Belagavi News: ಕೃಷ್ಣಾ ನದಿ ಕೂಗಳತೆ ದೂರದಲ್ಲೇ ನೀರಿಗಾಗಿ ಪರದಾಟ; ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿರುವ ಗ್ರಾಮಸ್ಥರು

| Updated By: Digi Tech Desk

Updated on: May 23, 2023 | 10:59 AM

ಆ ಗ್ರಾಮದಲ್ಲಿ ಬೆಳಗಾದ್ರೆ ಸಾಕು ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಮನುಷ್ಯರ ಜತೆಗೆ ಪ್ರಾಣಿಗಳಿಗೂ ಕುಡಿಯಲು ನೀರಿಲ್ಲದೆ ಹಾಹಾಕಾರ ಶುರುವಾಗಿದೆ. ಕೃಷ್ಣಾ ನದಿ ಕೂಗಳತೆ ದೂರದಲ್ಲೇ ಕೆಲ ಗ್ರಾಮಗಳಲ್ಲಿ ನೀರಿಲ್ಲದೆ ಜನ ಪರಿತಪ್ಪಿಸುತ್ತಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಷ್ಟಕ್ಕೂ ಅದೇಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಬವವಾಗಿದೆ? ನೀರಿಗಾಗಿ ಎಷ್ಟು ಕಿಮೀ ನಡೆದುಕೊಂಡು ಗ್ರಾಮಸ್ಥರು ಹೋಗ್ತಾರೆ? ಇಲ್ಲಿದೆ ನೋಡಿ.

Belagavi News: ಕೃಷ್ಣಾ ನದಿ ಕೂಗಳತೆ ದೂರದಲ್ಲೇ ನೀರಿಗಾಗಿ ಪರದಾಟ; ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿರುವ ಗ್ರಾಮಸ್ಥರು
ಚಿಕ್ಕೋಡಿಯಲ್ಲಿ ನೀರಿಗಾಗಿ ಹಾಹಾಕಾರ
Follow us on

ಬೆಳಗಾವಿ: ಪ್ರಾಣದ ಹಂಗು ತೊರೆದು ಆಳದ ಬಾವಿಗಿಳಿದು ನೀರು ಮೇಲೆ ತರುತ್ತಿರುವ ಮಹಿಳೆಯರು. ಸೈಕಲ್ ಮೇಲೆ, ತಲೆ ಮೇಲೆ, ಕಂಕಳದ ಮೇಲೊಂದು ಕೊಡ ಹೊತ್ತು ಕಿಮೀ ಗಟ್ಟಲೆ ಸಾಗುತ್ತಿರುವ ವೃದ್ದರು, ಮಹಿಳೆಯರು, ಮಕ್ಕಳು. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಜಿಲ್ಲೆಯ ಚಿಕ್ಕೋಡಿ(Chikodi) ತಾಲೂಕಿನ ಡೋಣವಾಡ ಗ್ರಾಮದಲ್ಲಿ. ಹೌದು ಈ ಗ್ರಾಮದಲ್ಲಿ ಕಳೆದ 6 ತಿಂಗಳಿಂದ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ರೂ, ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ತಲೆ ಕೆಡಸಿಕೊಳ್ಳುತ್ತಿಲ್ಲ. ಒಂದು ಕಡೆ ಬೋರ್​ವೆಲ್​ಗಳು ಬತ್ತಿ ಹೋಗಿದ್ರೆ, ಇದ್ದ ಕೆಲ ಬೋರ್​ವೆಲ್​ಗಳಲ್ಲಿ ನೀರು ಬಾರದೇ, ಹನಿ ನೀರಿಗೂ ಜನ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ನಲ್ಲಿಯಲ್ಲಿ ನೀರು ಬಾರದ ಹಿನ್ನೆಲೆ ಗ್ರಾಮದ 2 ಕಿಮೀ ಹೊರ ವಲಯದಲ್ಲಿರುವ ಬಾವಿಗೆ ತೆರಳಿ ನೀರು ತರುತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ನಿತ್ಯವೂ ನೀರು ತುಂಬುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕೂಲಿ ಕೆಲಸಕ್ಕೆ ಹೋಗುವವರು ಕೂಡ ಒಂದೊಂದು ದಿನ ಕೆಲಸವನ್ನ ಬಿಟ್ಟು ಇಡೀ ದಿನ ನೀರು ತುಂಬುತ್ತಾರೆ.

