‘ಮಹಾ’ ಸಚಿವರಿಗೆ ಬೆಳಗಾವಿ ಎಂಟ್ರಿಗೆ ಅವಕಾಶ ನೀಡುವಂತೆ ಮನವಿ ಕೊಡಲು ಬಂದ ಎಂಇಎಸ್ ಪುಂಡರು ಪೊಲೀಸರ ವಶಕ್ಕೆ

| Updated By: Rakesh Nayak Manchi

Updated on: Dec 06, 2022 | 4:48 PM

ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಬಂದ ಎಂಇಎಸ್ ಪುಂಡರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾ ಸಚಿವರಿಗೆ ಬೆಳಗಾವಿ ಎಂಟ್ರಿಗೆ ಅವಕಾಶ ನೀಡುವಂತೆ ಮನವಿ ಕೊಡಲು ಬಂದ ಎಂಇಎಸ್ ಪುಂಡರು ಪೊಲೀಸರ ವಶಕ್ಕೆ
ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ಅನುಮತಿ ನೀಡುವಂತೆ ಮನವಿ ಕೊಡಲು ಬಂದ ಎಂಇಎಸ್ ಪುಂಡರನ್ನ ವಶಕ್ಕೆ ಪಡೆದ ಪೊಲೀಸರು
Follow us on

ಬೆಳಗಾವಿ: ಮಹಾರಾಷ್ಟ್ರ ಸಚಿವರಿಗೆ (Maharashtra minister) ಬೆಳಗಾವಿ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ (Belagavi DC) ಮನವಿ ಮಾಡಲು ಬಂದ ಎಂಇಎಸ್ (MES) ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಲ್ಲದೆ ಕಚೇರಿ ಒಳಗೆ ಎಲ್ಲರೂ ಹೋಗಿ ಮನವಿ ಕೊಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪೊಲೀಸರು ಅನುಮತಿ ನೀಡದಿದ್ದಾಗ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಲು ಆರಂಭಿಸಿದ್ದಾರೆ. ಈ ವೇಳೆ ಪೊಲೀಸರು ಪುಂಡರನ್ನು ವಶಕ್ಕೆ ಪಡೆದು ಕೊಂಡೊಯ್ದರು.

ಮಹಾರಾಷ್ಟ್ರದ ಪುಣೆ ಬಸ್ ನಿಲ್ದಾಣದಲ್ಲಿ KSRTC ಬಸ್​ಗಳಿಗೆ ಮಸಿ

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಯತ್ನಿಸುತ್ತಿರುವ ಮಹಾರಾಷ್ಟ್ರದ ವಾಹನಗಳಿಗೆ ಇಂದು ಕನ್ನಡಪರ ಸಂಘಟನೆಗಳು ಮಸಿ ಬಳಿದಿದ್ದವು. ಇದೀಗ ಮಹಾರಾಷ್ಟ್ರದ ಪುಣೆ ಬಸ್ ನಿಲ್ದಾಣದಲ್ಲಿ ಕರ್ನಾಟಕದ ಸಾರಿಗೆ ಬಸ್​ಗಳಿಗೆ ಮಸಿ ಬಳಿಯಲಾಗಿದೆ. ಕೆಎಸ್​ಆರ್​ಟಿಸಿ ಬಸ್​ಗಳ ಮೇಲೆ ಕಲ್ಲುತೂರಿ ಮಸಿ ಬಳಿಯಲಾಗಿದೆ. ಪುಣೆ ಡಿಪೋದಲ್ಲಿದ್ದ 8 ಕೆಎಸ್​​ಆರ್​ಟಿಸಿ ಬಸ್​ಗಳ ಮೇಲೆ ಕಲ್ಲುತೂರಾಟ ನಡೆಸಿ ಗಾಜುಗಳನ್ನು ಒಡೆದುಹಾಕಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಗಲಾಟೆ ನಡೆಸಿದ್ದು, ಕರ್ನಾಟಕದ ವಾಹನಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದಾರೆ. ಘಟನೆ ವೇಳೆ ಮಸಿ ಬಳಿಯಲು ಯತ್ನಿಸಿದ 7 ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಸ್ವಾರಗೇಟ್ ಬಸ್ ನಿಲ್ದಾಣ ಹಾಗೂ ಸನಾ ಪಾರ್ಕಿಂಗ್​ನಲ್ಲಿ ನಿಲುಗಡೆಯಾಗುವ ಕರ್ನಾಟಕದ ಬಸ್​ಗಳಿಗೆ ಭದ್ರತೆ ಭರವಸೆ ನೀಡಲಾಗಿದೆ.

