Karnataka Maharashtra Border Dispute Update: ಮುಂದುವರಿದ ಮರಾಠಿಗರ ಪುಂಡಾಟ, ಕರ್ನಾಟಕ ಸಾರಿಗೆ ಬಸ್, ಬೊಮ್ಮಾಯಿ ಭಾವಚಿತ್ರಕ್ಕೆ ಮಸಿ

TV9 Web
| Updated By: ವಿವೇಕ ಬಿರಾದಾರ

Updated on:Dec 07, 2022 | 8:38 PM

Karnataka Breaking News Update: ಬೆಳಗಾವಿಯಲ್ಲಿ ಕನ್ನಡಿಗರ ಆಕ್ರೋಶದ ಕಿಚ್ಚು ಹೆಚ್ಚಾಗುತ್ತಲೇ ಇದೆ. ಇಂದು ಕೂಡ ಕರವೇ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದಾರೆ.

Karnataka Maharashtra Border Dispute Update: ಮುಂದುವರಿದ ಮರಾಠಿಗರ ಪುಂಡಾಟ, ಕರ್ನಾಟಕ ಸಾರಿಗೆ ಬಸ್, ಬೊಮ್ಮಾಯಿ ಭಾವಚಿತ್ರಕ್ಕೆ ಮಸಿ
ಕರ್ನಾಟಕ ಸಾರಿಗೆ ಬಸ್​ಗೆ ಮಸಿ ಬಳಿದ ಕಿಡಿಗೇಡಿಗಳು.

Karnataka Maharashtra Border Issue Updates: ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್​ ಅಂಗಳದಲ್ಲಿದೆ. ಮತ್ತೊಂದೆಡೆ ಸಿಎಂ ಏಕನಾಥ್ ಶಿಂಧೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದಾರೆ. ಇದರ ನಡುವೆಯೂ ಬೆಳಗಾವಿಯಲ್ಲಿ ಕನ್ನಡಿಗರ ಆಕ್ರೋಶದ ಕಿಚ್ಚು ಹೆಚ್ಚಾಗುತ್ತಲೇ ಇದೆ. ಇಂದು ಕೂಡ ಕರವೇ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಪುಣೆಯಲ್ಲೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ಕೆಎಸ್​​ಆರ್​ಟಿಸಿ ಬಸ್​​ಗೆ ಮಸಿ ಬಳೆಯುವ ಮೂಲಕ ಪುಂಡಾಟ ಮೆರೆದಿದ್ದಾರೆ. ಈ ಗಡಿ ಕಿಚ್ಚು ಇಂದು ಮತ್ತಷ್ಟು ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡುವ ಸಾಧ್ಯತೆ ಇದೆ.

LIVE NEWS & UPDATES

The liveblog has ended.
  • 07 Dec 2022 08:35 PM (IST)

    Karnataka Maharashtra Border Dispute Update: ಗಡಿ ಕ್ಯಾತೆ ತೆಗೆಯುವುದು ಮಹಾರಾಷ್ಟ್ರದ ವಿಪಕ್ಷಗಳಿಗೆ ಚಾಳಿಯಾಗಿದೆ: ಶಿವಕುಮಾರ ಉದಾಸಿ

    ನಚದೆಹಲಿ: ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆ ಇಂದು (ಡಿ.7) ಸಂಸತ್ತಿನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವನ್ನು ಪ್ರಸ್ತಾಪಸಿದ ವಿಚಾರವಾಗಿ ಬಿಜೆಪಿ ಸಂಸದ ಶಿವಕುಮಾರ ಉದಾಸಿ ಮಾತನಾಡಿ ಸುಪ್ರಿಯಾ ಅವರಿಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪಕ್ಕೆ ಬೇರೆ ವಿಷಯ ಇತ್ತು. ಆದರೂ ಸುಪ್ರಿಯಾ ಸುಳೆ ಗಡಿ ವಿಷಯವನ್ನೇ ಪ್ರಸ್ತಾಪಿಸಿದರು. ಗಡಿ ವಿವಾದವನ್ನುಬಮೊದಲು ಕರ್ನಾಟಕ ಸಿಎಂ ಆರಂಭ ಮಾಡಿಲ್ಲ. ಮಹಾರಾಷ್ಟ್ರದ ವಿಪಕ್ಷಗಳಿಗೆ ಇದು ಚಾಳಿಯಾಗಿದೆ  ಎಂದು ನವದೆಹಲಿಯಲ್ಲಿ ವಾಗ್ದಾಳಿ ಮಾಡಿದರು.

    ಗಡಿ ವಿವಾದ ವಿಚಾರ ಕೋರ್ಟ್​​ನಲ್ಲಿರುವುದರಿಂದ ಚರ್ಚೆ ಮಾಡುವುದು ಬೇಡ. ಲೋಕಸಭೆಯಲ್ಲಿ ಚರ್ಚೆ ಬೇಡವೆಂದು ಹೇಳಿದ್ದೇನೆ. ಮೊದಲು ನಮ್ಮ ಕರ್ನಾಟಕದ ವಾಹನಗಳಿಗೆ ಮಸಿ ಬಳಿದಿದ್ದಾರೆ. ಮಹಾರಾಷ್ಟ್ರದ ಮಂತ್ರಿಗಳು ಕರ್ನಾಟಕಕ್ಕೆ ಬರುತ್ತೇವೆ ಎಂದಿದ್ದಾರೆ. ಕಾಲು ಕೆರೆದುಕೊಂಡು ನಾವು ಮಹಾರಾಷ್ಟ್ರದೊಂದಿಗೆ ಹೋಗಿಲ್ಲ. ಕನ್ನಡಿಗರ ರಕ್ಷಣೆ ನಮ್ಮ ಹೊಣೆ ಅನ್ನೋದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಎಲ್ಲವೂ ಶಾಂತವಾಗಿರುವಾಗ ಮಹಾರಾಷ್ಟ್ರ ವಿಪಕ್ಷಗಳು ಕಿಡಿ ಹಚ್ಚಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • 07 Dec 2022 05:57 PM (IST)