ಇನ್ನೂ 20 ಕ್ಕೂ ಅಧಿಕ ಅಡಿ ಕೆಳಭಾಗದಲ್ಲಿರುವ ಬಾವಿಗಿಳಿದು ಮಹಿಳೆಯರು, ವೃದ್ದರು ನೀರನ್ನ ಮೇಲೆ ತರುತ್ತಾರೆ. ಜೀವದ ಹಂಗು ತೊರೆದು ಬಾವಿಗಿಳಿದು ನೀರು ಮೇಲೆ ತಂದು, ಅಲ್ಲಿಂದ ಕಿಮೀ ಗಟ್ಟಲೆ ತಲೆ ಮೇಲೆ ಕಂಕಳಲ್ಲಿ ಕೂಡ ಹೊತ್ತುಕೊಂಡು ಬರುವಷ್ಟರಲ್ಲಿ ಸಾಕಾಗಿ ಹೋಗುತ್ತೆ. ಮಕ್ಕಳು ಕೂಡ ಸೈಕಲ್ ಮೇಲೆ ಮನೆಗೆ ನೀರು ತುಂಬುತ್ತಾರೆ. ಮನುಷ್ಯರ ಜತೆಗೆ ಪ್ರಾಣಿಗಳು ಕೂಡ ಇಲ್ಲಿ ನೀರಿಗಾಗಿ ಒದ್ದಾಡುವ ಸ್ಥಿತಿ ಇದ್ದು, ಜಾನುವಾರುಗಳಿಗೆ ನೀರು ಇಲ್ಲದೇ ಬಾವಿಯಿಂದಲೇ ಅವುಗಳಿಗೂ ನೀರು ತಂದು ಹಾಕುತ್ತಾರೆ. ನಿತ್ಯದ ಕೆಲಸವನ್ನ ಬಿಟ್ಟು ನೀರು ತುಂಬುವುದನ್ನೇ ಕೆಲಸ ಮಾಡಿಕೊಂಡಿರುವ ಗ್ರಾಮಸ್ಥರು ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ರಾಯಚೂರು: ಕುಡಿಯುವ ನೀರಿಗಾಗಿ ನದಿಗೆ ಇಳಿದಿದ್ದ ಬಾಲಕನನ್ನ ಹೊತ್ತೊಯ್ದ ಮೊಸಳೆ

ಗ್ರಾಮದಲ್ಲಿ ಜಲ ಜೀವನ್ ಮಿಷನ್​ ಅಡಿಯಲ್ಲಿ ಮನೆ ಮನೆಗೂ ನಲ್ಲಿ ವ್ಯವಸ್ಥೆ ಇದ್ದು, ಆದರೆ, ಅದಕ್ಕೆ ಬೋರ್​ವೆಲ್ ಕನೆಕ್ಷನ್ ಇಲ್ಲದ ಕಾರಣ ನಲ್ಲಿಗಳು ಇದ್ದು ಇಲ್ಲದಂತಾಗಿದೆ. ಇದು ಬರೀ ಡೋಣವಾಡ ಗ್ರಾಮದಲ್ಲಿ ಅಷ್ಟೇ ಅಲ್ಲದೇ ಪಕ್ಕದ ಬೆಳಕುಡ ಸೇರಿ ಮೂರ್ನಾಲ್ಕು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಪಕ್ಕದಲ್ಲೇ ಕೃಷ್ಣಾ ನದಿ ಇದ್ದು, ಅಲ್ಲಿಂದ ನೀರು ತಂದು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಮಳೆಗಾಲ ಆರಂಭಕ್ಕೂ ಮುನ್ನವೇ ಈ ಗ್ರಾಮಗಳಲ್ಲಿ ಜನ ನೀರಿಗಾಗಿ ಪರಿತಪ್ಪಿಸುತ್ತಿದ್ದಾರೆ. ಶಾಶ್ವತ ನೀರಿನ ಪರಿಹಾರ ಒದಗಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ, ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ರೂ ಯಾರು ಇವರ ಸಮಸ್ಯೆಯನ್ನ ಆಲಿಸುತ್ತಿಲ್ಲ. ಇನ್ನಾದರೂ ಸ್ಥಳೀಯ ಶಾಸಕ ದುರ್ಯೋಧನ ಐಹೊಳೆ ಮತ್ತು ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನ ಮಾಡಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 am, Tue, 23 May 23