ಬೆಳಗಾವಿ: ನಮ್ಮ, ಅಲ್ಪಸಂಖ್ಯಾತರ ಸಂಬಂಧ ದೇವರು, ಭಕ್ತರ ಸಂಬಂಧ. ಈ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ತಿರುಚಲು ಹೊರಟಿದೆ. ಎನ್ಇಪಿ ಅಂದರೆ ನಾಗ್ಪುರ ಎಜುಕೇಷನ್ ಪಾಲಿಸಿ. ನನಗೆ ಅರ್ಥ ಆಗ್ತಿಲ್ಲ, ಇನ್ನು ಮಕ್ಕಳಿಗೆ ಹೇಗೆ ಅರ್ಥವಾಗುತ್ತೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರಿಗೆ ಅಲ್ಪಸಂಖ್ಯಾತ ಮತ ಕಿತ್ತಾಕುವುದೇ ಕೆಲಸ. ಬಿಜೆಪಿ ಮತದಾನದ ಹಕ್ಕನ್ನು ಕಸಿದುಕೊಳ್ತಿದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಪ್ರಬುದ್ಧರಾಗಿ ಮತ ಹಾಕಿ. ಕಾಂಗ್ರೆಸ್ ಪಕ್ಷ ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತೆ ಎಂದು ಅಲ್ಪಸಂಖ್ಯಾತ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ನಿಂದ ಅಲ್ಪಸಂಖ್ಯಾತ ಸಮುದಾಯದ ಸಮಾವೇಶ ನಡೆಸಲಾಗಿದೆ. ನಮ್ಮ ನಡೆ ಐಕ್ಯತೆ ಮತ್ತು ವಿಶ್ವಾಸದ ಕಡೆ ಎನ್ನುವ ಹೆಸರಿನಲ್ಲಿ ಸಮಾವೇಶ ಆಯೋಜಿಸಲಾಗಿದೆ. ಬೆಳಗಾವಿಯ ಗಾಂಧಿ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಲೀಂ ಅಹ್ಮದ್, ತನ್ವೀರ್ ಸೇಠ್, ರಹೀಂ ಖಾನ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನಾಯಕರು ಭಾಗಿ ಆಗಿದ್ದಾರೆ.
ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ರಾಜ್ಯದಲ್ಲಿ ಮತ್ತೊಮ್ಮೆ ಸೆಕ್ಯೂಲರ್ ಫೋರ್ಸ್ ಬರಬೇಕಿದೆ. ಕಾಂಗ್ರೆಸ್ ಪಕ್ಷ ಯಾರಿಗೂ ಕೆಟ್ಟದನ್ನ ಮಾಡಿಲ್ಲ. ಎಸ್‌ಸಿ, ಎಸ್‌ಟಿ ಜನರ ಪರಿಸ್ಥಿತಿ ಬಹಳ ಕೆಟ್ಟು ಹೋಗಿದೆ. ಅಂಬೇಡ್ಕರ್ ಬರೆದ ಸಂವಿಧಾನ ನಾವು ಜಾರಿಗೊಳಿಸಿದ್ದೇವೆ. ಇವತ್ತು ಸರ್ಕಾರ ಮತಾಂತರ ಕಾಯ್ದೆ ನಿಷೇಧ ತಂದಿದೆ. ಇದಕ್ಕೆ ಯಾರು ತಲೆ ಕೆಡಿಸಿಕೊಳ್ಳಬೇಡಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಬಿಜೆಪಿ ಸರ್ಕಾರ ಬಂದ ಮೇಲೆ ಅಲ್ಪಸಂಖ್ಯಾತರಿಗೆ ಎಸ್‌ಸಿ, ಎಸ್‌ಟಿ ಜನರಿಗೆ ಅನುದಾನವನ್ನ ಕೊಟ್ಟಿಲ್ಲ. ಸಿದ್ದರಾಮಯ್ಯ 4 ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದರು ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬಿಜೆಪಿ ಒಡೆದಾಳುತ್ತದೆ, ಕಾಂಗ್ರೆಸ್ ಎಲ್ಲರೂ ಒಂದೇ ಅನ್ನುತ್ತೆ. 2023ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ತಂದುಕೊಟ್ಟಿದೆ, ದೇಶ ಕಟ್ಟಿದೆ ಎಂದು ಅಲ್ಪಸಂಖ್ಯಾತ ಸಮಾವೇಶದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಅಲ್ಪಸಂಖ್ಯಾತ ಸಮಾಜ ಯಾವಾಗಲೂ ಕಾಂಗ್ರೆಸ್ ಪರವಿದೆ. ಕೋಮುವಾದಿ, ಜಾತಿವಾದಿ ಪಕ್ಷ ಅಧಿಕಾರದಿಂದ ಹೋಗಬೇಕು. ಮುಸಲ್ಮಾನರು ಯಾರಿಗೂ ಹೆದರುವುದಿಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಕೊಂದವರಲ್ಲಿ ಯಾರೂ ಮುಸ್ಲಿಮರಿಲ್ಲ. ಮುಸ್ಲಿಂ ಸಮುದಾಯದವರಿಗೆ ಶಾಂತಿ ಸೌಹಾರ್ದತೆ ಬೇಕಾಗಿದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯಿಂದ ಭಯವಿಲ್ಲ; ಸಮಾಜ ಸೇವೆಯೇ ಕ್ರೈಸ್ತ ಧರ್ಮದ ಮೂಲ ಉದ್ದೇಶ: ಮೈಸೂರು ಕ್ರೈಸ್ತ ಧರ್ಮಾಧಿಕಾರಿ
Published On - 9:31 pm, Wed, 22 December 21