ಬೆಳಗಾವಿ: ಅಂಗಡಿ ಮಾಲಕಿಗೆ ಚೀಟಿ ತೋರಿಸಿ ಮರಳು ಮಾಡಿ ಮಾಂಗಲ್ಯ ಸರ ಕದ್ದ ಯುವಕ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದಲ್ಲಿನ ಕಿರಾಣಿ ಅಂಗಡಿಗೆ ಓರ್ವ ಯುವಕ ಗುಟ್ಕಾ ಖರೀದಿಸುವ ನೆಪದಲ್ಲಿ ಬಂದಿದ್ದನು. ಅಂಗಡಿಯಲ್ಲಿದ್ದ ಮಾಲಕಿ ಸುವರ್ಣ ಪವಾರ್ ಅವರಿಗೆ ಕೈ ಸನ್ನೆ ಮೂಲಕ ತೆಂಗಿನಕಾಯಿ, ಉದಿನಕಡ್ಡಿ ಕೇಳಿದ್ದನು. ಬಳಿಕ ಸುವರ್ಣ ಪವಾರ್ ಅವರಿಗೆ ಯುವಕ ಯಾವುದೋ ಚೀಟಿ ತೋರಿಸಿದ್ದಾನೆ. ಮುಂದೇನಾಯ್ತು ಈ ಸ್ಟೋರಿ ಓದಿ
ಚಿಕ್ಕೋಡಿ ನ.27: ಕಾಂತಾರ (Kantara) ಚಿತ್ರದಲ್ಲಿನ ಅಂಧ ಪಾತ್ರಧಾರಿಗಳು ಪೊಲೀಸರಿಗೆ ಅರಿವಾಗದಂತೆ ಮಾಯಾಜಾಲ ರೂಪಿಸಿ ಠಾಣೆಯಲ್ಲಿನ ಹಣವನ್ನು ಕಳುವು ಮಾಡುತ್ತಾರೆ. ಇದೇರೀತಿ ಗಡಿನಾಡು ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿಯಲ್ಲೂ (Chikkodi) ನಡೆದಿದೆ. ಆದರೆ ಈ ಪ್ರಕರಣ ಸ್ಪಲ್ಪ ವಿಭಿನ್ನವಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ “ಚೀಟಿ ಯುವಕ” ಆಕ್ಟೀವ್ ಆಗಿದ್ದಾನೆ. ಮಾಲಿಕರ ಎದುರೇ ಅವರಿಗೆ ಅರಿವಾಗದಂತೆ ಚಿನ್ನ ಲೂಟಿ ಮಾಡಿದ್ದಾನೆ. ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದಲ್ಲಿನ ಕಿರಾಣಿ ಅಂಗಡಿ ಮಾಲಕಿಗೆ ತನ್ನ ಮಾಯಾಜಾಲದ ಮೂಲಕ ಯುವಕ ಆಕೆಯ ಚಿನ್ನದ ಮಾಂಗಲ್ಯ ದೋಚಿ ಪರಾರಿಯಾಗಿದ್ದಾನೆ. ಘಟನೆ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಓರ್ವ ಯುವಕ ಗುಟ್ಕಾ ಖರೀದಿ ನೆಪದಲ್ಲಿ ಕಿರಾಣಿ ಅಂಗಡಿಗೆ ಬಂದಿದ್ದನು. ಅಂಗಡಿಯಲ್ಲಿದ್ದ ಮಾಲಕಿ ಸುವರ್ಣ ಪವಾರ್ ಅವರಿಗೆ ಕೈ ಸನ್ನೆ ಮೂಲಕ ತೆಂಗಿನಕಾಯಿ, ಉದಿನಕಡ್ಡಿ ಕೇಳಿದ್ದನು. ಬಳಿಕ ಸುವರ್ಣ ಪವಾರ್ ಅವರಿಗೆ ಯುವಕ ಯಾವುದೋ ಚೀಟಿ ತೋರಿಸಿದ್ದಾನೆ. ಚೀಟಿ ನೋಡುತ್ತಿದ್ದಂತೆ ಸುವರ್ಣ ಅವರಿಗೆ ತಲೆ ಸುತ್ತಿದ ಅನುಭವವಾಗಿದೆ.
