ಬೆಳಗಾವಿ, ಅಕ್ಟೋಬರ್ 29: ಲಿಂಗಾಯತ (Lingayat) ರಲ್ಲಿ ಎಸ್‌ಸಿ, ಎಸ್‌ಟಿ ಇದ್ದಾರೆ, ಸ್ವತಂತ್ರ ಧರ್ಮವಾದರೆ ಅವರಿಗೆ ಸೌಲಭ್ಯ ಸಿಗಲ್ಲ ಎಂದು ಕೇಂದ್ರ ಪ್ರಶ್ನಿಸಿದೆ. ಆದರೆ ಸಿಖ್ ಧರ್ಮಕ್ಕೆ 1963 ರಲ್ಲಿ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೇಂದ್ರ ನೀಡಿತು. ಸಿಖ್‌ರಲ್ಲಿರುವ ಎಸ್‌ಸಿ ಎಸ್‌ಟಿಗಳಿಗೆ ಸೌಲಭ್ಯ ಮುಂದುವರೆಸುವ ನಿರ್ಣಯವನ್ನು ಅಂದು ರಾಷ್ಟ್ರಪತಿ ಕೈಗೊಂಡರು. ಬೌದ್ಧ ಧರ್ಮದ ವಿಚಾರದಲ್ಲೂ ಕೇಂದ್ರ ಸರ್ಕಾರ, ರಾಷ್ಟ್ರಪತಿ ಇದೆ ನಿರ್ಣಯ ಕೈಗೊಂಡರು. ಈ ಎಲ್ಲ ದಾಖಲೆಗಳು ಕೇಂದ್ರ ಸರ್ಕಾರದ ಬಳಿಯೇ ಇವೆ. ಈಗ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡಲಿ ಎಂದು ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್.ಬಿ ಜಾಮದಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ನಮ್ಮಲ್ಲಿನ ಎಸ್‌ಸಿ, ಎಸ್‌ಟಿಗಳಿಗೆ ಈಗಿರುವ ಸೌಲಭ್ಯ ಮುಂದುವರೆಸಲಿ. ಒಂದು ವೇಳೆ ಲಿಂಗಾಯತರಿಗೆ ಇದನ್ನು ಅನ್ವಯ ಮಾಡದಿದ್ರೆ ತಾರತಮ್ಯ ಆಗಲಿದೆ. 1871 ರ ಜನಗಣತಿ ಪ್ರಕಾರ ಲಿಂಗಾಯತರನ್ನು ಹಿಂದುಗಳೆಂದು ಪರಿಗಣಿಸಲಾಗಿದೆ ಎಂದು ಕೇಂದ್ರ ಮತ್ತೊಂದು ಕಾರಣದಲ್ಲಿ ತಿಳಿಸಿದೆ. 1871 ರ ಅಂದಿನ ಮೈಸೂರು ರಾಜ್ಯದ ಗಣತಿಯಲ್ಲಿ ಲಿಂಗಾಯತ, ಜೈನರನ್ನು ಹಿಂದೂ ಧರ್ಮದಿಂದ ದೂರ ಇಡಲಾಗಿದೆ. ಈ ಕಾರಣ ಕೇಳುವ ಮುನ್ನ ಕೇಂದ್ರದ ಅಧಿಕಾರಿಗಳು ಇವನೆಲ್ಲ ಗಮನಿಸಿಲ್ಲವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಇಡೀ ದೇಶದಲ್ಲಿ ಜಾತಿ ಜನಗಣತಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ: ಸಿಎಂ ಸಿದ್ದರಾಮಯ್ಯ
1891ರಲ್ಲಿ ಮೈಸೂರು ಮಹಾರಾಜರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಆದೇಶ ನೀಡಿದ್ದಾರೆ. ಈ ಆದೇಶವೂ ಕೇಂದ್ರ ಸರ್ಕಾರದ ಬಳಿಯೇ ಇದೆ. ಈ ಎಲ್ಲ ಪ್ರತಿಯನ್ನು ನಾವು ಈ ಹಿಂದೆಯೂ ನೀಡಿದ್ದೇವೆ, ಈಗಲೂ ನೀಡುತ್ತೇವೆ. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯ ಆಧಾರರಹಿತವಾಗಿದ್ದು, ಮತ್ತೊಮ್ಮೆ ಪರಿಶೀಲಿಸಲಿ ಎಂದರು.
ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರವಾಗಿ ಮಾತನಾಡಿದ ಅವರು, ಸ್ವತಂತ್ರ ಧರ್ಮ ಒಪ್ಪಲ್ಲ, ಮಾನತ್ಯೆ ಕೊಡಲ್ಲ. ಹೋರಾಟದ ಬಳಿಕ ತಮ್ಮ ಮಾತನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿಕೊಟ್ಟಿದ್ದಾರೆ. ಸತ್ಯ, ದಾಖಲೆ, ಇತಿಹಾಸದ ಆಧಾರದ ಮೇಲೆ ಕೇಳುತ್ತೇವೆ. ಎಲ್ಲಾ ಪ್ರಯತ್ನ ಫಲಗಳು ನಿಷ್ಪಲ ಇನ್ನು ಆಗಿಲ್ಲ. ಹೋರಾಟ ಇನ್ನೂ ಪೂರ್ಣಗೊಂಡಿಲ್ಲ. ರಾಜಕೀಯ ಉದ್ದೇಶಕ್ಕೆ ಹಾರಕೆ ಉತ್ತರ ಕೊಟ್ಟಿಲ್ಲ. ಅಗತ್ಯ ಬಂದರೆ ರಾಜ್ಯ ಸರ್ಕಾರಕ್ಕೂ ನಿಯೋಗದೊಂದಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಂಬಂಧ ನಾಗಮೋಹನದಾಸ್ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿ ಅಂಗೀಕರಿಸಿ ಹಿಂದಿನ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ಪ್ರತಿ ಸಮೇತ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿಯನ್ನ ಕಳುಹಿಸಿತ್ತು. ವರದಿ ತಲುಪಿ ಎಂಟು ತಿಂಗಳ ಬಳಿಕ ಕೇಂದ್ರ ಸರ್ಕಾರವೂ ಮೂರು ಕಾರಣ ಕೇಳಿ ಪತ್ರ ಬರೆದಿದೆ. ಈ ಮೂರು ಕಾರಣ ಕೇಳಿ 8ನವೆಂಬರ್ 2018ಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದಿದೆ.
ಇದನ್ನೂ ಓದಿ: ಊಟ ಸಿಗದಿದ್ರೂ ಪರವಾಗಿಲ್ಲ, ಜನರಿಗೆ ನ್ಯಾಯ ತುಂಬಾ ಅಗತ್ಯ -ಸ್ಪೀಕರ್ ಯು.ಟಿ.ಖಾದರ್
ಈ ಮೂರು ಕಾರಣಗಳಿಗಾಗಿ ಲಿಂಗಾಯತ ಧರ್ಮ ಸ್ವತಂತ್ರ ಎಂದು ಘೋಷಿಸಲು ಕಷ್ಟವಾಗುತ್ತಿದೆ ಎಂದೂ ತಿಳಿಸಿತ್ತು. ಕೇಂದ್ರದ ಪತ್ರಕ್ಕೆ ನಾನು ಯಾವುದೇ ಕ್ರಮ ಜರುಗಿಸಲ್ಲ ಎಂದು ಅಂದಿನ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದರು. ನಂತರ ಸಿಎಂ ಆದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಲಿಂಗಾಯತ ಧರ್ಮ ಹೋರಾಟಕ್ಕೆ ವಿರುದ್ಧವಾಗಿದ್ದವರು. ಈ ಕಾರಣಕ್ಕೆ ನಾವು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಯಿತು ಎಂದಿದ್ದಾರೆ.
ವಿಜಯಪುರ ಜಿಲ್ಲೆಯನ್ನ ಬಸವನಾಡು ಮಾಡುವ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೊದಲು ಒಂದು ನಿರ್ಣಯಕ್ಕೆ ಬರಲಿ. ಮಂತ್ರಿಗಳಲ್ಲಿ ದ್ವಂದ್ವ ನಿಲುವಿದೆ, ಡಿಸಿ ನಿಲುವು ಕೂಡ ಬೇರೆಯೇ ಇದೆ. ಸರ್ಕಾರ ಈ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂಬುದು ನಮ್ಮ ಕಲ್ಪನೆ. ಇತ್ತೀಚಿನ ಪ್ರಸ್ತಾವನೆಯನ್ನ ನಾನು ಒಂದು ವಾರದಿಂದ ಮಾಧ್ಯಮಗಳಲ್ಲಿ ಗಮನಿಸುತ್ತಿರುವೆ. ಎಂಬಿ ಪಾಟೀಲ್ ಪ್ರಸ್ತಾವನೆಗೆ ಅದೇ ಜಿಲ್ಲೆಯ ಮತ್ತೋರ್ವ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯಪುರವನ್ನು ಬಸವನಾಡು ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ನಾನು ಈ ಹಿಂದೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದೆ. ಆಗ 17 ಜಿಲ್ಲೆ, ಪಟ್ಟಣಗಳ ಹೆಸರನ್ನು ಬದಲಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ ಎಂದರು.
ಬೆಳಗಾಂನ್ನು ಬೆಳಗಾವಿ, ಬಿಜಾಪುರವನ್ನು ವಿಜಯಪುರ ಮಾಡಲು ಶಿಫಾರಸು ಮಾಡಿದ್ದೆ. ಐದಾರೂ ವರ್ಷಗಳ ಬಳಿಕ ಕೇಂದ್ರ ಸರ್ಕಾರ ಹೆಸರು ಬದಲಿಸುವ ತೀರ್ಮಾನ ತೆಗೆದುಕೊಂಡಿತು. ಅಂತಿಮವಾಗಿ ಈ ಬಗ್ಗೆ ನಿರ್ಣಯ ಆಗಬೇಕಿರುವುದು ರಾಜ್ಯ ಸರ್ಕಾರದಲ್ಲಿ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಪ್ರಸ್ತಾವನೆ ಸಲ್ಲಿಕೆ ಆಗುತ್ತೋ? ಇಲ್ವೋ? ಎಂಬ ಬಗ್ಗೆ ನಿಖರ ಮಾಹಿತಿ ನನಗಿಲ್ಲ. ಸರ್ಕಾರದ ನಿರ್ಣಯಕ್ಕೆ ನಾವು ಬದ್ಧ, ಯಾವುದೇ ಕಾರಣಕ್ಕೂ ವಿರೋಧ ಮಾಡಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:43 pm, Sun, 29 October 23