ಇದನ್ನೂ ಓದಿ: ಬಂದೇ ಬರುವೆ ಬೆಳಗಾವಿಗೆ ಎಂದ ಮಹಾ ಸಚಿವ ದೇಸಾಯಿ: ರೊಚ್ಚಿಗೆದ್ದ ಕನ್ನಡಿಗರಿಂದ ಮಹಾರಾಷ್ಟ್ರ ಲಾರಿಗಳು ಗ್ಲಾಸ್​ ಪೀಸ್​, ಪೀಸ್

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕನ್ನಡಿಗರ ಸ್ವಾಭಿಮಾನ ಕೆಣಕಿದ ಮಹಾರಾಷ್ಟ್ರ ಸಚಿವರು, ನಾವು ಬೆಳಗಾವಿ ಬಂದೇ ಬರ್ತೇವೆ ಅಂತ ಸವಾಲ್​ ಹಾಕಿದ್ದಾರೆ. ಇದಕ್ಕೆ ಕೆರಳಿ ಕೆಂಡವಾದ ಕನ್ನಡಿಗರು ಬರ್ತೀರಾ. ಬನ್ನಿ ಒಂದು ಕೈ ನೋಡೇ ಬಿಡೋಣ ಎಂದು ಇವತ್ತು ದೊಡ್ಡ ದಂಡು ಕಟ್ಟಿಕೊಂಡು ಬೆಳಗಾವಿ ಗಡಿಗೆ ನುಗ್ಗಿದ್ದಾರೆ.  ಬೆಳಗಾವಿಗೆ ಕರವೇ ಕಾರ್ಯಕರ್ತರು ನುಗ್ಗುತ್ತಿದ್ದಂತೆ ಪೊಲೀಸರು ಹಿರೇಬಾಗೇವಾಡಿ ಟೋಲ್​ ಬಳಿ ಪೊಲೀಸ್ ಬಿಗಿ ಬಂದೂಬಸ್ತ್ ಮಾಡಿದ್ದಾರೆ. ಆದ್ರೆ ಕರವೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದೆ. ಮಹಾರಾಷ್ಟ್ರದ 5 ಲಾರಿಗಳ ಗಾಜು ಒಡೆದು, ಮಸಿ ಬಳಿದು ಆಕ್ರೋಶ ಹೊರ ಹಾಕಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಸೇರುತ್ತೇವೆ ಎಂದಿದ್ದ ಉಡುಗಿ ಗ್ರಾಮದ 17 ಕನ್ನಡಿಗರಿಗೆ ನೋಟಿಸ್ ನೀಡಿದ ಮಹಾರಾಷ್ಟ್ರ ಸರ್ಕಾರ! ಬೆಳಗಾವಿ ಗಡಿಯಲ್ಲಿ ಅಲರ್ಟ್ 

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್​ನಲ್ಲಿರುವಾಗಲೇ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ್ ಪಾಟೀಲ್, ಶಂಬುರಾಜ್ ದೇಸಾಯಿ ಮತ್ತು ಸಂಸದ ಧೈರ್ಯಶೀಲ ಮಾನೆ ಬೆಳಗಾವಿಗೆ ಆಗಮಿಸಿಯೇ ತೀರುತ್ತೇವೆ ಎಂದಿದ್ದರು. ಎಂಇಎಸ್ ಪುಂಡರ ಭೇಟಿಯಾಗಿ ನಗರದಲ್ಲಿ ಕೆಲವು ಕಡೆ ಪ್ರದಕ್ಷಿಣೆ ಹಾಕುತ್ತೇವೆ ಯಾರು ನಮ್ಮನ್ನು ತಡೆಯಲಾಗುವುದಿಲ್ಲ ಎಂದಿದ್ದರು. ಆದ್ರೆ ಈಗ ತಮ್ಮ ನಿಲುವು ಬದಲಾಯಿಸಿದ್ದಾರೆ. ಮಹಾರಾಷ್ಟ್ರ ಸಚಿವದ್ವಯರ ಬೆಳಗಾವಿ ಭೇಟಿ ರದ್ದಾಗಿದೆ.

ಅಲ್ಲದೆ, ನಾವು ಬೆಳಗಾವಿ ಭೇಟಿ ರದ್ದು ಮಾಡಿಲ್ಲ, ಮುಂದೂಡಿದ್ದೇವೆ. ಗಡಿ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಶೀಘ್ರದಲ್ಲೇ ಬೆಳಗಾವಿಗೆ ನಾವು ಬರುತ್ತೇವೆ. ಇದರ ದಿನಾಂಕವನ್ನು ಕೂಡ ನಾವು ತಿಳಿಸುತ್ತೇವೆ ಎಂದು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಬುರಾಜ್ ದೇಸಾಯಿ ಹೇಳಿಕೆ ನೀಡಿದ್ದಾರೆ,

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Tue, 6 December 22