ಬೆಳಗಾವಿಯಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಮುಖಂಡರು ಪೊಲೀಸ್ ವಶಕ್ಕೆ
ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಭಾಗದಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ಶಿವಸೇನೆ ಹಾಗೂ ಎಂಇಎಸ್ ಪುಂಡಾಟಿಕೆ ಪುನಃ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆ ಬಿಗಿಸಲಾಗಿದೆ. ಶಿವಸೇನೆ ಪುಂಡರು ಕೆಎಸ್ಆರ್ಟಿಸಿ ಬಸ್ ತಡೆದು ಪ್ರತಿಭಿಟಿಸಿದ್ದಾರೆ. ಎಂಇಎಸ್ ಮುಖಂಡ ಮಾಳೋಜಿ ಅಷ್ಟೇಕರ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ, ಡಿಸೆಂಬರ್ 8: ವಿಧಾನಸಭೆ ಚಳಿಗಾಲದ ಅಧಿವೇಶನ ಸಮಯದಲ್ಲಿ ಮಹಾರಾಷ್ಟ್ರದ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಪುನಃ ಪುಂಡಾಟಿಕೆಗೆ ಮುಂದಾಗಿದ್ದು ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ. ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರು ರಸ್ತೆಗಿಳಿದು ಕರ್ನಾಟಕ ಸಾರಿಗೆ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೊಲ್ಲಾಪುರ ಸೆಂಟ್ರಲ್ ಬಸ್ ಸ್ಟ್ಯಾಂಡ್‌ನಲ್ಲಿ ಶಿವಸೇನೆ ಕಾರ್ಯಕರ್ತರು ಉದ್ಧಟತನಕ್ಕೆ ತೊಡಗಿದ್ದು, ಠಾಕ್ರೆ ಬಣದ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಈ ನಡುವೆ ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಕ್ಕೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಿದ್ದು, ಎಂಇಎಸ್ ಮುಖಂಡ ಮಾಳೋಜಿ ಅಷ್ಟೇಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವ್ಯಾಕ್ಸಿಡಿಪೋದ ಮೈದಾನಕ್ಕೆ ಆಗಮಿಸುತ್ತಿದ್ದಂತೆಯೇ ಮಾಜಿ ಮೇಯರ್ ಅಷ್ಟೇಕರ್ ಅವರನ್ನು ವಶಕ್ಕೆ ಪಡೆಯಲಾಗಿದೆ.
