ಶೀಘ್ರದಲ್ಲೇ ಬೆಳಗಾವಿಗೆ ಭೇಟಿ ನೀಡುತ್ತೇವೆ: ಮಹಾರಾಷ್ಟ್ರ ಸಚಿವ ದೇಸಾಯಿ
ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರು ಮತ್ತೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಭೇಟಿ ರದ್ದು ಮಾಡಿಲ್ಲ, ಮುಂದೂಡಿದ್ದೇವೆ ಅಷ್ಟೇ, ಶೀಘ್ರದಲ್ಲೇ ಜಿಲ್ಲೆಗೆ ಭೇಟಿ ನೀಡುತ್ತೇವೆ ಎಂದು ಸಚಿವ ಶಂಭುರಾಜ್ ದೇಸಾಯಿ ಹೇಳಿದ್ದಾರೆ.
ಬೆಳಗಾವಿ: ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರು (Maharashtra border In charge minister) ಬೆಳಗಾವಿಗೆ ಭೇಟಿ ನೀಡುವ ಕಾರ್ಯಕ್ರಮ ರದ್ದಾಗಿದ್ದರೂ ಅವರ ಉದ್ಧಟತನದ ಹೇಳಿಕೆ ಮಾತ್ರ ಕಡಿಮೆಯಾಗಿಲ್ಲ. ಮತ್ತೆ ಬೆಳಗಾವಿಗೆ ಭೇಟಿ (Maharashtra minister belagavi visit) ನೀಡುವುದಾಗಿ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ (Shambhuraj Deasai) ಹೇಳಿಕೆ ನೀಡುತ್ತಿದ್ದಾರೆ. ಬೆಳಗಾವಿ ಗಡಿ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ. ಬೆಳಗಾವಿ ಭೇಟಿ ರದ್ದು ಮಾಡಿಲ್ಲ, ಮುಂದೂಡಿದ್ದೇವೆ ಅಷ್ಟೇ. ಶೀಘ್ರದಲ್ಲೇ ಬೆಳಗಾವಿಗೆ ಭೇಟಿ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನ ಹಿನ್ನೆಲೆ ಬೆಳಗಾವಿ ಜಿಲ್ಲೆಗೆ ಹೋಗುತ್ತಿಲ್ಲ. ಅತೀ ಶೀಘ್ರದಲ್ಲಿ ಕರ್ನಾಟಕಕ್ಕೆ ಬಂದೇ ಬರುತ್ತೇನೆ, ಭೇಟಿ ನೀಡುವ ದಿನಾಂಕವನ್ನು ಕೂಡ ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಸಚಿವರು ಕರ್ನಾಟಕಕ್ಕೆ ಬರಲು ನಾವು ಬಿಡುವುದಿಲ್ಲ
ಬೆಳಗಾವಿಗೆ ಬರುತ್ತೇವೆ ಎಂದು ಮಹಾರಾಷ್ಟ್ರ ಸಚಿವರ ಹೇಳಿಕೆ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಮಹಾರಾಷ್ಟ್ರ ಸಚಿವರು ಯಾವತ್ತೇ ಬಂದರು ಕೂಡ ತಡೆಯುತ್ತೇವೆ. ಅವರನ್ನು ಕರ್ನಾಟಕಕ್ಕೆ ಬರಲು ನಾವು ಬಿಡುವುದಿಲ್ಲ. ಕರ್ನಾಟಕದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಬಿಡುವುದಿಲ್ಲ. ಆ ಸಚಿವರು ಮಹಾರಾಷ್ಟ್ರದಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು.
ಜನರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದ ಸಿಎಂ ಬೊಮ್ಮಾಯಿ
ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವೆ ಗಡಿ ವಿವಾದ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಹಳ ವರ್ಷಗಳಿಂದಲೂ ಗಡಿ ವಿವಾದ ಮಾಡಿಕೊಂಡು ಬರಲಾಗುತ್ತಿದೆ. ಕರ್ನಾಟಕ-ಮಹಾರಾಷ್ಟ್ರ ಜನರ ನಡುವೆ ಸಾಮರಸ್ಯ ಇದೆ. ಸುಪ್ರೀಂಕೋರ್ಟ್ನಲ್ಲೂ ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ. ಜನರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ ಎಂದರು.
ಗಡಿ ಸಾಮರಸ್ಯ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಚರ್ಚೆ
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ಸಂಬಂಧ ವಿಕಾಸಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಗಡಿ ಸಾಮರಸ್ಯ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಗೃಹ ಇಲಾಖೆಯ ಎಸಿಎಸ್ ರಜನೀಶ್ ಗೋಯಲ್, ಡಿಜಿ, ಐಜಿಪಿ ಪ್ರವೀಣ್ ಸೂದ್, ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಅಪರಾಧ ವಿಭಾಗದ ಎಡಿಜಿಪಿ ಹಿತೇಂದ್ರ ಸೇರಿದಂತೆ ಹಲವರು ಭಾಗಿಯಾದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 am, Tue, 6 December 22