    Karnataka Maharashtra Border Dispute Live: ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳುವುದು ಬೇಡ ಡಾ. ಅಶ್ವತ್ಥ್

    ಸುಪ್ರೀಂಕೋರ್ಟ್​​ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಬೇಕು. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳುವುದು ಬೇಡ ಎಂದು ಡಾ. ಅಶ್ವತ್ಥ್ ನಾರಾಯಣ ಹೇಳಿದರು. ಪರಸ್ಪರ ಗೌರವದಿಂದ ಎರಡೂ ರಾಜ್ಯಗಳಲ್ಲಿ ಶಾಂತಿ ಕಾಪಾಡೋಣ. ಪರಸ್ಪರ ಶಾಂತಿ ಕಾಪಾಡಲು ಈಗಾಗಲೇ ಸಂದೇಶ ಕೊಡಲಾಗಿದೆ. ಸರ್ಕಾರದ ನಿಲುವನ್ನು ಸಿಎಂ ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದ್ದಾರೆ. ಕೆಣಕುವುದು, ಕಾದಾಡುವುದು, ಕೆಡವೋದು ಅವಶ್ಯಕತೆಯೇ ಇಲ್ಲ ಎಂದು ಹೇಳಿದರು.

  • 07 Dec 2022 05:17 PM (IST)

    Karnataka Maharashtra Border Dispute Live: ಮಹಾರಾಷ್ಟ್ರದವರು ಗಲಾಟೆ ಬಿಟ್ಟು ರಾಜ್ಯದ ಹಿತ ಕಾಪಾಡಬೇಕು

    ಮಹಾರಾಷ್ಟ್ರದವರು ಗಲಾಟೆ ಬಿಟ್ಟು ರಾಜ್ಯದ ಹಿತ ಕಾಪಾಡಬೇಕು ಎಂದು ಚಾಮರಾಜನಗರದಲ್ಲಿ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದರು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಅಲ್ಲಿ ಗೌರವದಿಂದ ಬದುಕುತ್ತಿದ್ದಾರೆ. ಗಡಿ ವಿವಾದ ಕುರಿತು ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ಶುರುವಾಗಿದೆ. ಮಹಾಜನ್​ ವರದಿಯ ಸಾಧಕ-ಬಾಧಕ ಚರ್ಚೆ ಆಗ್ತಿದೆ. ಈ ಬಗ್ಗೆ ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

  • 07 Dec 2022 04:37 PM (IST)

    Karnataka Maharashtra Border Dispute Live: ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ; ಎಡಿಜಿಪಿ ಅಲೋಕ್ ಕುಮಾರ್

    ಬೆಳಗಾವಿಗೆ ಬರುವುದಾಗಿ ಮಹಾರಾಷ್ಟ್ರದ ಸಚಿವರು ಹೇಳಿದ್ದರು. ಅವರು ಘೋಷಣೆ ಮಾಡಿದ ಬಳಿಕ ವಾತಾವರಣ ಪ್ರಕ್ಷುಬ್ದ ಆಗಿದೆ. ನಿನ್ನೆ ಪ್ರತಿಭಟನೆಗೆ ಮುಂದಾಗಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಚಿಕ್ಕಮಗಳೂರಿನಲ್ಲಿ ಟಿವಿ9ಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದರು. ಹೊಡೆದಾಟ, ಬಡಿದಾಟಕ್ಕೆ ಯಾರಿಗೂ ಆಸ್ಪದ ಕೊಟ್ಟಿಲ್ಲ. ಮಹಾರಾಷ್ಟ್ರ ಜನರಿಗೆ ಹಲ್ಲೆ ಆಗಿದೆ ಅಂತಾ ಕೆಲವೆಡೆ ಬಿಂಬಿಸಲಾಗ್ತಿದೆ. ಆ ರೀತಿ ಪ್ರಕರಣ ಎಲ್ಲೂ ಕೂಡ ನಡೆದಿಲ್ಲ ಎಂದು ಹೇಳಿದರು.

  • 07 Dec 2022 04:01 PM (IST)

    Karnataka Maharashtra Border Dispute Live: ಕರ್ನಾಟಕ ಸಾರಿಗೆ ಬಸ್​ಗೆ ಮತ್ತೆ ಮಸಿ ಬಳಿದ ಕಿಡಿಗೇಡಿಗಳು

    ಮಹಾರಾಷ್ಟ್ರದಲ್ಲಿ ಮರಾಠಿಗರ ಅಟ್ಟಹಾಸ ಮುಂದುವರೆದಿದೆ. ಸೊಲ್ಲಾಪುರದಿಂದ ವಿಜಯಪುರಕ್ಕೆ ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್​ಗೆ ಮಸಿ ಬಳೆದಿದ್ದಾರೆ. ಪ್ರಹಾರ ಸಂಘಟನೆ ಕಾರ್ಯಕರ್ತರಿಂದ ಈ ಕೆಲಸ ಮಾಡಲಾಗಿದೆ. ಸಿಎಂ ಬೊಮ್ಮಾಯಿ ಭಾವಚಿತ್ರಕ್ಕೂ ಮಸಿ ಬಳಿಯಲಾಗಿದೆ.

  • 07 Dec 2022 03:48 PM (IST)

    Karnataka Maharashtra Border Dispute Live: ಸುಳ್ಳು ವದಂತಿ ಹಬ್ಬಿಸುತ್ತಿರುವ ಕಿಡಿಗೇಡಿಗಳು; ಸ್ಪಷ್ಟನೆ ನೀಡಿದ ಎಸ್​ಪಿ ಸಂಜೀವ್ ಪಾಟೀಲ್

    ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಬೆಳಗಾವಿಯಲ್ಲಿ ಮಹಾರಾಷ್ಟ್ರದ ಭಕ್ತರ ಮೇಲೆ ಹಲ್ಲೆ ಆಗಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಹಲ್ಲೆ ಆಗಿದೆ ಎಂದು ಸ್ವರಾಜ್ಯ ಸಂಘಟನೆ ಕಾರ್ಯಕರ್ತ ಆರೋಪಿಸಿದ್ದರು. ಆದರೆ ಈ ಕುರಿತಾಗಿ ಎಸ್​ಪಿ ಡಾ. ಸಂಜೀವ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದವರ ಮೇಲೆ ಹಲ್ಲೆ ಆಗಿಲ್ಲ. ಈ ರೀತಿಯ ಯಾವುದೇ ಪ್ರಕರಣ ಆಗಿಲ್ಲ. ಎರಡೂ ಕಡೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.

