ಪರಿಷತ್ ಸದಸ್ಯ ನಾಗರಾಜ್ ಯಾದವ್ಗೆ ಸಭಾಪತಿ ಹೊರಟ್ಟಿ ಸವಾಲು: ಕಾರಣ ಏನು ಗೊತ್ತಾ?
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಸದಸ್ಯ ನಾಗರಾಜ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಹೊರಟ್ಟಿ ಪಕ್ಷಾತೀತವಾಗಿಲ್ಲ, ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದ್ದಾರೆ. ಇತ್ತ, ತಮ್ಮ ಮೇಲಿನ ಆರೋಪ ಸಾಬೀತಾದರೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೊರಟ್ಟಿ ಸವಾಲು ಹಾಕಿದ್ದಾರೆ.

ಬೆಳಗಾವಿ, ಡಿಸೆಂಬರ್ 08: ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮೇಲೆ ಸದಸ್ಯ ನಾಗರಾಜ್ ಯಾದವ್ ಆರೋಪಗಳ ಸುರಿಮಳೆ ಮಾಡಿದ್ದಾರೆ. ಬಸವರಾಜ್ ಹೊರಟ್ಟಿ ಪಕ್ಷಾತೀತವಾಗಿ ನಡೆದುಕೊಳ್ತಾ ಇಲ್ಲ ಎಂದು ಆರೋಪಿಸಿರುವ ಅವರು, ವಿಧಾನ ಪರಿಷತ್ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಇತ್ತ ತಮ್ಮ ಮೇಲಿನ ಆರೋಪಗಳಿಗೆ ಗರಂ ಆಗಿರುವ ಹೊರಟ್ಟಿ, ನಾಗರಾಜ್ ಯಾದವ್ ಹೇಳಿರೋದನ್ನು ಸಾಬೀತು ಮಾಡಿದರೆ ನಾನು ಈ ಕುರ್ಚಿಯಲ್ಲಿ ಒಂದೇ ಒಂದು ನಿಮಿಷ ಕೂರುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ನಾಗರಾಜ್ ಯಾದವ್ ಆರೋಪಗಳೇನು?
ಸಭಾಪತಿ ಎಲ್ಲ ಪಕ್ಷದ ಪರ ಇರಬೇಕು. ಆದರೆ ಬಸವರಾಜ್ ಹೊರಟ್ಟಿ ಅವರು ಆಡಳಿತ ಪಕ್ಷಕ್ಕೆ ಒಂದು, ವಿಪಕ್ಷಗಳಿಗೆ ಮತ್ತೊಂದು ಎಂಬ ರೀತಿ ಮಾಡುತ್ತಿದ್ದಾರೆ. ಬಿಜೆಪಿಯವರನ್ನು ಓಲೈಕೆ ಮಾಡಲು ನಮಗೆ ಮಾತನಾಡಲು ಅವಕಾಶ ಕೊಡ್ತಿಲ್ಲ. ಆ ಮೂಲಕ ಹೊರಟ್ಟಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ತಮ್ಮ ಕೈ ಕೆಳಗೆ ಕೆಲಸ ಮಾಡುವ ನೌಕರರ ಫೋನ್ಕಾಲ್ ಲಿಸ್ಟ್ಗಳನ್ನು ಅವರು ತೆಗೆದುಕೊಂಡಿದ್ದು, ಈ ಬಗ್ಗೆ ತನಿಖೆ ನಡೆದರೆ ಸತ್ಯ ಹೊರಬರಲಿದೆ. ಜೊತೆಗೆ ನೇಮಕಾತಿಗಳಲ್ಲಿಯೂ ಹೊರಟ್ಟಿ ಅವ್ಯವಹಾರ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಸಿ.ಟಿ. ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದ ಬಗ್ಗೆ ಬಗ್ಗೆ ದೂರು ಕೊಟ್ಟಾಗ ನಾನು ಆ ಮಾತು ಕೇಳಿಸಿಕೊಂಡಿಲ್ಲ ಅಂದಿದ್ದರು. ನೈತಿಕತೆ ಕಳೆದುಕೊಂಡ ಮೇಲೆ ಅವರು ರಾಜೀನಾಮೆ ಕೊಟ್ಟು ಹೋಗುವುದು ಸೂಕ್ತ ಎಂದು ನಾಗರಾಜ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಸುವರ್ಣಸೌಧದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಮತ್ತು ಅಶೋಕ್ ನಡುವೆ ‘ನಾಟಿಕೋಳಿ’ ಮಾತು
