಬಸವರಾಜ ಬೊಮ್ಮಾಯಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 24, 2021 | 6:28 PM

ಮಾತಿಗೆ ತಪ್ಪಿದವರಿಂದ ನೀತಿ ಪಾಠ ಕಲಿಯಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಜನವರಿಯಲ್ಲಿ ಜಂಟಿ ಅಧಿವೇಶನ: ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಳಗಾವಿ: ಜನವರಿಯಲ್ಲಿ ಜಂಟಿ ಅಧಿವೇಶನ ಕರೆಯಲು ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮತಾಂತರ ಕಾಯ್ದೆ ಕುರಿತು ಚರ್ಚೆ ಮಾಡಿದ್ದೇವೆ. ವಿಧಾನಪರಿಷತ್​ನಲ್ಲಿ ಕಾಯ್ದೆ ಮಾಡುವ ಮೂಡ್​ನಲ್ಲಿ ಅವರು ಇರಲಿಲ್ಲ. ಜತೆಗೆ ಸಂಖ್ಯಾಬಲವೂ ಇರಲಿಲ್ಲ. ಒತ್ತಡದಿಂದ ಮಾಡಬಾರದು ಅಂತಾ ವಿಧೇಯಕ ಮಂಡನೆ ನಿರ್ಧಾರ ಕೈಬಿಟ್ಟೆವು ಎಂದು ಸ್ಪಷ್ಟಪಡಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ಇದ್ದಾಗ ರಾಜ್ಯದಲ್ಲಿ ಎಷ್ಟು ಅಭಿವೃದ್ಧಿ ಆಗಿತ್ತು ಮತ್ತು ಯೋಜನೆಗಳು ಪೂರ್ಣಗೊಂಡಿದ್ದವು ಎಂಬುದನ್ನು ನೋಡಿಕೊಳ್ಳಲಿ. ಮಾತಿಗೆ ತಪ್ಪಿದವರಿಂದ ನೀತಿ ಪಾಠ ಕಲಿಯಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಸುವರ್ಣಸೌಧದಲ್ಲಿ ಅಧಿವೇಶನ ನಡೆಸಬೇಕೆಂಬುದು ಜನರ ಆಸೆ ಆಗಿತ್ತು. ಅಧಿವೇಶನದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದೆ. ಕಂದಾಯ ಸಚಿವರು ಸಮರ್ಥವಾಗಿ ಉತ್ತರಗಳನ್ನು ನೀಡಿದ್ದಾರೆ. ಮಳೆ ಹಾನಿ, ಬೆಳೆ ಹಾನಿ ಪರಿಹಾರದ ಬಗ್ಗೆ ಉತ್ತರ ನೀಡಿದ್ದಾರೆ. ಸಕಾಲದಲ್ಲಿ ರೈತರಿಗೆ ನೆರವಾಗಿದ್ದ ಸರ್ಕಾರ ಅಂದರೆ ಅದು ಬಿಜೆಪಿ ಸರ್ಕಾರ. ರೈತರ ಕಷ್ಟಕ್ಕೆ ಸ್ಪಂದಿಸಿ, ಪರಿಹಾರ ನೀಡಿದ್ದೇವೆ. ರೈತರಿಗೆ ಕೊಡಬೇಕಿದ್ದ ಪರಿಹಾರದ ಮೊತ್ತವನ್ನೂ ಹೆಚ್ಚಿಸಿದ್ದೇವೆ. ಕನ್ನಡದ ಅಸ್ಮಿತೆ ಎತ್ತಿಹಿಡಿಯುವ ಕೆಲಸ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕನ್ನಡದ ನೆಲ, ಜಲದ ವಿಚಾರವಾಗಿ ನಾವೆಲ್ಲ ಒಂದಾಗಿದ್ದೇವೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಉತ್ತರ ಸಿಕ್ಕಿದೆ. ಉತ್ತರ ಕರ್ನಾಟಕದ ಅವಶ್ಯತೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಅಲ್ಲಿನ ಅಗತ್ಯಗಳನ್ನು ಪೂರ್ಣಗೊಳಿಸಲು ಮಾಡಬೇಕಿರುವ ಎಲ್ಲ ಕೆಲಸಗಳನ್ನೂ ಮಾಡುತ್ತದೆ. ವಿರೋಧ ಪಕ್ಷಗಳಿಗೆ ಉತ್ತರ ಕರ್ನಾಟಕದ ಬಗ್ಗೆ ಪ್ರೀತಿ ಇಲ್ಲ. ಹಲವು ಯೋಜನೆಗಳಿಗೆ ನಾವು ಅನುಮೋದನೆ ಕೊಟ್ಟಿದ್ದೇವೆ. ಅಧಿವೇಶನದಲ್ಲಿ ಕಾಂಗ್ರೆಸ್​ ಪಕ್ಷದ ದ್ವಿಮುಖ ನೀತಿ ಗೊತ್ತಾಗಿದೆ. ಅಧಿಕಾರದಲ್ಲಿದ್ದಾಗ ಒಂದು ರೀತಿಯಲ್ಲಿರುವ ಅವರ ಧೋರಣೆಯು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಮತ್ತೊಂದು ರೀತಿಯಾಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುವುದು. ಉತ್ತರ ಕರ್ನಾಟಕದ ಬಹುತೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ವಿರೋಧ ಪಕ್ಷದವರು ಎಲ್ಲ ವಿಷಯದಲ್ಲೂ ಧರಣಿ ಮಾಡುತ್ತಾರೆ. ಉತ್ತರ ಕರ್ನಾಟಕ ಭಾಗಕ್ಕೆ ಏನು ಮಾಡಿದ್ದೇವೆ ಎಂಬುದು ನನಗೆ ಗೊತ್ತಿದೆ. ಮಾತಿಗೆ ತಪ್ಪಿದ ಕಾಂಗ್ರೆಸ್​ನಿಂದ ನೀತಿಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಎಸ್​ಆರ್ ಬೊಮ್ಮಾಯಿ ಅಧಿಕಾರ ಕಳೆದವರು ಯಾರು: ವಿಧಾನಸಭೆಯಲ್ಲಿ ಏಟು-ಏದಿರೇಟು, ಸ್ವಾರಸ್ಯಕರ ಚರ್ಚೆ
ಇದನ್ನೂ ಓದಿ: ಕರ್ನಾಟಕದ ಆರ್ಥಿಕತೆಗೆ ಮತ್ತೊಂದು ಆತಂಕ: ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