ಬರ ಸಂಕಷ್ಟದಲ್ಲೂ ರೈತನ ಸಾಮಾಜಿಕ ಕಳಕಳಿ: ಅಂಗನವಾಡಿ, ರಸ್ತೆ ನಿರ್ಮಾಣಕ್ಕೆ ಜಾಗ ದಾನ ಮಾಡಿದ ಬಡ ರೈತ!

Noble gesture by poor farmer: ಈ ಕುರಿತು ಮಾತನಾಡಿರುವ ರೈತ ಅಪ್ಪಣ್ಣಾ ಕಾನೂರೆ, ಅಂಗನವಾಡಿ ಕಟ್ಟಡ ಕಟ್ಟಲು ಹತ್ತು ಗುಂಟೆ ಜಾಗ ಬೇಕಾಗಿದೆ ಎಂದು ಗ್ರಾಮ ಪಂಚಾಯತಿಯವರು ಕೇಳಿದ್ದರು. ಬಾಡಿಗೆ ಮನೆಯಲ್ಲಿ ಅಂಗನವಾಡಿ ಶಾಲೆ ನಡೆಯುತ್ತಿರುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತಿತ್ತು. ಸ್ವಂತ ಕಟ್ಟಡ ಇರಲಿ ಅಂತಾ ಹತ್ತು ಗುಂಟೆ ಜಾಗ ಉಚಿತವಾಗಿ ನೀಡಿದ್ದೇನೆ. ಗ್ರಾಮದಲ್ಲಿ ಜಲಕುಂಭ, ಅಂಗನವಾಡಿ ಕಟ್ಟಡ ಸ್ಥಾಪಿಸಲು ಜಮೀನು ಕೊಟ್ಟಿದ್ದೇನೆ.

ಬರ ಸಂಕಷ್ಟದಲ್ಲೂ ರೈತನ ಸಾಮಾಜಿಕ ಕಳಕಳಿ: ಅಂಗನವಾಡಿ, ರಸ್ತೆ ನಿರ್ಮಾಣಕ್ಕೆ ಜಾಗ ದಾನ ಮಾಡಿದ ಬಡ ರೈತ!
ಬಡ ರೈತ ಅಪ್ಪಣ್ಣಾ ಕಾನೂರೆ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಸಾಧು ಶ್ರೀನಾಥ್​