  • 07 Dec 2022 03:12 PM (IST)

    Karnataka Maharashtra Border Dispute Live: ಮಹಾರಾಷ್ಟ್ರ ಬಸ್‌ಗಳಿಗೆ ಯಲ್ಲಮ್ಮನ ಗುಡ್ಡದಲ್ಲಿ ಪೊಲೀಸ್​ ಭದ್ರತೆ

    ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ವಿಚಾರವಾಗಿ ಮಹಾರಾಷ್ಟ್ರ ಬಸ್‌ಗಳಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಪೊಲೀಸ್​ ಭದ್ರತೆ ನೀಡಲಾಗಿದೆ. ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.  ಎರಡು ಕೆಎಸ್‌ಆರ್‌ಪಿ ತುಕಡಿ, ಓರ್ವ ಡಿವೈಎಸ್‌ಪಿ, ಮೂವರು ಸಿಪಿಐ ಸೇರಿ ನೂರಕ್ಕೂ ಅಧಿಕ ಪೊಲೀಸರಿಂದ ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ನೀಡಲಾಗಿದೆ.

  • 07 Dec 2022 02:47 PM (IST)

    Karnataka Maharashtra Border Dispute Live: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಪ್ರಯಾಣಿಕರ ಪರದಾಟ

    ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಹಿನ್ನಲೆ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕರ್ನಾಟಕದ ಅಥಣಿ, ಚಿಕ್ಕೋಡಿ, ಕಾಗವಾಡ ಭಾಗದಿಂದ ಮಹಾರಾಷ್ಟ್ರದ ಕಡೆಗೆ ಜನರು ಹೋಗುತ್ತಿದ್ದರು. ನಿನ್ನೆ ಕರ್ನಾಟಕದ ಸಾರಿಗೆ ಬಸ್​​ಗಳ ಮೇಲೆ ಮಹಾರಾಷ್ಟ್ರದ ಪುಂಡರಿಂದ ಮಸಿ ಬಳೆಯಲಾಗಿದೆ. ಕರ್ನಾಟಕದ ಗಡಿ ವರೆಗೆ ಸಾರಿಗೆ ವ್ಯವಸ್ಥೆ ಇದ್ದರು ಮಹಾರಾಷ್ಟ್ರದ ಸಾರಿಗೆ ವಾಹನಗಳು ಸರಿಯಾದ ಸಮಯಕ್ಕೆ ಬಾರದೇ ಗಡಿಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.

  • 07 Dec 2022 02:44 PM (IST)

    Karnataka Maharashtra Border Dispute Live: ತಂಟೆ ತಕರಾರು ಬಂದ್ರೆ ಚನ್ನಮ್ಮ, ರಾಯಣ್ಣನ ಅಭಿಮಾನಿಗಳು ಒಂದಿಂಚು ಭೂಮಿಯನ್ನೂ ಕೊಡಲ್ಲ

    ಗದಗ: ಮಹಾರಾಷ್ಟ್ರ ಸರ್ಕಾರವೇ ಮಹಾಜನ್ ಸಮಿತಿ ನೇಮಕ ಮಾಡಿತ್ತು. ಸಮಿತಿ ವರದಿ ಪ್ರಕಾರ ಬೆಳಗಾವಿ ಸೇರಿದಂತೆ ತಜ್ ಪ್ರದೇಶ, ಸಾಂಗ್ಲಿ ಕರ್ನಾಟಕ್ಕೆ ಸೇರಬೇಕು. ಅವರ ಸಮೀತಿಯಲ್ಲೇ ಬೆಳಗಾವಿ ನಮ್ಮದು ಅಂತಾ ಆಗಿದೆ. ವಿನಾಕಾರಣ ಮಹಾರಾಷ್ಟ್ರ ಸರ್ಕಾರ ಗಡಿ ಖ್ಯಾತೆ ತೆಗೆಯವ ಪ್ರಯತ್ನ ಮಾಡ್ಬಾರ್ದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಕಿಡಿ ಕಾರಿದ್ದಾರೆ. ತಂಟೆ ತಕರಾರು ಬಂದ್ರೆ ಚನ್ನಮ್ಮ, ರಾಯಣ್ಣನ ಅಭಿಮಾನಿಗಳು ಒಂದಿಂಚು ಭೂಮಿಯನ್ನೂ ಕೊಡಲ್ಲ. ಗಡಿ ವಿಷಯವಾಗಿ ಸರ್ಕಾರದ ಪರವಾಗಿದ್ದೇವೆ‌‌, ದಿಟ್ಟತನದ ನಿರ್ಧಾರ ತೆಗೆದುಕೊಳ್ಳಲಿ ಎಂದರು.

