ಬೆಳಗಾವಿ ಅ.27: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಪುತ್ರ, ಕಾಂಗ್ರೆಸ್ (Congress) ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಹುಲಿ ಉಗುರಿನ ಪೆಂಡೆಂಟ್ (Tiger Claw Locket Row) ಧರಿಸಿರುವ ಫೋಟೋ ವೈರಲ್ ಆಗಿದೆ. ಈ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ನನ್ನ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಧರಿಸಿರುವುದು ಪ್ಲಾಸ್ಟಿಕ್ ಪೆಂಡೆಂಟ್. ಮದುವೆ ಸಮಯದಲ್ಲಿ ಯಾರೋ ನನ್ನ ಪುತ್ರನಿಗೆ ಗಿಫ್ಟ್ ಕೊಟ್ಟಿದ್ದರು. ಅದು ಒರಿಜಿನಲ್ ಪೆಂಡೆಂಟ್ ಅಲ್ಲ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಸಸ್ಯಾಹಾರಿ, ಹುಲಿ, ಜಿಂಕೆ, ಕೋಳಿ ಬಲಿಯನ್ನು ಇಷ್ಟಪಡಲ್ಲ. ನಮ್ಮ ಸಂಬಂಧಿಕರು ಬಂದಿದ್ದಾರೆ ಅವರನ್ನು ಬೀಳ್ಕೊಟ್ಟು ಬರುತ್ತೇನೆ. ಬಳಿಕ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗೂ ಉತ್ತರ ಕೊಡುತ್ತೇನೆ ಎಂದು ಹೋರಟರು.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಅರಣ್ಯಾಧಿಕಾರಿಗಳು ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಡಿಸಿಎಫ್ ಶಂಕರ್ ಕಲ್ಲೋಳಕರ್ ನೇತೃತ್ವದಲ್ಲಿ ಮೂರು ಜನ ಎಸಿಎಫ್, ಆರ್‌ಎಫ್‌ಒ ಮೂರು ಜನ, ಹದಿನೈದು ಜನ ಸಿಬ್ಬಂದಿ, ಓರ್ವ ವೆಟನರಿ ವೈದ್ಯ ಸೇರಿದಂತೆ 24 ಜನರ ತಂಡ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ: ಹುಲಿ ಉಗುರು ವಿವಾದ: ಈಗ ಅರಣ್ಯಾಧಿಕಾರಿ ಸರದಿ, ಆರ್‌ಎಫ್‌ಒ ವಿರುದ್ಧ ಕೇಳಿಬಂತು ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಆರೋಪ
ಪೆಂಡೆಂಟ್ ವಶಕ್ಕೆ ಪಡೆದು ಎಫ್ಎಸ್ಎಲ್ಗೆ ಕಳುಹಿಸುತ್ತೇವೆ. ಬೆಂಗಳೂರು ಇಲ್ಲವೇ ಹೈದರಾಬಾದ್ ಗೆ ಕಳುಹಿಸುತ್ತೇವೆ. ಒರಿಜಿನಲ್ ಅಥವಾ ನಕಲಿನಾ ಅಂತಾ ತಿಳಿದ ಬಳಿಕ ಹೇಳುತ್ತೇವೆ. ಪೆಂಡೆಂಟ್ ಸೈಜ್ ಎಷ್ಟಿದೆ ಅನ್ನೋದನ್ನ ನೋಡಿದ್ದೇವೆ. ಮೃಣಾಲ್ ಅವರ ಕಡೆಯಿಂದ ಹೇಳಿಕೆಯನ್ನ ಪಡೆಯುತ್ತೇವೆ. ಕಾನೂನಿನಡಿಯಲ್ಲಿ ಎಲ್ಲವನ್ನೂ ಮಾಡುತ್ತೇವೆ ಎಂದು ಡಿಸಿಎಫ್ ಶಂಕರ್ ಕಲ್ಲೋಳಕರ್ ಹೇಳಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರಿನ ಲಾಕೆಟ್ ಧರಿಸಿರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಲಕ್ಷ್ಮೀ ಹೆಬ್ಬಾಳಕರ್ ಅಕ್ಕನ ಮಗಳನ್ನು ಮದುವೆಯಾಗಿರುವ ರಜತ್ ಉಳ್ಳಾಗಡ್ಡಿಮಠ ಧರಿಸಿರುವ ಲಾಕೆಟ್ ಬಗ್ಗೆ ಚರ್ಚೆ ಶುರುವಾಗಿತ್ತು. ಮದುವೆ ಸಮಯದಲ್ಲಿ ಫೋಟೋ ಶೂಟ್ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದ ರಜತ್ ಫೋಟೋ ಈಗ ವೈರಲ್ ಆಗಿತ್ತು.
ಇಂದು ವಿಜಯಪುರದಲ್ಲಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರ ಶಾಶ್ವತ ಗೌಡ ಪಾಟೀಲ್ ಧರಿಸುತ್ತಿದ್ದ ಹುಲಿ ಉಗುರಿನ ಲಾಕೆಟ್ನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ಅದನ್ನು ಪರೀಕ್ಷೆಗೆ ಕಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Fri, 27 October 23