ಇದನ್ನೂ ಓದಿ: ಬೆಂಗಳೂರು ಪೊಲೀಸರನ್ನು ನಕ್ಕು ನಗಿಸಿದ ಒಂದು ಕಂಚಿನ ಚೊಂಬು ಕಳುವು ಪ್ರಕರಣ!
ಬಳಿಕ ಯುವಕ ತಾನು ತೋರಿಸಿದ ಚೀಟಿಯಲ್ಲಿ ಚಿನ್ನದ ಮಾಂಗಲ್ಯ ಇಡುವಂತೆ ಹೇಳಿದ್ದಾನೆ. ಸುವರ್ಣ ಅವರು ತಮಗೆ ಅರಿಯದೇ ಚಿನ್ನದ ಮಾಂಗಲ್ಯ ಸರವನ್ನು ತಗೆದು ಚೀಟಿಯಲ್ಲಿ ಇಟ್ಟಿದ್ದಾರೆ. ಬಳಿಕ ಯುವಕ ಮಾಂಗಲ್ಯ ಸರದ ಚೀಟಿಯನ್ನು ಕಟ್ಟಿ ಡ್ರಾವರ್‌ನಲ್ಲಿ ಇಡುವಂತೆ ಸುವರ್ಣ ಅವರಿಗೆ ಹೇಳಿದ್ದಾನೆ. ಅದರಂತೆ ಸುವರ್ಣ ಅವರು ಚೀಟಿಯನ್ನು ಡ್ರಾವರ್‌ನಲ್ಲಿ ಇಟ್ಟಿದ್ದಾರೆ. ಬಳಿಕ ಯುವಕ ತನ್ನ ಜೇಬಿನಲ್ಲಿದ್ದ ಮರಳು ತುಂಬಿದ ಚೀಟಿಯನ್ನು ಸುವರ್ಣ ಅವರಿಗೆ ಕೊಟ್ಟು ಇದನ್ನೂ ಡ್ರಾವರ್‌ನಲ್ಲಿಡಲು ಹೇಳಿದ್ದಾನೆ. ಸುವರ್ಣ ಅವರು ಅದನ್ನೂ ಡ್ರಾವರ್‌ನಲ್ಲಿ ಇಟ್ಟಿದ್ದಾರೆ.
ನಂತರ ಯುವಕ ಮರಳು ತುಂಬಿದ ಚೀಟಿಯನ್ನು ಡ್ರಾವರ್ನಲ್ಲೇ ಬಿಟ್ಟು, 15 ಗ್ರಾಂ ತೂಕದ ಚಿನ್ನದ ಮಾಂಗಲ್ಯವನ್ನು ಇಟ್ಟಿದ್ದ ಚೀಟಿಯನ್ನು ತಗೆದುಕೊಂಡು ಪರಾರಿಯಾಗಿದ್ದಾನೆ. ಕಣ್ಣು ಮುಂದೆಯೇ ಚಿನ್ನದ ಮಾಂಗಲ್ಯವಿದ್ದ ಚೀಟಿ ತಗೆದುಕೊಂಡು ಹೋದರೂ ಸುವರ್ಣ ಅವರಿಗೆ ಅರಿವೇ ಇಲ್ಲ. ಘಟನೆಯ ಸಂಪೂರ್ಣ ದೃಶ್ಯ ಕಿರಾಣಿ ಅಂಗಡಿಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅರ್ಧ ಗಂಟೆ ಬಳಿಕ ಕೊರಳಲ್ಲಿ ಮಾಂಗಲ್ಯ ಸರ ಇಲ್ಲದ್ದು ನೋಡಿ ಗಾಬರಿಯಾದ ಸುವರ್ಣ ಅವರು ಪತಿಗೆ ವಿಷಯ ತಿಳಿಸಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಚಾಲಾಕಿ ಯುವಕನ ಕಳ್ಳಾಟ ಬಯಲಾಗಿದೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Mon, 27 November 23