  • 07 Dec 2022 02:03 PM (IST)

    Karnataka Maharashtra Border Dispute Live: ಲೋಕಸಭೆಯಲ್ಲಿ ಕರ್ನಾಟಕ ಮಹಾರಾಷ್ಟ್ರಗಳ ಗಡಿ ಚರ್ಚೆ

    ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ಪ್ರಕರಣ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. 2 ರಾಜ್ಯಗಳ ಗಡಿ ವಿವಾದವನ್ನು ಲೋಕಸಭೆಯಲ್ಲಿ ಎನ್​​ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರಸ್ತಾಪ ಮಾಡಿದ್ದಾರೆ. ಮಹಾರಾಷ್ಟ್ರದ ವಿರುದ್ಧ ಕರ್ನಾಟಕ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ. ಗಡಿ ವಿಚಾರದಲ್ಲಿ ಒಡಕುಂಟು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಉಭಯ ರಾಜ್ಯ ಸರ್ಕಾರಗಳಿಂದ ಒಡಕುಂಟು ಮಾಡಲು ಯತ್ನ ನಡೆಯುತ್ತಿದೆ. ಮಹಾರಾಷ್ಟ್ರದ ವಿರುದ್ಧ ಕರ್ನಾಟಕ ಸಿಎಂ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಕರ್ನಾಟಕದಲ್ಲಿ ಮಹಾರಾಷ್ಟ್ರದವರ ಮೇಲೆ ಹಲ್ಲೆ ನಡೆದಿದೆ ಎಂದು ಸುಪ್ರಿಯಾ ಸುಳೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

    ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯ ಸಂಸದ ಶಿವಕುಮಾರ್ ಉದಾಸಿ, ಗಡಿ ವಿವಾದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿದೆ. ಹೀಗಾಗಿ ಈಗ ಗಡಿ ಬಗ್ಗೆ ಎನ್​ಸಿಪಿ ಮಾತನಾಡುವುದು ಸರಿಯಲ್ಲ ಎಂದರು. ಆಗ ಮಧ್ಯಪ್ರವೇಶ ಮಾಡಿ ಮಾತಾಡಿದ ಲೋಕಸಭಾ ಸ್ಪೀಕರ್​​, ಗಡಿ ವಿವಾದ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದರು.

  • 07 Dec 2022 01:41 PM (IST)

    Karnataka Maharashtra Border Dispute Live: ನಾಳೆ 31 ಜಿಲ್ಲೆಗಳಲ್ಲೂ ಕರವೇ ಕಾರ್ಯಕರ್ತರಿಂದ ಬೃಹತ್ ರ‍್ಯಾಲಿ

    ಮಹಾರಾಷ್ಟ್ರದಲ್ಲಿ KSRTC ಬಸ್​ಗಳ ಮೇಲೆ ಕಲ್ಲುತೂರಾಟ ಕೇಸ್​ಗೆ ಸಂಬಂಧಿಸಿ ನಾಳೆ 31 ಜಿಲ್ಲೆಗಳಲ್ಲೂ ಕರವೇ ಕಾರ್ಯಕರ್ತರು ಬೃಹತ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ನಾಳೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಕರವೇ ತೀರ್ಮಾನ ಮಾಡಿದೆ ಎಂದು ಬೆಂಗಳೂರಿನಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

    ಬೆಂಗಳೂರು ನಗರದಲ್ಲೂ ನಾಳೆ ಬೆಳಗ್ಗೆ 11 ಗಂಟೆಗೆ ರ‍್ಯಾಲಿ ನಡೆಸುತ್ತೇವೆ. ರಾಜ್ಯದ ವಾಹನಗಳಿಗೆ ಮಸಿ, ಹಾನಿ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ರಾಜ್ಯದ ವಾಹನಗಳಿಗೆ ಹಾನಿ ಮಾಡಿದ್ರೆ ಮಹಾರಾಷ್ಟ್ರ ವಾಹನ ಬಿಡುವುದಿಲ್ಲ. ತೆಪ್ಪಗಿದ್ದರೆ ಸರಿ, ಇಲ್ಲದಿದ್ದರೆ ಕನ್ನಡಿಗರು ಏನು ಅಂತಾ ತೋರಿಸಬೇಕಾಗುತ್ತೆ. ನಾಳೆ ಸುಪ್ರೀಂಕೋರ್ಟ್​​ನಲ್ಲಿ ಗಡಿ ವಿವಾದದ ವಿಚಾರಣೆ ನಡೆಯಲಿದೆ. ಸುಪ್ರೀಂಕೋರ್ಟ್​​ನಲ್ಲಿ ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದರು.

  • 07 Dec 2022 01:31 PM (IST)

    Karnataka Maharashtra Border Dispute Live: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ

    ಮಹಾರಾಷ್ಟ್ರದ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಇದೇ ರೀತಿ ಮಾಡಿಕೊಂಡು  ಬಂದಿದೆ. ಮಹಾಜನ್ ವರದಿಯನ್ನು ಮಹಾರಾಷ್ಟ್ರ ಸರ್ಕಾರ ಒಪ್ಪಿಲ್ಲಾ. ಮಹಾಜನ್ ಆಯೋಗವನ್ನ ರಚನೆ ಮಾಡಿಸಿದವರು ಮಹಾರಾಷ್ಟ್ರದವರು. ನಂತರ ಮಹಾಜನ್ ಆಯೋಗದ ವರದಿಗೆ ತಕರಾರು ಮಾಡಿದರು. ದೇಶದಲ್ಲಿ ಶಾಂತಿಯಿಂದ ಇರಬೇಕೆಂಬ ಇಚ್ಛೆ ಮಹಾರಾಷ್ಟ್ರದವರಿಗಿಲ್ಲ. ಕರ್ನಾಟಕ ಮಹಾರಾಷ್ಟ್ರ ಕನ್ನಡ ಮರಾಠಿ ಎಂಬ ಕ್ಷುಲ್ಲಕ ವಿಚಾರ ಮಾಡಿಕೊಂಡು ಬಂದಿದ್ದಾರೆ. ಈ ಮೂಲಕ ಮಹಾರಾಷ್ಟ್ರದವರು ದೇಶದಲ್ಲಿ ಅಶಾಂತಿಯನ್ನ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

  • 07 Dec 2022 12:46 PM (IST)

    Karnataka Maharashtra Border Dispute Live: ಮಹಾರಾಷ್ಟ್ರದವರು ಏನು ಬೇಕಾದರೂ ಮಾತನಾಡಲಿ, ನಾವು ಸಂಯಮದಿಂದ ಇರೋಣ

    ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ವಿಚಾರ ಸಂಬಂಧ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಹಾರಾಷ್ಟ್ರದವರು ಏನು ಬೇಕಾದರೂ ಮಾತನಾಡಲಿ. ನಾವು ಸಂಯಮದಿಂದ ಇರೋಣ. ನೆಲ, ಜಲ, ಭಾಷೆ ಹಿತಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

    ಮಹಾರಾಷ್ಟ್ರ ಸರ್ಕಾರ ಜೊತೆ ನಮ್ಮ ಸಿಎಂ ಸಹ ಮಾತನಾಡಿದ್ದಾರೆ. 2 ರಾಜ್ಯಗಳ ಸಿಎಸ್​, ಪೊಲೀಸ್ ಅಧಿಕಾರಿಗಳ ಜತೆ ಸಭೆ ಮಾಡಿದ್ದೇವೆ. ನಾವು ಮಾತಿನಲ್ಲಿ ತೋರಿಸಲ್ಲ, ನಮ್ಮ ನಡವಳಿಕೆಯಲ್ಲಿ ತೋರಿಸ್ತೇವೆ. ಎಲ್ಲಾ ಕಡೆಯೂ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾವ ಸಚಿವರು ಎಲ್ಲಿಗೆ ಬೇಕಾದ್ರೂ ಹೋಗಬಹುದು, ಬರಬಹುದು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಬರುವುದು ಸರಿಯಲ್ಲ. ಬೆಳಗಾವಿಗೆ ಬಂದು ಪ್ರಚೋದನೆ ಮಾಡುವ ಅವಶ್ಯಕತೆ ಇಲ್ಲ ಎಂದರು.

  • 07 Dec 2022 12:41 PM (IST)

    Karnataka Maharashtra Border Dispute Live: ಗಡಿ ವಿವಾದದಿಂದ ಸಾಮಾನ್ಯ ಜನರಿಗೆ ಸಮಸ್ಯೆ

    ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿ ಗಡಿ ವಿವಾದದಿಂದ ಸಾಮಾನ್ಯ ಜನರಿಗೆ ತುಂಬಾ ಸಮಸ್ಯೆ ಆಗ್ತಿದೆ. ಕೂಡಲೇ ಸಿಎಂ ಬೊಮ್ಮಾಯಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ. ಪ್ರತಿದಿನ ಸಾಂಗ್ಲಿ, ಕೊಲ್ಹಾಪುರಕ್ಕೆ ಓಡಾಡಲು ತೊಂದರೆ ಆಗುತ್ತಿದೆ. ರಾಜ್ಯ ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದು ಏನು ಮಾಡುತ್ತಾರೆ? ರಾಜಕೀಯ ಕಾರಣ ಇರಬಹುದು, ಆದ್ರೆ ಹಿಂದೆ ಇದ್ದ ಪರಿಸ್ಥಿತಿ ಬೇರೆ ಎಂದರು.

  • 07 Dec 2022 12:36 PM (IST)

    Karnataka Maharashtra Border Dispute Live: ಮಸಿ ಬಳಿದಿರುವುದನ್ನ ಖಂಡಿಸಿ ಕರವೇ ಶಿವರಾಮೇಗೌಡ ಬಣದಿಂದ ಪ್ರತಿಭಟನೆ

    ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿ ಮಸಿ ಬಳಿದಿರುವುದನ್ನ ಖಂಡಿಸಿ ಕರವೇ ಶಿವರಾಮೇಗೌಡ ಬಣದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಳಗಾವಿ ನ್ಯೂ ಸರ್ಕ್ಯೂಟ್ ಹೌಸ್‌ದಿಂದ ಬಸ್ ನಿಲ್ದಾಣದತ್ತ ಪ್ರತಿಭಟನಾ ಮೆರವಣಿಗೆ ಹೊರಟಿದೆ. ಮಹಾರಾಷ್ಟ್ರ ಸರ್ಕಾರ, ಶಿವಸೇನೆ ಪುಂಡರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಲಾಗುತ್ತಿದೆ.

  • 07 Dec 2022 12:34 PM (IST)

    Karnataka Maharashtra Border Dispute Live: ಕೇಂದ್ರ ಬಸ್ ನಿಲ್ದಾಣದಲ್ಲಿ 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಬೆಳಗಾವಿ ನಗರದಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ಹಿನ್ನೆಲೆ ಕೇಂದ್ರ ಬಸ್ ನಿಲ್ದಾಣದಲ್ಲಿ 1 ಕೆಎಸ್‌ಆರ್‌ಪಿ ತುಕಡಿ ಸೇರಿ 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಕನ್ನಡಪರ ಹೋರಾಟಗಾರರು ಬಸ್ ನಿಲ್ದಾಣಕ್ಕೆ ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

  • 07 Dec 2022 12:25 PM (IST)

    Karnataka Maharashtra Border Dispute Live: ಎಂಇಎಸ್​​ ಕಿಡಿಗೇಡಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ

    ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿ ಇಂಧನ ಸಚಿವ ಸುನೀಲ್​ ಕುಮಾರ್​ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಭಾಷೆ, ನೆಲ, ಜಲದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಶಾಂತಿ ಕದಡುವ ಚಟುವಟಿಕೆಗಳನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಎಂಇಎಸ್​​ ಕಿಡಿಗೇಡಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕನ್ನಡ ಭಾಷೆ, ಸಂಸ್ಕೃತಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

  • 07 Dec 2022 12:14 PM (IST)

    Karnataka Maharashtra Border Dispute Live: ಮಹಾರಾಷ್ಟ್ರದಲ್ಲಿರುವ ಕರ್ನಾಟಕ ಬ್ಯಾಂಕ್‌ನ ಶಾಖೆಗೆ ಮಸಿ