ಅಲ್ಲದೆ ಸಭಾಪತಿ ಹೊರಟ್ಟಿ ಅವರ ಮೇಲೆ ಆವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆ ಇದ್ದು, ಪಕ್ಷ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿದೆ. ಸಂಖ್ಯಾಬಲದ ಬಗ್ಗೆ ಮಾತಾಡುವುದಾದರೆ ಲಖನ್ ಜಾರಕಿಹೊಳಿ ಮತ ಮುಖ್ಯ ಆಗಲಿದೆ. ನಮ್ಮ ಸರ್ಕಾರ ಬಂದು ಎರಡು ವರ್ಷಗಳಾದ್ರು ಇನ್ನೂ ಏಕೆ ಬಿಜೆಪಿಯವರನ್ನು ಸಭಾಪತಿ ಆಗಿ ಇಟ್ಟುಕೊಳ್ಳಬೇಕು? ನಮ್ಮ ಮಸೂದೆಗಳು ಪಾಸ್ ಆಗಬೇಕಾದ್ರೆ, ನಮ್ಮ ವಿಚಾರಗಳು ಚರ್ಚೆ ಆಗಬೇಕು ಅಂದ್ರೆ ಪಕ್ಷಾತೀತ ಸಭಾಪತಿ ಬೇಕು ಎಂದು ನಾಗರಾಜ್ ಯಾದವ್ ಆಗ್ರಹಿಸಿದ್ದಾರೆ.
ಬಸವರಾಜ್ ಹೊರಟ್ಟಿ ಕೌಂಟರ್
ನನ್ನ ಮೇಲಿನ ಭ್ರಷ್ಟಾಚಾರ ಆರೋಪ ಸಾಬೀತು ಮಾಡಿದರೆ ಸಭಾಪತಿ ಕುರ್ಚಿಯಲ್ಲಿ ಒಂದೇ ಒಂದು ನಿಮಿಷ ಕೂರುವುದಿಲ್ಲ. ಸಣ್ಣಪುಟ್ಟ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳನ್ನೇ ನಾನು ಅಮಾನತು ಮಾಡಿದ್ದೇನೆ. ಹೀಗಾಗಿ ಆರೋಪ ಮಾಡಿ ದಾಖಲೆ ಕೊಡಲಿಲ್ಲ ಅಂದರೆ ಅಂತವರನ್ನ ನಾನು ಹೇಡಿ ಎನ್ನುತ್ತೇನೆ ಎಂದು ನಾಗರಾಜ್ ಯಾದವ್ ವಿರುದ್ಧ ಬಸವರಾಜ್ ಹೊರಟ್ಟಿ ಕಿಡಿ ಕಾರಿದ್ದಾರೆ.
ಸದನದಲ್ಲಿ ಹೆಬ್ಬಾಳ್ಕರ್ ಮತ್ತು ಸಿ.ಟಿ. ರವಿ ಗಲಾಟೆ ವಿಚಾರ ಕುರಿತ ಆರೋಪಕ್ಕೂ ಉತ್ತರಿಸಿರುವ ಅವರು, ಆ ಬಗ್ಗೆ ಸೆಕ್ರೆಟರಿಗಳನ್ನ ಕೂರಿಸಿಕೊಂಡು ಚರ್ಚೆ ಮಾಡಲಾಗಿದೆ. ವಿಚಾರವನ್ನು ನೀತಿ -ನಿರೂಪಣೆ ಸಮಿತಿಗೆ ನೀಡಲಾಗಿದೆ. ಈಗಾಗಲೇ ಎರಡು ಬಾರಿ ಸಮಿತಿ ಸಭೆ ನಡೆಸಿದ್ದು, ಇಬ್ಬರನ್ನೂ ಕರೆಸಿ ಮಾತಾಡಿಸಿದ್ದಾರೆ. ತೀರ್ಮಾನ ಇನ್ನೂ ಸಮಿತಿ ಮುಂದಿದೆ. ಹೀಗಿರುವಾಗ ಸದನದ ಸದಸ್ಯರಾಗಿರುವ ನಾಗರಾಜ್ ಯಾದವ್, ಘಟನೆ ನಡೆದು ವರ್ಷದ ಬಳಿಕ ಯಾಕೆ ಮಾತನಾಡುತ್ತಿದ್ದಾರೆ? ಎಂದು ಹೊರಟ್ಟಿ ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:13 pm, Mon, 8 December 25




