ಲಿಂಗಸುಗೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ; ಉಪ್ಪು ನೀರು ಕುಡಿಯಬೇಕಾದ ಅಸಹಾಯಕ ಪರಿಸ್ಥಿತಿಯಲ್ಲಿ ಜನತೆ
ಕೆರೆ ನೀರು ಖಾಲಿಯಾಗೋ ಮಾಹಿತಿ ಇದ್ದರೂ, ಪುರಸಭೆಯಿಂದ ದಿವ್ಯ ನಿರ್ಲಕ್ಷದ ಆರೋಪ ಮಾಡಲಾಗಿದೆ. ಪುರಸಭೆಯದ ಟ್ಯಾಂಕರ್ ಮೂಲಕ ಶುದ್ಧ ಕುಡಿಯೋ ನೀರು ಕೊಡದೇ ಬೇಜವಾಬ್ದಾರಿತನ ತೋರಿಸುತ್ತಿದೆ.
ರಾಯಚೂರು: ರಾಜ್ಯಾದ್ಯಂತ ಮಳೆ ಅವಾಂತರ ಸೃಷ್ಟಿಯಾದರೆ ರಾಯಚೂರಿನಲ್ಲಿ ಕುಡಿಯೋ ನೀರಿಗೆ (Water) ಹಾಹಾಕಾರ ಉಂಟಾಗಿದೆ. ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಕುಡಿಯೋ ನೀರಿಗೆ ಜನರು ಪರದಾಡುವಂತ್ತಾಗಿದೆ. ಪುರಸಭೆ ನಿರ್ಲಕ್ಷದಿಂದಾಗಿ ಕುಡಿಯೋ ನೀರಿನ ಮೀಸಲು ಕೆರೆ ಖಾಲಿಯಾಗಿದೆ. ಸುಮಾರು 50 ಎಕರೆ ಪ್ರದೇಶದ ಕುಡಿಯೊ ನೀರಿನ ಮೀಸಲು ಕೆರೆ ಖಾಲಿಯಾಗಿದ್ದು, 10 ದಿನಗಳಿಂದ ಕುಡಿಯುವ ನೀರಲ್ಲದೇ ಲಿಂಗಸುಗೂರು ಪಟ್ಟಣದ ಜನ ಕಂಗಾಲಾಗಿದ್ದಾರೆ. ಕೆರೆ ಖಾಲಿಯಾದ ಹಿನ್ನೆಲೆ ಪುರಸಭೆಯಿಂದ ಬೋರ್ ವೆಲ್ನ ಉಪ್ಪು ನೀರು ಸಪ್ಲೈ ಮಾಡಲಾಗುತ್ತಿದೆ. ಉಪ್ಪು ನೀರು ಸೇವನೆಯಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತಿದ್ದು, ಮಕ್ಕಳು, ವೃದ್ಧರಿಗೆ ವಾಂತಿ, ಭೇದಿ ಸಮಸ್ಯೆ ಉಂಟಾಗಿದೆ.
ಇದನ್ನೂ ಓದಿ: ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ: ಜೀವ ಪಣಕ್ಕಿಟ್ಟು, ಪ್ಯಾಂಟ್ ಬಿಚ್ಚಿ ಕೈಯಲ್ಲಿ ಹಿಡಿದು ಹಳ್ಳ ದಾಟುವ ಸ್ಥಿತಿ
ದಿನಪೂರ್ತಿ ದುಡಿದ ಹಣವನ್ನು ಚಿಕಿತ್ಸೆಗೆ ಖರ್ಚು ಮಾಡೋ ಸ್ಥಿತಿ ಎದುರಾಗಿದೆ ಎಂದು ಜನ ಕಣ್ಣೀರು ಹಾಕುವಂತ್ತಾಗಿದೆ. ಬೋರ್ ವೆಲ್ ನೀರು ಬಳಕೆಗೆ ಮಾತ್ರ ಯೋಗ್ಯವಾಗಿದ್ದು, ಕುಡಿಯಲು ಯೋಗ್ಯವಲ್ಲ. ಕೆರೆ ನೀರು ಖಾಲಿಯಾಗೋ ಮಾಹಿತಿ ಇದ್ದರೂ, ಪುರಸಭೆಯಿಂದ ದಿವ್ಯ ನಿರ್ಲಕ್ಷದ ಆರೋಪ ಮಾಡಲಾಗಿದೆ. ಪುರಸಭೆಯದ ಟ್ಯಾಂಕರ್ ಮೂಲಕ ಶುದ್ಧ ಕುಡಿಯೋ ನೀರು ಕೊಡದೇ ಬೇಜವಾಬ್ದಾರಿತನ ತೋರಿಸುತ್ತಿದೆ. ಕೃಷ್ಣಾ ನದಿಯ ನಾರಾಯಣಪುರ ಕಾಲುವೆ ಮೂಲಕ ಕೆರೆಗೆ ನೀರು ಸಂಗ್ರಹಣೆ ಮಾಡಲಾಗುತ್ತದೆ.