    ಮಹಾರಾಷ್ಟ್ರದ ನಾಸಿಕ್​ನಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದೆ. ಸ್ವರಾಜ್ಯ ಸಂಘಟನೆ ಕಾರ್ಯಕರ್ತರು ಕರ್ನಾಟಕ ಬ್ಯಾಂಕ್‌ಗೆ ಕಪ್ಪು ಮಸಿ ಬಳಿದಿದ್ದಾರೆ. ನಾಸಿಕ್ ನಲ್ಲಿರುವ ಕರ್ನಾಟಕ ಬ್ಯಾಂಕ್‌ನ ಶಾಖೆಯ ಬೋರ್ಡ್‌ ಹಾಗೂ ಬಾಗಿಲಿಗೆ ಕಪ್ಪು ಮಸಿ ಮೆತ್ತಲಾಗಿದೆ. ಕೈಯಲ್ಲಿ ಭಗವಾ ಧ್ವಜ ಹಿಡಿದು ಕರ್ನಾಟಕ‌ ಸರ್ಕಾರದ ವಿರುದ್ಧ ಘೋಷಣೆ‌ ಕೂಗಿ ಕಿಡಿಗೇಡಿಗಳು ಪುಂಡಾಟಿಕೆ ಮೆರೆಯುತ್ತಿದ್ದಾರೆ.

  • 07 Dec 2022 12:03 PM (IST)

    Karnataka Maharashtra Border Dispute Live: ಗಡಿ ಭಾಗದಲ್ಲಿ ಪೊಲೀಸ್ ಅಲರ್ಟ್

    ಬೆಳಗಾವಿ ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆ ಗಡಿ ಭಾಗದಲ್ಲಿ ಪೊಲೀಸರು ಹೈ ಅಲರ್ಟ್ ಕೈಗೊಂಡಿದ್ದಾರೆ. ಬೆಳಗಾವಿ ಬಳಿ ಬಾಚಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದ್ದಾರೆ. ಮಾಹಾರಾಷ್ಟ್ರದಿಂದ ಬರೋ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅನುಮಾನಾಸ್ಪದವಾಗಿ ಕಂಡು ಬರೋ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.

  • 07 Dec 2022 11:53 AM (IST)

    Karnataka Maharashtra Border Dispute Live: ಜೈ ಭವಾನಿ ಜೈ ಶಿವಾಜಿ ಅಂತಾ ಕೆಎಸ್‌ಆರ್‌ಟಿಸಿ ಬಸ್​ಗಳಿಗೆ ಮಸಿ

    ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರು ಮತ್ತೊಂದು ಬಸ್‌ಗೆ ಮಸಿ ಬಳಿದಿದ್ದಾರೆ. ಮಹಾರಾಷ್ಟ್ರದ ಭಾರಾಮತಿಯಲ್ಲಿ ಡಿಪೋಗೆ ನುಗ್ಗಿ ಜೈ ಮಹಾರಾಷ್ಟ್ರ ಅಂತಾ ಮಸಿ ಬಳಿದಿದ್ದಾರೆ. ಈ ಬಗ್ಗೆ ಟಿವಿ9ಗೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಭರಮಪ್ಪ ಮಾಹಿತಿ ನೀಡಿದ್ದು, ಶಿವಸೇನೆ ಕಾರ್ಯಕರ್ತರು ಕೈಯಲ್ಲಿ ಬಾವುಟ ಹಿಡಿದುಕೊಂಡು, ಜೈ ಭವಾನಿ ಜೈ ಶಿವಾಜಿ ಅಂತಾ ಬಂದು ಜೈ ಮಹಾರಾಷ್ಟ್ರ ಅಂತಾ ಬಸ್‌ಗೆ ಕಪ್ಪು ಮಸಿ ಬಳಿದ್ರೂ. ಪೊಲೀಸರು ಬರ್ತಾಯಿದ್ದಂತೆ ಎಲ್ಲರೂ ಓಡಿ ಹೋದ್ರೂ‌. ಪೆಟ್ರೋಲ್‌ದಿಂದ ಮಸಿಯನ್ನ ಅಳಸಿಕೊಂಡು ವಾಪಾಸ್ ಆಗಿದ್ದೇವೆ. ಪೊಲೀಸರ ಸಹಾಯದಿಂದ ಬೆಳಗ್ಗೆ ನಾಲ್ಕು ಗಂಟೆಗೆ ಭಾರಾಮತಿ ಬಿಟ್ಟು ಬೆಳಗಾವಿಗೆ ಬಂದಿದ್ದೇವೆ ಎಂದರು.

  • 07 Dec 2022 11:47 AM (IST)

    Karnataka Maharashtra Border Dispute Live: ಮಹಾರಾಷ್ಟ್ರಕ್ಕೆ ತೆರಳುವ ಕೆಎಸ್​​ಆರ್​ಟಿಸಿ ಬಸ್​ಗಳ​​ ಸಂಚಾರ ಸ್ಥಗಿತ

    ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಮಹಾರಾಷ್ಟ್ರಕ್ಕೆ ತೆರಳುವ ಕೆಎಸ್​​ಆರ್​ಟಿಸಿ ಬಸ್​ಗಳ​​ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ರಾಜ್ಯಕ್ಕೆ ಆಗಮಿಸುವ ಮಹಾರಾಷ್ಟ್ರ ಸಾರಿಗೆ ಸಂಚಾರವೂ ಕೂಡ ಸ್ಥಗಿತಗೊಂಡಿದೆ. ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ 150ಕ್ಕೂ ಹೆಚ್ಚು ಬಸ್ ಸಂಚಾರ ಸ್ಥಗಿತವಾಗಿದೆ. ಬೆಳಗಾವಿ ಸೇರಿ ರಾಜ್ಯದ ಹಲವು ಭಾಗದಿಂದ ತೆರಳಬೇಕಿದ್ದ ಬಸ್​ಗಳು, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರಬೇಕಿದ್ದ 100ಕ್ಕೂ ಹೆಚ್ಚು ಬಸ್​ಗಳು ಬೆಳಗಾವಿ ಪೊಲೀಸರ ಸೂಚನೆ ಮೇರೆಗೆ ಸಂಚಾರ ಬಂದ್​​ ಮಾಡಿವೆ. ಪರಿಸ್ಥಿತಿ ಸುಧಾರಿಸುವವರೆಗೂ ಬಸ್ ಸಂಚಾರ ಸ್ಥಗಿತಕ್ಕೆ ನಿರ್ಧಾರ ಮಾಡಲಾಗಿದೆ. ಮಹಾರಾಷ್ಟ್ರ ಗ್ರಾಮೀಣ ಭಾಗಕ್ಕೆ ಎಂದಿನಂತೆ ಬಸ್​​ಗಳ ಸಂಚಾರ ಇರುತ್ತದೆ.

