ಮುಂದಿನ ವರ್ಷದಿಂದ ಕರ್ನಾಟಕದಲ್ಲಿ ಮನೆ-ಮನೆಗೆ ತೆರಳಿ ಆರೋಗ್ಯ ತಪಾಸಣೆ; ದಿನೇಶ್ ಗುಂಡೂರಾವ್
ಗೃಹ ಆರೋಗ್ಯ ಎಂಬ ಹೆಸರಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಲಾಗುವುದು. ರಾಜ್ಯದಲ್ಲಿ ಆಶಾ ಕಿರಣ ಕಾರ್ಯಕ್ರಮ ಮಾಡುತ್ತಿದ್ದೇವೆ. 8 ಜಿಲ್ಲೆಗಳಲ್ಲಿ ಪ್ರಯೋಗಾರ್ಥವಾಗಿ ಮನೆ ಮನೆಗೆ ತೆರಳಿ ಕಣ್ಣು ತಪಾಸಣೆ ಮಾಡುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ: ಮಕ್ಕಳು, ತಾಯಿಯ ಮರಣದ ಅನುಪಾತ ಕರ್ನಾಟಕದಲ್ಲಿ ಬಹಳ ಕಡಿಮೆ ಇದೆ. ಹೆಚ್ಚು ರೋಗಗಳು ಬರದಿರುವಂತೆ ಪ್ರಯತ್ನ ಮಾಡಬೇಕು. ರೋಗಗಳನ್ನು ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಬೇಕು. ಹೀಗಾಗಿ, ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಪರಿಸ್ಥಿತಿಯ ಸರ್ವೇ ಮಾಡುವ ಚಿಂತನೆ ಇದೆ. ಅದಕ್ಕಾಗಿ ಕರ್ನಾಟಕದಲ್ಲಿ 8 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅದರಲ್ಲಿ ಬೆಳಗಾವಿ, ಗದಗ ಜಿಲ್ಲೆಗಳು ಕೂಡ ಇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಭಾಗೀಯ ಮಟ್ಟದ ಅಧಿಕಾರಿಗಳ ಜತೆಗೆ ಸಭೆ ಬಳಿಕ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಗೃಹ ಆರೋಗ್ಯ ಎಂಬ ಹೆಸರಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಲಾಗುವುದು. ರಾಜ್ಯದಲ್ಲಿ ಆಶಾ ಕಿರಣ ಕಾರ್ಯಕ್ರಮ ಮಾಡುತ್ತಿದ್ದೇವೆ. 8 ಜಿಲ್ಲೆಗಳಲ್ಲಿ ಪ್ರಯೋಗಾರ್ಥವಾಗಿ ಮನೆ ಮನೆಗೆ ತೆರಳಿ ಕಣ್ಣು ತಪಾಸಣೆ ಮಾಡುತ್ತೇವೆ. ಈ ವರ್ಷದ ಬಳಿಕ ರಾಜ್ಯಾದ್ಯಂತ ಈ 2 ಯೋಜನೆಗಳನ್ನು ಜಾರಿ ಮಾಡುತ್ತೇವೆ. ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ವ್ಯವಸ್ಥೆ ಇರಬೇಕು ಎಂದು ಯೋಜನೆ ರೂಪಿಸಿದ್ದೇವೆ. ಲಸಿಕೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಹರಿಸಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮುಖ್ಯವಾಗಿ ತಾಯಿ ಮತ್ತು ಮಗುವಿನ ಆರೋಗ್ಯದ ಕಾಳಜಿಗೆ ಹೆಚ್ಚು ಒತ್ತು ನೀಡಲಾಗುವುದು. ಗರ್ಭಿಣಿಯರ ಹಾಗೂ ನವಜಾತು ಶಿಶುಗಳ ಆರೋಗ್ಯವನ್ನು ಕಾಪಾಡಲು ಹೆಚ್ಚಿನ ಆದ್ಯತೆ ಕೊಡುವಂತೆ ಸೂಚನೆ ನೀಡಲಾಗಿದೆ. 108 ಆ್ಯಂಬುಲೆನ್ಸ್ ಸಮಸ್ಯೆಯನ್ನು ಸರಿ ಪಡಿಸಿ ಹೊಸ ಕಾಯಕಲ್ಪ ಕೊಡುತ್ತೇವೆ. ಕಭಿ ಎಂಬ ಹೊಸ ಯೋಜನೆ ಜಾರಿ ಮಾಡುತ್ತಿದ್ದೇವೆ. ಮಾನಸಿಕ ಅಸ್ವಸ್ಥರನ್ನು ಸರಿ ಪಡಿಸಲು ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