ರಾಯಚೂರಿನಲ್ಲಿ ತಪ್ಪದ ಕಲುಷಿತ ನೀರಿನ ಸಮಸ್ಯೆ
ರಾಯಚೂರಿನಲ್ಲಿ ಕಲುಷಿತ ನೀರಿನ ಸಮಸ್ಯೆ ಇನ್ನೂ ಬಗೆಹರಿಯದಿದ್ದು, ಸಿಂಧನೂರು ತಾಲ್ಲೂಕಿಗೂ ಕಲುಷಿತ ನೀರಿನ ಸಮಸ್ಯೆ ವ್ಯಾಪಿಸಿದೆ. ಚರ್ಮದ ಸಮಸ್ಯೆ, ಅಲರ್ಜಿಗೆ ಗ್ರಾಮಸ್ಥರು ತುತ್ತಾಗುತ್ತಿದ್ದಾರೆ. ಅವಾಂತರವಾದರೂ ಯಾವಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ರೋಗಿಗಳನ್ನ ಭೇಟಿಯಾಗಿ, ಸಮಸ್ಯೆ ಆಲಿಸಿಲ್ಲ. ಮಕ್ಕಳು, ವೃದ್ಧರು, ವಯಸ್ಕರೂ ಅಲರ್ಜಿ ಬಾಧಿಸುತ್ತಿದ್ದಾರೆ. ತುರಿಕೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಕೆರೆಯ ಕಲುಷಿತ ನೀರು ಕಡಿಯಲು ಬಳಕೆ ಮಾಡುತ್ತಿದ್ದು, ಸ್ನಾನ, ಅಡುಗೆಗೆ ಇದೇ ನೀರು ಅನಿವಾರ್ಯವಾಗಿದೆ. ತುರಿಕೆ ತಾಳಲಾರದೆ ಚಿಕ್ಕ ಮಕ್ಕಳ ಕಿರುಚಾಟ, ಗೋಳಾಡುತ್ತಿದ್ದಾರೆ. ಸದ್ಯ ಸುಮಾರು 30 ಕ್ಕೂ ಹೆಚ್ಚು ಜನರಿಗೆ ಇದೇ ಅಲರ್ಜಿ ಕಾಣಿಸಿಕೊಂಡಿದೆ.
ಕುಡಿಯೋ ನೀರಿಗಾಗಿ ಜನರ ಪರದಾಟ
ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಹಳೆ ಹೆಬ್ಬಾಳ ಗ್ರಾಮದಲ್ಲಿ ಕುಡಿಯೋ ನೀರಿಗಾಗಿ ಜನರು ಪರದಾಡುವಂತ್ತಾಗಿದೆ. ಬೆಣ್ಣೆ ತೋರಾ ನದಿಯ ಗಲೀಜು ನೀರನ್ನೆ ಕುಡಿಯಬೇಕಾದ ಸ್ಥಿತಿ ಉಂಟಾಗಿದ್ದು, ತುಂಬಿ ಹರಿಯುತ್ತಿರೋ ಬೆಣ್ಣೆ ತೋರಾ ನದಿಯಲ್ಲಿ ಪಂಪಸೆಟ್ಗಳು ಮುಳುಗಿವೆ. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪಸೆಟ್ಗಳು ನೀರಲ್ಲಿ ಜಲಾವೃತವಾಗಿವೆ. ಕಳೆದ ಮೂರು ದಿನಗಳಿಂದ ಕುಡಿಯೋ ನೀರಿಗಾಗಿ ಗ್ರಾಮದ ಜನರು ಪರದಾಡುವಂತ್ತಾಗಿದ್ದು, ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.