  • 07 Dec 2022 11:39 AM (IST)

    Karnataka Maharashtra Border Dispute Live: ಕರ್ನಾಟಕ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು

    ಮಹಾರಾಷ್ಟ್ರದಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳ ಮೇಲೆ ಕಲ್ಲುತೂರಾಟ ನಡೆಯುತ್ತಿರುವ ಸಂಬಂಧ ಎಂಎನ್​ಎಸ್​, ಶಿವಸೇನೆ ವಿರುದ್ಧ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಎಂಎನ್​ಎಸ್​ ಅಸ್ತಿತ್ವ ಕಂಡಕೊಳ್ಳಲು ಈ ರೀತಿ ಮಾಡುತ್ತಿದೆ. ಮಹಾರಾಷ್ಟ್ರದವರು ಕನ್ನಡಿಗರ ರೊಚ್ಚಿಗೇಳಿಸುವ ಕೆಲಸ ಮಾಡಬಾರದು ಎಂದರು.

  • 07 Dec 2022 11:33 AM (IST)

    Karnataka Maharashtra Border Dispute Live: ಸರ್ವಪಕ್ಷ ಸಭೆ ಕರೆಯುವ ಸಂದರ್ಭ ಬಂದಿಲ್ಲ ಎಂದ ಕಾರಜೋಳ

    ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದಕ್ಕೆ ಸಂಬಂಧಿಸಿ ಈ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆಗೆ ಆಗ್ರಹಿಸಿದ್ದರು. ಈ ಸಂಬಂಧ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಸರ್ವಪಕ್ಷ ಸಭೆ ಕರೆಯುವ ಸಂದರ್ಭ ಬಂದಿಲ್ಲ. ಸಿದ್ದರಾಮಯ್ಯ ಬಯಸಿದಂತೆ ರಾಜಕಾರಣ ಮಾಡಲು ಸಾಧ್ಯವಿಲ್ಲ. ಗಡಿ ವಿವಾದ ಬಗ್ಗೆ ಯಾವಾಗ ಸಭೆ ಕರೆಯಬೇಕೆಂದು ನಮಗೆ ಗೊತ್ತು. ಯಾವಾಗ ಸರ್ವಪಕ್ಷ ಕರೆಯಬೇಕು ಅನ್ನೋದು ಆಡಳಿತ ಪಕ್ಷಕ್ಕೆ ಗೊತ್ತು. ಅವರು ನಾಟಕ ಮಾಡಿದ್ರೆ ನಾವು ಪಾತ್ರಧಾರಿಗಳಾಗಬೇಕಿಲ್ಲ. ಅಂತಹ ಸಂದರ್ಭ ಬಂದ್ರೆ ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ತೇವೆ ಎಂದರು.

  • 07 Dec 2022 11:24 AM (IST)

    Karnataka Maharashtra Border Dispute Live: ಗಡಿಯ ಎಲ್ಲಾ ವಿಚಾರವನ್ನು ಮಹಾ ನಾಯಕರಿಗೆ ರವಾನಿಸುತ್ತಿದೆ ಎಂಇಎಸ್

    ಬೆಳಗಾವಿ ಮಹಾರಾಷ್ಟ್ರ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಮಾಹಿತಿಯನ್ನು ಎಂಇಎಸ್ ಮಹಾ ನಾಯಕರಿಗೆ ರವಾನಿಸುತ್ತಿದೆ. ಬೆಳಗಾವಿಯ ನಾಡದ್ರೋಹಿ ಎಂಇಎಸ್ ನಾಯಕರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸಂಪರ್ಕದಲ್ಲಿದ್ದಾರೆ. ಬೆಳಗಾವಿಯ ಎಂಇಎಸ್ ಕಚೇರಿ ಎದುರು ಬೆಳಗಾವಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಕಚೇರಿಗೆ ಯಾರು ಭೇಟಿ ನೀಡ್ತಿದ್ದಾರೆ ಅಂತಾ ನಿಗಾ ಇಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ನಮ್ಮ ಮನವಿ ಸ್ವೀಕರಿಸುತ್ತಿಲ್ಲ. ಡಿಸೆಂಬರ್ 19ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಇದಕ್ಕೂ ಮುನ್ನ ನಮ್ಮ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಹೀಗಾಗಿ ನೀವ್ಯಾರಾದರೂ ಬಂದು ನಮಗೆ ಧೈರ್ಯ ತುಂಬಿ. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರದ ದೌರ್ಜನ್ಯ ಮಿತಿ ಮೀರಿದೆ ಅಂತಾ ಎಂಇಎಸ್ ಪುಂಡರು ಚಾಡಿ ಹೇಳುತ್ತಿದ್ದಾರಂತೆ.

  • 07 Dec 2022 11:12 AM (IST)

    Karnataka Maharashtra Border Dispute Live: ಮಹಾರಾಷ್ಟ್ರದ ಪುಣೆಯಲ್ಲೂ ಕೆಎಸ್​​ಆರ್​ಟಿಸಿ ಬಸ್​​ಗೆ ಮಸಿ

    ಮಹಾರಾಷ್ಟ್ರದ ಪುಣೆಯಲ್ಲೂ ಕೆಎಸ್​​ಆರ್​ಟಿಸಿ ಬಸ್​​ಗೆ ಮಸಿ ಬಳಿಯಲಾಗಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಪುಣೆಯಿಂದ ಬೆಳಗಾವಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ತಡೆದು ಆಕ್ರೋಶ ಹೊರ ಹಾಕಿದ್ದಾರೆ.

