ಬೆಳಗಾವಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಗೋಲಮಾಲ್ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಕಾರ್ಖಾನೆಯ ಆಡಳಿತ ಮಂಡಳಿಯು ರೈತರು ಹಾಗೂ ಅಮಾಯಕರ ಮೇಲೆ ಸಾಲ ತೆಗೆದಿದೆ. 169 ಮಂದಿಯ ಹೆಸರಿನಲ್ಲಿ ₹8 ಲಕ್ಷದವರೆಗೆ ಸಾಲ ಪಡೆಯಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾದದಲ್ಲಿ ಸಾಲ ಪಡೆಯಲಾಗಿದೆ. ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸುವಂತೆ ರೈತರು ಹಾಗೂ ವಂಚನೆಗೊಳಗಾದ ಅಮಾಯಕರು ಸಭೆ ನಡೆಸಿ ಆಗ್ರಹಿಸಿದರು. ಎಂ.ಕೆ.ಹುಬ್ಬಳ್ಳಿಯಲ್ಲಿ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸಿದ ರೈತರು, ಪ್ರಕರಣದ ಸೂಕ್ತ ತನಿಖೆ ನಡೆಸಲು ದೂರು ನೀಡಬೇಕೆಂದು ತೀರ್ಮಾನಿಸಿದರು. ಹೋರಾಟಗಾರ್ತಿ ಜಯಶ್ರೀ ಗೂರಣ್ಣನವರ್, ರೈತ ಕಲ್ಲಪ್ಪ ನೇತೃತ್ವ ವಹಿಸಿದ್ದರು.
2017-18ರ ಕಬ್ಬಿನ ಬಾಕಿ ಬಿಲ್, ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ದಾಸ್ತಾನು ಗೋಲ್ಮಾಲ್, ರೈತರು ಹಾಗೂ ಅಮಾಯಕರ ಹೆಸರಿನಲ್ಲಿ ಸಾಲ ತೆಗೆದುಕೊಳ್ಳಲಾಗಿದೆ ಎಂದು ರೈತರ ದೂರು ನೀಡಿದ್ದಾರೆ. ರೈತರು ನೀಡಿದ ದೂರು ಆಧರಿಸಿ ಸರ್ಕಾರ ಹಾಗೂ ಆಯುಕ್ತರ ಕಚೇರಿಯಿಂದ ತನಿಖೆಗೆ ಆದೇಶ ನೀಡಲಾಗಿದೆ. ತನಿಖಾ ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಕ್ಕರೆ ಆಯುಕ್ತರ ಕಚೇರಿ ಅಧಿಕಾರಿ ಶಿವಾನಂದ ಕಲಕೇರಿ ಟಿವಿ9ಗೆ ಮಾಹಿತಿ ನೀಡಿದರು.
ತನಿಖೆಗೆ ನಡೆಸಲೆಂದು ಜಿಲ್ಲಾ ಮಟ್ಟದ ಸಮಿತಿ ರೂಪಿಸಲಾಗಿದೆ. ತನಿಖೆ ನಡೆಸಿದ ನಂತರ ಅವರು ವರದಿ ನೀಡುತ್ತಾರೆ. ವರದಿ ಆಧರಿಸಿ ತಪ್ಪು ಮಾಡಿರುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಸಮಗ್ರ ತನಿಖೆ ನಡೆಸಿ ವರದಿ ನೀಡಲು ಮೂರು ತಿಂಗಳ ಅವಕಾಶ ಇರುತ್ತದೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ರೈತರು ಅಲ್ಲದವರ ಹೆಸರ ಮೇಲೂ ಸಾಲ ತೆಗೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ರೈತರು ನೀಡಿದ ದೂರು ಮತ್ತು ಸಚಿವ ಶಂಕರ ಪಾಟೀಲ್ ಮುನೆನಕೊಪ್ಪ ಅವರ ಆದೇಶದ ಮೇರೆಗೆ ಹೆಚ್ಚಿನ ತನಿಖೆ ಮಾಡಿ ವಿವರವಾಗಿ ವರದಿ ನೀಡಲು ಆದೇಶ ಮಾಡಲಾಗದೆ ಎಂದು ಸಕ್ಕರೆ ಆಯುಕ್ತಾಲಯದ ಶಿವಾನಂದ ಕಲಕೇರಿ ತಿಳಿಸಿದರು.