ಮುದೇನೂರು: ಕಲುಷಿತ ಕುಡಿಯುವ ನೀರು ಸೇವಿಸಿ ವ್ಯಕ್ತಿ ಸಾವು, 10 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ
ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಶಿವಪ್ಪ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರವು ₹ 10 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ.
ಬೆಳಗಾವಿ: ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದ ಮುದೇನೂರು ಗ್ರಾಮದ (Mudenur Village) ನಿವಾಸಿ ಶಿವಪ್ಪ (70) ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ (Bagalkot District Hospital) ಮೃತಪಟ್ಟರು. ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುದೇನೂರು ಗ್ರಾಮದ ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರು ಸೇರಿ ಕಲುಷಿತಗೊಂಡಿತ್ತು. ಇದೇ ನೀರು ಮನೆಗಳಿಗೆ ಸರಬರಾಜಾಗಿತ್ತು. ಕಲುಷಿತ ನೀರು ಸೇವನೆಯಿಂದ ಕೇವಲ 4 ದಿನಗಳ ಅಂತರದಲ್ಲಿ 94 ಜನರು ಅಸ್ವಸ್ಥರಾಗಿದ್ದಾರೆ. ಈ ಪೈಕಿ 44 ಪುರುಷರು, 30 ಮಹಿಳೆಯರು, 12 ಬಾಲಕರು, 8 ಬಾಲಕಿಯರು ಇದ್ದಾರೆ. ಬಹುತೇಕರಿಗೆ ವಾಂತಿ, ಬೇಧಿ ಸಮಸ್ಯೆ ಕಾಡುತ್ತಿದೆ. ಘಟನೆ ನಡೆದು 4 ದಿನವಾದರೂ ರಾಮದುರ್ಗ ತಹಶೀಲ್ದಾರ್ ಮಲ್ಲಿಕಾರ್ಜುನ್ ಮುದೇನೂರು ಗ್ರಾಮಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ವಸ್ಥಗೊಂಡಿರುವ ಇತರ ನಾಲ್ವರ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಬಾಗಲಕೋಟ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ‘ಆಸ್ಪತ್ರೆಗೆ ಕರೆತಂದಿರುವವರಿಗೆ ಉತ್ತಮ ಚಿಕಿತ್ಸೆ ಒದಗಿಸುತ್ತಿದ್ದೇವೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ ಪ್ರಕಾಶ್ ಬಿರಾದಾರ್ ಮಾಹಿತಿ ನೀಡಿದರು.
₹ 10 ಲಕ್ಷ ಪರಿಹಾರ
ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಶಿವಪ್ಪ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರವು ₹ 10 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.