ಬೆಳಗಾವಿ: ದೀಪಾವಳಿ (Deepavali) ಸಂಭ್ರಮದಲ್ಲಿ ಇರಬೇಕಿದ್ದ ರಾಮದುರ್ಗ (Ramdurg) ತಾಲೂಕಿನ ಮುದೇನೂರಿ ಗ್ರಾಮದ ಜನ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಕಲುಷಿತ ನೀರು ಕುಡಿದು ಕಳೆದ 3 ದಿನಗಳಲ್ಲಿ ಗ್ರಾಮದ 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ 50ಕ್ಕೂ ಹೆಚ್ಚು ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 5 ಮಂದಿಯ ಸ್ಥಿತಿ ಗಂಭೀರವಿದ್ದು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರು ಮಿಶ್ರಣವಾಗಿತ್ತು. ಇದನ್ನು ತಿಳಿದರೂ ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯವಹಿಸಿದಕ್ಕೆ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಗ್ರಾಮಕ್ಕೆ ರಾಯದುರ್ಗ ಶಾಸಕ ಮಹದೇವಪ್ಪ ಯಾದವಾಡ ಭೇಟಿ ನೀಡಿದ್ದು, ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದೀಪಾವಳಿ ವೇಳೆ ಬೆಂಗಳೂರಿನ ಹಲವೆಡೆ ಪಟಾಕಿ ಅವಘಡ
ಬೆಂಗಳೂರು: ದೀಪಾವಳಿ ವೇಳೆ ಬೆಂಗಳೂರಿನಲ್ಲಿ ಪಟಾಕಿ ಸಿಡಿದು ದಿನದಲ್ಲಿ ಮಕ್ಕಳು ಸೇರಿ 20 ಜನರಿಗೆ ಗಾಯಗಳಾಗಿವೆ. 20 ಮಂದಿ ಗಾಯಾಳುಗಳ ಪೈಕಿ ಐವರ ಕಣ್ಣುಗಳಿಗೆ ಅಲ್ಪ ಹಾನಿಯಾಗಿದ್ದು, ಒಬ್ಬನ ಕಣ್ಣು ಸಂಪೂರ್ಣ ಹಾನಿಯಾಗಿದೆ. ಗಾಯಾಳುಗಳಿಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿ ಬಿದ್ದ ಮೀನಿನ ಲಾರಿ
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಮೀನಿನ ಲಾರಿ ರಸ್ತೆಯಲ್ಲೇ ಮಗುಚಿ ಬಿದ್ದ ಘಟನೆ ಉಡುಪಿ ಜಿಲ್ಲೆಯ ಕಾಪುವಿನ ಉಚ್ಚಿಲ ಮೂಳೂರು ಸಲಪಿ ಮಸೀದಿ ಬಳಿ ನಡೆದಿದೆ. ಮೀನು ಟ್ರೇ ತುಂಬಿದ ಲಾರಿ ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿತ್ತು.
ಉಚ್ಚಿಲ ಮೂಳೂರು ಸಲಪಿ ಮಸೀದಿ ಬಳಿ ರಸ್ತೆ ಕಾಮಗಾರಿಯು ಸಲುವಾಗಿ ಡೈವರ್ಶನ್ ನೀಡಲಾಗಿತ್ತು. ಆದರೆ ಚಾಲಕ ಇದನ್ನು ಗಮನಿಸದಿದ್ದರಿಂದ, ನಿಯಂತ್ರಣ ತಪ್ಪಿ ಲಾರಿ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಮೀನು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ರಸ್ತೆ ಅಪಘಾತ ಓರ್ವ ಬೈಕ್ ಸವಾರ ಸಾವು
ತುಮಕೂರು: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಗೇಟ್ ಬಳಿ ನಡೆದಿದೆ. ಪಂಚಾಕ್ಷರಯ್ಯ (70) ಮೃತ ದುರ್ದೈವಿ. ಪಂಚಾಕ್ಷರಯ್ಯನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಸಾವನ್ನಪ್ಪಿದ್ದಾನೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Wed, 26 October 22