Updated on: Nov 27, 2023 | 10:34 AM

ಆಸ್ತಿಗಾಗಿ ಸ್ವಂತ ಅಣ್ಣ ತಮ್ಮಂದಿರೇ ದಾಯಾದಿಗಳಾಗಿರುವುದನ್ನು ನೀವು ನೋಡಿರುತ್ತೀರಾ. ಕೇಳಿರುತ್ತೀರಾ. ಒಂದೇ ಒಂದು ಅಡಿ ಜಾಗಕ್ಕೆ ಬಡೆದಾಟವಾಗುವ ಇಂದಿನ ಕಾಲದಲ್ಲಿ ಇಲ್ಲೋರ್ವ ಬಡ ರೈತ ತನ್ನ ಗ್ರಾಮದ ಬಡ ಜನರ ಒಳಿತಿಗೆ ಜಮೀನು ದಾನ ಮಾಡಿ ಮಾದರಿಯಾಗಿದ್ದಾನೆ. ಅಷ್ಟಕ್ಕೂ ಯಾರು ಆ ಅನ್ನದಾತ ಅಂತೀರಾ ಈ ಸ್ಟೋರಿ ನೋಡಿ‌. ಹೌದು ಇಂದಿನ ಕಾಲದಲ್ಲಿ ಅದೆಷ್ಟೋ ಶ್ರೀಮಂತರು ತಮಗೆ ಮೂರು ಜನ್ಮಕ್ಕಾಗೋವಷ್ಟು ಆಸ್ತಿ ಇದ್ದರೂ ಯಾವುದೇ ರೀತಿ ಬಡವರಿಗೆ ಸಹಾಯ ಮಾಡದೇ ತಮ್ಮ ಆಸ್ತಿ ವೃದ್ದಿ ಮಾಡುವ ಚಿಂತನೆಯಲ್ಲಿರುತ್ತಾರೆ. ಎಲ್ಲಿ ದಾನ‌ ಮಾಡಿದ್ರೆ ತಮ್ಮ ಆಸ್ತಿ ಕಡಿಮೆ ಆಗುತ್ತೆ ಅಂತಾ ಚಿಂತಿಸುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಇಲ್ಲೊಬ್ಬ ರೈತ ಗ್ರಾಮಸ್ಥರ ಅನುಕೂಲಕ್ಕೆ ತನಗಿದ್ದ ಒಂದು ಎಕರೆ ಜಮೀನಿನಲ್ಲಿ ಹತ್ತು ಗುಂಟೆ ಜಾಗ ಉಚಿತವಾಗಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹರಗಾಪೂರ ಗ್ರಾಮದ ( haragapur in hukkeri village in belagavi) ಬಡ ರೈತ ಅಪ್ಪಣ್ಣಾ ಕಾನೂರೆ (poor farmer appanna kanore) ಎಂಬುವರು ತಮಗಿದ್ದ ಅಲ್ಪ ಪ್ರಮಾಣದ ಒಂದು ಎಕರೆ ಜಮೀನಿನ ಶೇಕಡ 25ರಷ್ಟು ಭಾಗ ಅಂದ್ರೆ 10 ಗುಂಟೆ ಜಮೀನನ್ನ ಗ್ರಾಮದ ದಲಿತ ಕಾಲೋನಿಯಲ್ಲಿ ಅಂಗನವಾಡಿ ನಿರ್ಮಾಣ ಹಾಗೂ ಕುಡಿಯುವ ನೀರು ಪೂರೈಸುವ ಜಲ ಕುಂಭ ನಿರ್ಮಾಣಕ್ಕೆ ಉಚಿತವಾಗಿ ನೀಡಿ ಮಾದರಿಯಾಗಿದ್ದಾರೆ.

ಈ ಕುರಿತು ಮಾತನಾಡಿರುವ ರೈತ ಅಪ್ಪಣ್ಣಾ ಕಾನೂರೆ, ಅಂಗನವಾಡಿ ಕಟ್ಟಡ ಕಟ್ಟಲು ಹತ್ತು ಗುಂಟೆ ಜಾಗ ಬೇಕಾಗಿದೆ ಎಂದು ಗ್ರಾಮ ಪಂಚಾಯತಿಯವರು ಕೇಳಿದ್ದರು. ಬಾಡಿಗೆ ಮನೆಯಲ್ಲಿ ಅಂಗನವಾಡಿ ಶಾಲೆ ನಡೆಯುತ್ತಿರುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತಿತ್ತು. ಸ್ವಂತ ಕಟ್ಟಡ ಇರಲಿ ಅಂತಾ ಹತ್ತು ಗುಂಟೆ ಜಾಗ ಉಚಿತವಾಗಿ ನೀಡಿದ್ದೇನೆ. ಗ್ರಾಮದಲ್ಲಿ ಜಲಕುಂಭ, ಅಂಗನವಾಡಿ ಕಟ್ಟಡ ಸ್ಥಾಪಿಸಲು ಜಮೀನು ಕೊಟ್ಟಿದ್ದೇನೆ. ನನ್ನ ಮಗ ಇಲ್ಲ, ಮೊಮ್ಮಕ್ಕಳ ಹೆಸರು ಉಳಿಯಲಿ ಎಂದು ಭೂಮಿ ನೀಡಿದ್ದೇನೆ ಎಂದು ಹೇಳಿದ್ದಾರೆ.

