ಎಂಇಎಸ್​​, ಶಿವಸೇನೆ ಪುಂಡಾಟ: ಕರ್ನಾಟಕ- ಮಹಾರಾಷ್ಟ್ರ ನಡುವೆ ಬಸ್​​ ಸಂಚಾರ ಸ್ಥಗಿತ

ಕರ್ನಾಟಕ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿರುವ ಬೆನ್ನಲ್ಲೇ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಮತ್ತೆ ಬಾಲ ಬಿಚ್ಚಿದ್ದಾರೆ. ಬೆಳಗಾವಿಯಲ್ಲಿ ಮಹಾಮೇಳ ನಡೆಸುವ ವಿಫಲ ಯತ್ನ ನಡೆದಿದ್ದರೆ, ಕೊಲ್ಲಾಪುರದಲ್ಲಿ ಕರ್ನಾಟಕ ಬಸ್​​ಗಳಿಗೆ ಮಸಿ ಬಳಿಯಲಾಗಿದೆ. ಇವುಗಳಿಗೆ ಕರವೇಯಿಂದಲೂ ಕೌಂಟರ್​​ ವ್ಯಕ್ತವಾಗಿದ್ದು, ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ.

ಎಂಇಎಸ್​​, ಶಿವಸೇನೆ ಪುಂಡಾಟ: ಕರ್ನಾಟಕ- ಮಹಾರಾಷ್ಟ್ರ ನಡುವೆ ಬಸ್​​ ಸಂಚಾರ ಸ್ಥಗಿತ
KSRTC ಬಸ್​ಗಳು
Edited By:

Updated on: Dec 08, 2025 | 5:43 PM

ಬೆಳಗಾವಿ, ಡಿಸೆಂಬರ್​​ 08: ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ಮೊದಲ ದಿನವೇ ಎಂಇಎಸ್ ಮತ್ತು ಶಿವಸೇನೆ ನಾಯಕರು ಬಾಲ ಬಿಚ್ಚಿದ್ದಾರೆ. ಕರ್ನಾಟಕದಲ್ಲಿದ್ದರೂ ಕನ್ನಡ ವಿರೋಧಿ ಘೋಷಣೆ ಕೂಗಿ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳ ನಡೆಸುವ ವಿಫಲ ಯತ್ನ ನಡೆದಿದೆ. ಪರಿಣಾಮವಾಗಿ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ.

ವ್ಯಾಕ್ಸಿನ್ ಡಿಪೋದಲ್ಲಿ ಸೇರಲು ಉದ್ದೇಶಿಸಿದ್ದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಪ್ಲ್ಯಾನ್​​​ಗೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್​​ ಹಾಕಿದೆ. ಒಬ್ಬೊಬ್ಬರೇ ವ್ಯಾಕ್ಸಿನ್ ಡಿಪೋದ ಬಳಿ ಬರ್ತಾಯಿದ್ದಂತೆ ಅವರನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆಯೂ ಕೆಲ ಪುಂಡ ಮುಖಂಡರು ನಾಡದ್ರೋಹಿ ಘೋಷಣೆ ಕೂಗಿದ್ರೆ, ಇನ್ನು ಕೆಲವರು ರಸ್ತೆ ಮೇಲೆ ಕುಳಿತು ಹೈಡ್ರಾಮಾ ನಡೆಸಿದ್ದಾರೆ. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಪೊಲೀಸರು ಪುಂಡರನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ವಿಷಯ ಗೊತ್ತಾಯುತ್ತಿದ್ದಂತೆ ಕರವೇ ಕಾರ್ಯಕರ್ತರು ಸಿಡಿದೆದ್ದಿದ್ದು, ವ್ಯಾಕ್ಸಿನ್ ಡಿಪೋಗೆ ನುಗ್ಗಲು ಯತ್ನಿಸಿದ್ದಾರೆ.  ಪೊಲೀಸರು ಮಾರ್ಗ ಮಧ್ಯೆಯೇ ಇವರನ್ನು ತಡೆದ ಪರಿಣಾಮ, ವಾಗ್ವಾದ ಕೂಡ ನಡೆದಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಮುಖಂಡರು ಪೊಲೀಸ್ ವಶಕ್ಕೆ

ಇನ್ನು ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಕ್ಕೆ ಶಿವಸೇನೆ ಉದ್ದವ್ ಠಾಕ್ರೆ ಬಣದ ಕಾರ್ಯಕರ್ತರು ಕೊಲ್ಲಾಪುರದಲ್ಲಿ ರಾಜ್ಯದ ಸರ್ಕಾರಿ ಬಸ್​​ಗಳನ್ನು ತಡೆದು, ಅವುಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿರುವ ಸ್ಟಿಕ್ಕರ್​​ ಅಂಟಿಸಿ ಗೂಂಡಾ ವರ್ತನೆ ತೋರಿದ್ದಾರೆ. ವಿಜಯ್ ದೇವಣೆ ನೇತೃತ್ವದಲ್ಲಿ ಈ ರೀತಿ ಪುಂಡಾಟ ನಡೆದ ಬೆನ್ನಲ್ಲೇ, ಅಥಣಿಯಲ್ಲಿ ಮಹಾರಾಷ್ಟ್ರದ ಬಸ್​​ಗಳನ್ನು ತಡೆದು ಕರವೇ ಕಾರ್ಯಕರ್ತರು ಕಿಡಿ ಕಾರಿದ್ದಾರೆ. ಬಸ್​​ಗಳ ಮೇಲೆ ಬಿಳಿ ಬಣ್ಣದಲ್ಲಿ ಜೈ ಕರ್ನಾಟಕ ಎಂದು ಬರೆಯುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ಬಸ್​​ಗಳ ಸಂಚಾರ ಸ್ಥಗಿತ

ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್​​ಗಳನ್ನ ತಡೆಯುವ ಕೆಲಸ ಆಗ್ತಿದ್ದಂತೆ ಮುಂಜಾಗೃತಾ ಕ್ರಮವಾಗಿ ಮಹಾರಾಷ್ಟ್ರಕ್ಕೆ ರಾಜ್ಯದಿಂದ ತೆರಳುವ ಎಲ್ಲ ಸರ್ಕಾರಿ ಬಸ್​​ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೊಲ್ಲಾಪುರ, ಪುಣೆ, ಮುಂಬಯಿ ಸೇರಿದಂತೆ ಹಲವೆಡೆ ಸಂಚರಿಸಬೇಕಿದ್ದ ರಾಜ್ಯದ ಬಸ್​​ಗಳ ಸಂಚಾರ ರದ್ದಾಗಿದೆ. ಅತ್ತ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸಬೇಕಿದ್ದ ಸರ್ಕಾರಿ ಬಸ್​ಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.