ಬೆಳಗಾವಿಯಲ್ಲಿ ಗಡಿ ಕಿಚ್ಚು: ಬೊಮ್ಮಾಯಿಗೆ ಕರೆ ಮಾಡಿ ಶಾಂತಿ ಮಂತ್ರ ಪಠಿಸಿದ ಮಹಾರಾಷ್ಟ್ರ ಸಿಎಂ ಶಿಂಧೆ
ಬೆಳಗಾವಿಯಲ್ಲಿ ಕನ್ನಡಿಗರು ಗಡಿ ಕ್ಯಾತೆ ತೆಗೆದವರ ವಿರುದ್ಧ ಸಮರ ಸಾರುತ್ತಿದ್ದಂತೆಯೇ ಏಕನಾಥ್ ಶಿಂಧೆ, ಕರ್ನಾಟಕ ಮುಖ್ಯಮಂತ್ರಿಗೆ ದೂರವಾಣಿ ಕರೆ ಮಾಡಿ ಶಾಂತಿ ಮಂತ್ರ ಪಠಿಸಿದ್ದಾರೆ.
ಬೆಂಗಳೂರು: ಗಡಿ ಕಿರಿಕ್ ತೆಗೆದವರ ಮೇಲೆ ಕನ್ನಡಿಗರು ಸಮರ ಸಾರಿದ ಬೆನ್ನಲ್ಲೇ ಮಹಾರಾಷ್ಟ್ರ(Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಶಾಂತಿ ಮಂತ್ರ ಪಠಿಸಿದ್ದಾರೆ. ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಕನ್ನಡಿಗರ ಆಕ್ರೋಶದ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಸಿಎಂ ಏಕನಾಥ್ ಶಿಂಧೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ದೂರವಾಣಿ ಕರೆ ಮಾಡಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಬೊಮ್ಮಾಯಿ ಸಹ ಒಪ್ಪಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನನ್ನೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
Since there is harmonious relation between the people of both the states, however there is no change in our stand as far as Karnataka border is concerned. And the legal battle will be pursued in Supreme court. 2/2
— Basavaraj S Bommai (@BSBommai) December 6, 2022
ಎರಡೂ ರಾಜ್ಯಗಳ ಜನರ ನಡುವೆ ಸೌಹಾರ್ದಯುತ ಬಾಂಧವ್ಯ ಇರುವುದರಿಂದ ಕರ್ನಾಟಕದ ಗಡಿಗೆ ಸಂಬಂಧಿಸಿದಂತೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಮತ್ತು ಕಾನೂನು ಹೋರಾಟವನ್ನು ಸುಪ್ರೀಂ ಕೋರ್ಟ್‌ನಲ್ಲಿ ಗ್ರಹಿಸಲಾಗುವುದು ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ಬರುತ್ತದೆ ಎಂದು ಗೊತ್ತಾಗುತ್ತಿದ್ದಂತೆಯೇ ಸಿಡಿದೆದ್ದಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ದಿಢೀರ್ ಸರ್ವಪಕ್ಷ ಸಭೆ ಕರೆದಿದ್ದರು. ಅಲ್ಲದೇ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನೋಡಿಕೊಳ್ಳಲು ತಮ್ಮ ಸಂಪುಟ ಇಬ್ಬರು ಸಚಿವರಿಗೆ ಜವಾಬ್ದಾರಿ ವಹಿಸಿದ್ದರು. ಇನ್ನೊಂದೆಜ್ಜೆ ಮುಂದಿಟ್ಟ ಶಿಂಧೆ, ಇಚಲಕರಂಜಿಯ ಸಂಸದ ಧೈರ್ಯಶೀಲ ಮಾನೆ ಅವರನ್ನು ಮಹಾರಾಷ್ಟ್ರ ಗಡಿ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.
ಕರ್ನಾಟಕ-ಮಹಾರಾಷ್ಟ್ರ ಗಡಿ ಗುದ್ದಾಟ ಮತ್ತೆ ಮತ್ತೆ ತಾರಕಕ್ಕೇರಿದೆ. ಇತ್ತ ಕನ್ನಡ ಪರ ಸಂಘಟನೆಗಳು ಮಹಾರಾಷ್ಟ್ರ ವಿರುದ್ಧ ರೊಚ್ಚಿಗೆದ್ದಿದ್ರೆ, ಅತ್ತ ಮಹಾರಾಷ್ಟ್ರದಲ್ಲಿ ಎಂಇಎಸ್ ಕರ್ನಾಟಕ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ನಡುವಿನ ಗುದ್ದಾಟ ತಾರಕಕ್ಕೇರುತ್ತಿದ್ದಂತೆಯೇ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ದೂರವಾಣಿ ಮೂಲಕ ಮಾತುಕತೆ ಮಾಡಿದ್ದು, ಶಾಂತಿ ಒಪ್ಪಂದವಾಗಿದೆ.
ಇದೀಗ ಇತ್ತ ಬೆಳಗಾವಿಯಲ್ಲಿ ಕನ್ನಡಿಗರು ಗಡಿ ಕ್ಯಾತೆ ತೆಗೆದವರ ವಿರುದ್ಧ ಸಮರ ಸಾರುತ್ತಿದ್ದಂತೆಯೇ ಅತ್ತ ಏಕನಾಥ್ ಶಿಂಧೆ, ಕರ್ನಾಟಕ ಮುಖ್ಯಮಂತ್ರಿಗೆ ದೂರವಾಣಿ ಕರೆ ಮಾಡಿ ಶಾಂತಿ ಮಂತ್ರ ಪಠಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:44 pm, Tue, 6 December 22