ಬೆಳಗಾವಿ: ಮುಂಗಾರು (Monsoon) ಮಳೆ ವಿಳಂಬವಾಗಿರುವ ಹಿನ್ನೆಲೆ ಕೃಷಿಕರಿಗೆ ನೀರಿನ ಕೊರತೆ ಎದುರಾಗಿದ್ದು, ತಾನು ಬೆಳೆದ ಬೆಳೆಗಳನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಮುಂಗಾರು ಆಗಮನದಲ್ಲಿ 15 ದಿನಗಳ ವಿಳಂಬವು ಪ್ರಾಥಮಿಕವಾಗಿ ಭತ್ತವನ್ನು ಬೆಳೆಯುವ ಬೆಳಗಾವಿ (Belagavi) ತಾಲೂಕಿನ ರೈತರಿಗೆ ಸವಾಲಾಗಿದ್ದು, ಖಾಸಗಿ ಪೂರೈಕೆದಾರರಿಂದ ನೀರು ಖರೀದಿಸಿ ಭತ್ತದ ಕೃಷಿಗೆ ನೀರುಣಿಸಲು ಮುಂದಾಗಿದ್ದಾರೆ. ಆ ಮೂಲಕ ಹೆಚ್ಚಿದ ಬೀಜ ಮತ್ತು ಗೊಬ್ಬರದ ವೆಚ್ಚದ ಜೊತೆಗೆ ರೈತರು ನೀರಿನ ವೆಚ್ಚವನ್ನೂ ಭರಿಸಬೇಕಾಗಿದೆ.
ಇನ್ನೊಂದೆಡೆ, ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಖಾಸಗಿ ನೀರು ಪೂರೈಕೆದಾರರು ಬೆಲೆ ಏರಿಕೆ ಮಾಡಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಈಗ ರೈತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಈ ಹಿಂದೆ 2000 ಲೀಟರ್ ನೀರು ಇರುವ ಟ್ಯಾಂಕರ್‌ಗೆ 500 ರೂ. ನೀಡುತ್ತಿದ್ದ ರೈತರು ಈಗ 1,000 ರೂ.ಗೆ ಖರೀದಿಸಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.
ಬೆಳಗಾವಿ ತಾಲೂಕಿನ ದಕ್ಷಿಣ ಭಾಗದಲ್ಲಿ ಭತ್ತದ ಕೃಷಿ ಪ್ರಧಾನವಾಗಿದ್ದು, ಅಂಗೋಲ್, ವಡಗಾವಿ, ಸುಳಗಾ, ಯಳ್ಳೂರು, ದಮನೆ, ಮಜಗಾವಿ ಮತ್ತು ಅಕ್ಕಪಕ್ಕದ ಗ್ರಾಮಗಳ ರೈತರು ಬಾಸುಮತಿ, ಸಾಯಿರಾಂ, ಶುಭಾಂಗಿ, ಸೋನಾಮಸೂರಿ ಮುಂತಾದ ಬೆಳೆ ಬೆಳೆಯುತ್ತಾರೆ. ಸೋನಾಮಸೂರಿ ಅಕ್ಕಿಯನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಕೈಕೊಟ್ಟ ಮುಂಗಾರು, ಕೃಷಿ ಚಟುವಟಿಕೆಗೆ ಬ್ರೇಕ್; ಪ್ರಧಾನಿ ಮೋದಿಗೆ ಪತ್ರ ಬರೆದ ಗ್ರಾಮೀಣ ಕೂಲಿಕಾರರು