Also read: ಕುಗ್ರಾಮದಲ್ಲಿ ಹುಟ್ಟಿ, ಅಂಧತ್ವವನ್ನ ಮೀರಿ ದೇಶಕ್ಕೆ ಎರಡು ಚಿನ್ನದ ಪದಕ ಗೆದ್ದು ತಂದ ಸಾಧಕಿಯನ್ನು ಕಡೆಗಣಿಸಿದ ಸರ್ಕಾರ

ಇಷ್ಟು ದಿನ ಹರಗಾಪೂರ ಗ್ರಾಮದಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಶಾಲೆ ನಡೆಸಲಾಗುತ್ತಿತ್ತು. ಸರಕಾರದಿಂದ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಆದರೂ ಯೋಗ್ಯ ಜಾಗ ಇರದ ಕಾರಣ ಕಟ್ಟಡ ನಿರ್ಮಾಣವಾಗಿರಲಿಲ್ಲ. ಹೀಗಾಗಿ ಬಡ ವಿದ್ಯಾರ್ಥಿಗಳಿಗೆ ಅನಕೂಲಕ್ಕಾಗಿ ತನ್ನ ಬಳಿಯಿದ್ದ ಒಂದು ಎಕರೆ ಜಮೀನಿದಲ್ಲಿನ 10 ಗುಂಟೆ ಜಾಗ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಜಲಕುಂಭ ನಿರ್ಮಾಣಕ್ಕೆ ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಿ ಅಪ್ಪಣ್ಣ ಮಾನವೀಯತೆ ಮೆರೆದಿದ್ದಾರೆ.

ಅಲ್ಲದೇ ದಲಿತ ಕಾಲೋನಿಯಲ್ಲಿ ರಸ್ತೆ ನಿರ್ಮಾಣಕ್ಕೂ ಜಾಗೆಯನ್ನ ಬಿಟ್ಟು ಕೊಟ್ಟಿದ್ದಾರೆ. ರೈತರ ಹೃದಯ ವೈಶಾಲತೆಗೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಗ್ರಾಮ ಪಂಚಾಯತಿ ಸದಸ್ಯ ಪವನ್ ಪಾಟೀಲ್ ಈಗಿನ ಕಾಲದಲ್ಲಿ ಆಸ್ತಿ ಸಲುವಾಗಿ ಜಗಳವಾಡುತ್ತಿರುತ್ತಾರೆ. ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗಲಿ ಎಂದು ಹತ್ತು ಗುಂಟೆ ಜಾಗ ನೀಡಿದ್ದು ನಿಜಕ್ಕೂ ಮಾದರಿ. ನಮ್ಮೂರಿನ ಭೀಮ ನಗರದಲ್ಲಿ ಹನ್ನೆರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಅಂಗನವಾಡಿ ನಡೆಯುತ್ತಿತ್ತು. ಸುಸಜ್ಜಿತ ಕಟ್ಟಡ ಇರಲಿ ಹಾಗೂ ಜಲಕುಂಭ ಸ್ಥಾಪನೆಗೂ ಜಮೀನು ಬೇಕಿತ್ತು ಇದಕ್ಕೆಲ್ಲಾ ಅಪ್ಪಣ್ಣ ಕಾನೂರೆ ಉಚಿತವಾಗಿ ಹತ್ತು ಗುಂಟೆ ಜಮೀನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ತನ್ನ ಬಳಿ ಇರುವ ಅಲ್ಪ ಜಮೀನನ್ನ ಲೆಕ್ಕಿಸದೇ ತನ್ನ ಗ್ರಾಮದ ಬಡ ಜನರಿಗೆ ಶಿಕ್ಷಣ, ಕುಡಿಯುವ ನೀರು ಹಾಗೂ ರಸ್ತೆ ನಿರ್ಮಾಣಕ್ಕೆ ತನ್ನ ಜಮೀನು ದಾನ ಮಾಡಿರುವ ಬಡ ರೈತ ಅಪ್ಪಣ್ಣಾ ನಿಜಕ್ಕೂ ಮಾದರಿಯಾಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