  • 07 Dec 2022 11:09 AM (IST)

    Karnataka Maharashtra Border Dispute Live: ಮಹಾರಾಷ್ಟ್ರದಲ್ಲಿ KSRTC ಬಸ್​ಗಳಿಗೆ ಮಸಿ ಬಳಿದು ಪುಂಡಾಟ

    ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ದಿನೇ ದಿನೇ ತಾರಕಕ್ಕೇರುತ್ತಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ, ಶಿವಸೇನೆ ಮಹಾರಾಷ್ಟ್ರದಲ್ಲಿ KSRTC ಬಸ್​ಗಳಿಗೆ ಮಸಿ ಬಳಿದು ಪುಂಡಾಟ ಮೆರೆಯುತ್ತಿವೆ. ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಸಿಂಧದುರ್ಗ ಜಿಲ್ಲೆ ಕುಡಾಲ ಬಸ್ ನಿಲ್ದಾಣದಲ್ಲಿ ರಾತ್ರಿ​ ಡಿಪೋಗೆ ನುಗ್ಗಿ ರಾಜ್ಯದ ಬಸ್​ಗಳಿಗೆ ಕೇಸರಿ ಬಣ್ಣ, ಕಪ್ಪು ಮಸಿ ಬಳಿದು ಪುಂಡಾಟ ಪ್ರದರ್ಶಿಸುತ್ತಿದೆ. ಬೆಳಗಾವಿ ಘಟಕಕ್ಕೆ ಸೇರಿದ ಕೆಎಸ್​ಆರ್​ಟಿಸಿ ಬಸ್​​​ಗಳಿಗೆ ಮಸಿ ಬಳಿಯಲಾಗಿದೆ.

  • 07 Dec 2022 11:04 AM (IST)

    Karnataka Maharashtra Border Dispute Live: ರಾಜ್ಯ ಸರ್ಕಾರದ ವಿರುದ್ಧ ಮಹಾರಾಷ್ಟ್ರ ಕನ್ನಡಿಗರ ಬೇಸರ

    ಕಲಬುರಗಿ: ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿಲ್ಲ. ಕರ್ನಾಟಕದಲ್ಲಿರೋ ಮಹಾರಾಷ್ಟ್ರಿಗರ ಬೆಂಬಲಕ್ಕೆ ಮಹಾರಾಷ್ಟ್ರ ಸಚಿವರು ಬರ್ತಾರೆ. ಆದ್ರೆ ಮಹಾರಾಷ್ಟ್ರದಲ್ಲಿರೋ ಕನ್ನಡಿಗರ ಬೆಂಬಲಕ್ಕೆ ಯಾವ ಸಚಿವರು ಬರ್ತಿಲ್ಲಾ. ಯಾವೊಬ್ಪ ಸಚಿವರು ತಮ್ಮ ಹೋರಾಟಕ್ಕೆ ಸ್ಪಂಧಿಸುತ್ತಿಲ್ಲಾ ಅಂತ ರಾಜ್ಯ ಸರ್ಕಾರದ ಧೋರಣೆಗೆ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಅನೇಕ ಕನ್ನಡಿಗ ಭಾಷಿಕ ಗ್ರಾಮದ ಜನರು ಬೇಸರ ಹೊರ ಹಾಕಿದ್ದಾರೆ.

  • 07 Dec 2022 11:00 AM (IST)

    Karnataka Maharashtra Border Dispute Live: ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರ ವಿರುದ್ಧ FIR

    ಮಹಾರಾಷ್ಟ್ರ ಲಾರಿಗಳ ಮೇಲೆ ಕರವೇ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರ ವಿರುದ್ಧ ಬೆಳಗಾವಿ ತಾಲೂಕಿನ ‌ಹಿರೇಬಾಗೇವಾಡಿ ಠಾಣೆಯಲ್ಲಿ FIR ದಾಖಲಾಗಿದೆ. 8 ರಿಂದ 12 ಕರವೇ ಕಾರ್ಯಕರ್ತರ ವಿರುದ್ಧ ಎಫ್ಐಆರ್ ಆಗಿದೆ. ನಿನ್ನೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದಿದ್ದಕ್ಕೆ ಕರವೇ ಆಕ್ರೋಶ ಹೊರ ಹಾಕಿತ್ತು. ಈ ವೇಳೆ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಿತ್ತು. ಲಾರಿಗಳ ನಂಬರ್ ಪ್ಲೇಟ್ ಕಿತ್ತು, ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿತ್ತು.

  • 07 Dec 2022 10:57 AM (IST)

    Karnataka Maharashtra Border Dispute Live: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂದು ಕರವೇ ಪ್ರತಿಭಟನೆ

    ಪದೇಪದೆ ಗಡಿ ಬಗ್ಗೆ ಕ್ಯಾತೆ ತೆಗೆಯುವ ಮಹಾರಾಷ್ಟ್ರ ವಿರುದ್ಧ ಕನ್ನಡಿಗರು ಗರಂ ಆಗಿದ್ದಾರೆ. ಗಡಿ, ಭಾಷೆ ವಿಚಾರದಲ್ಲಿ ಕನ್ನಡಿಗರನ್ನು ಕೆಣಕುತ್ತಿರುವುದಕ್ಕೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂದು ಕರವೇ ಪ್ರತಿಭಟನೆಗೆ ಕರೆ ಕೊಟ್ಟಿದೆ. MES​, ಮಹಾರಾಷ್ಟ್ರ ರಾಜಕಾರಣಿಗಳ ನಡೆ ಖಂಡಿಸಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಬಣದಿಂದ ಧರಣಿ ನಡೆಸಲಾಗುತ್ತಿದೆ.

  • Published On - Dec 07,2022 10:51 AM

    Follow us
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
    ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
    ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?