ರೈತರೊಬ್ಬರು ಹೇಳುವಂತೆ, ಒಂದು ಎಕರೆ ಭೂಮಿಗೆ ಒಂದು ಟ್ಯಾಂಕರ್ ನೀರು ಬೇಕಾಗುತ್ತದೆ. ಸದ್ಯ ಮಳೆ ಕೊರತೆ ಹಿನ್ನೆಲೆ ಭತ್ತದ ಕೃಷಿಗೆ ನೀರಿನ ಅವಶ್ಯಕತೆ ಇದ್ದು, ಎರಡು ಅಡಿ ಎತ್ತರಕ್ಕೆ ಬರುವವರೆಗೆ ಪ್ರತಿ ನಾಲ್ಕು ದಿನಕ್ಕೊಮ್ಮೆ ಅದೇ ಪ್ರಮಾಣದಲ್ಲಿ ನೀರು ಹಾಕಬೇಕು. ಇಲ್ಲವಾದಲ್ಲಿ ಬೆಳೆ ನಷ್ಟವಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯು ಆರಂಭದಲ್ಲಿ ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನದ ಮುನ್ಸೂಚನೆ ನೀಡಿತ್ತು. ಆದರೆ ಈಗ ಅದು ತಿಂಗಳ ಕೊನೆಯ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ನಡುವೆಯೂ ಸಕಾಲಕ್ಕೆ ಮಳೆಯಾಗುವ ನಿರೀಕ್ಷೆಯಲ್ಲಿ ಭತ್ತದ ರೈತರು ಗದ್ದೆ ಸಿದ್ಧಪಡಿಸಿ ಕೃಷಿ ಆರಂಭಿಸಿದ್ದಾರೆ. ಸುಮಾರು 4,000 ಎಕರೆ ಭೂಮಿಯನ್ನು ಭತ್ತದ ಕೃಷಿಗೆ ಮೀಸಲಿಡಲಾಗಿದೆ.
ಟ್ಯಾಂಕರ್ ನೀರು ಬಳಕೆಯಿಂದ ಉತ್ಪಾದನಾ ವೆಚ್ಚ ಏರಿಕೆಯಾಗಿದ್ದು, ಮಳೆ ವಿಳಂಬವಾದರೆ ಮತ್ತಷ್ಟು ಹೆಚ್ಚಲಿದೆ. ಭತ್ತದ ಬೆಳೆ ಒಂದು ಹಂತಕ್ಕೆ ಬರುವವರೆಗೆ ರೈತರು ಹೆಚ್ಚಿನ ನೀರನ್ನು ಖರೀದಿಸಬೇಕಾಗುತ್ತದೆ. ಬತ್ತಕ್ಕೆ ಇತರೆ ಬೆಳೆಗಳಿಗಿಂತ ಹೆಚ್ಚು ನೀರು ಬೇಕಾಗಿದ್ದು, ಮಧ್ಯ ಹಂತದಲ್ಲಿ ಸುಮಾರು 15ರಿಂದ 20 ದಿನಗಳ ಕಾಲ ನೀರಿನ ಅವಶ್ಯಕತೆ ಇದೆ. ಅಂತರ್ಜಲ ಮಟ್ಟ ಕಡಿಮೆಯಾಗಿರುವುದು ಮತ್ತು ಹೆಚ್ಚುತ್ತಿರುವ ಬೋರ್‌ವೆಲ್‌ಗಳಿಂದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಶೇ.30ರಷ್ಟು ಮಾತ್ರ ಬೆಳೆಯಾಗಿದೆ. ಸ್ವಂತ ನೀರಿನ ಮೂಲ ಹೊಂದಿರುವ ರೈತರು ಬೆಳೆಯನ್ನು ನಿಭಾಯಿಸಿ ಅಕ್ಕಪಕ್ಕದ ರೈತರಿಗೂ ನೀರು ಮಾರುತ್ತಿದ್ದಾರೆ. ಉತ್ತರ ಕರ್ನಾಟಕದ ಎಲ್ಲ ನದಿಗಳು ಬತ್ತಿ ಹೋಗಿರುವ ಕಾರಣ ಕಳೆದ ವರ್ಷ ಶೇ.70ರಷ್ಟು ಸಾಗುವಳಿ ಮಾಡಿದ್ದರೆ ಈ ಪ್ರದೇಶದಲ್ಲಿ ಶೇ.25ರಷ್ಟು ಮಾತ್ರ ಸಾಗುವಳಿಯಾಗಿದೆ ಎಂದು ಕೃಷಿ ಇಲಾಖೆ ಪ್ರಭಾರಿ ಉಪನಿರ್ದೇಶಕ ಕೊಂಗವಾಡ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