
ಬೆಳಗಾವಿ: ನಾವು ಯಾರು ಧಮ್ಕಿ ಹಾಕಿಲ್ಲ. ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ (2A Reservation) ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಧಮ್ಕಿ ಹಾಕಿ ಮೀಸಲಾತಿ ಪಡಿಯುತ್ತಿದ್ದಾರೆ ಎಂಬ ಸಚಿವ ಆರ್. ಅಶೋಕ್ ಹೇಳಿಕೆ ವಿಚಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. ಡಿ. 29ರಂದು ಮೀಸಲಾತಿ ಪ್ರಕಟಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾವು ಯಾರಿಗೂ ಧಮ್ಕಿ ಹಾಕಿಲ್ಲವೆಂದರು. ಆರ್.ಅಶೋಕ್ ಹಳೇ ಮೈಸೂರು ಭಾಗದಲ್ಲಿ 50 ಸೀಟ್ ಗೆಲ್ಲಿಸಿಕೊಂಡು ಬರಲಿ. ಅವಾಗ ಮೀಸಲಾತಿ ನೀಡುವ ಬಗ್ಗೆ ನೋಡೋಣ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.
ದೇವೇಗೌಡ್ರ ರೀತಿ ಅಶೋಕ್ ಸೀಟು ಗೆದ್ದು ಬರಲಿ. ನಾವು ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಬಿಜೆಪಿ ಹಿಂದೂಗಳನ್ನ ಗೆಲ್ಲಿಸಿ ತರುತ್ತೇವೆ. ಬರಿ ಕಥೆ ಹೇಳಿದ್ರೆ ಸಾಲದು. ನಾವು ಯಾರಿಗೂ ಚಾಲೆಂಜ್ ಮಾಡುವುದಿಲ್ಲ. ಧಮ್ಕಿ ಅಂದಿದಕ್ಕೆ ಉತ್ತರ ಕೊಡುತ್ತಿದ್ದೇನೆ. 29ಕ್ಕೆ ಯಾವುದೇ ಸಮುದಾಯಕ್ಕೆ ಅಸಮದಾನ ಆಗದ ರೀತಿಯಲ್ಲಿ ಮೀಸಲಾತಿಯನ್ನ ವಿಂಗಡನೆ ಮಾಡಿ, ಸಾಮಾಜಿಕ ನ್ಯಾಯ ಒದಗಿಸೋದಾಗಿ ಭರವಸೆ ಇದೆ. ಮಾಡು ಇಲ್ಲವೆ ಮಡಿ ಹೋರಾಟ ಮಾಡುತ್ತಾರೆ ಎಂಬ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದು, ಯಾಕೆ ಮಡಿಬೇಕು ನಮಗೆ ಬೇರೆ ಕೆಲಸ ಇಲ್ವಾ. 2ಎ ಆದರೂ ಕೊಡಲಿ 2Z ಆದರೂ ಕೊಡಲಿ. ಆದರೆ 2ಎಗೆ ಇರುವ ಎಲ್ಲಾ ಮಾನದಂಡುಗಳು ಅದ್ರಲ್ಲಿ ಇರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪ್ರಕಟಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುತ್ತದೆ: ಬಸನಗೌಡ ಯತ್ನಾಳ್
2ಎಯಲ್ಲಿರುವ 107 ಜಾತಿಗಳಿಗೆ ಅನ್ಯಾಯವಾಗದಂತೆ ಗೌಡ, ಲಿಂಗಾಯಿತ, ಪಂಚಮಸಾಲಿ ಇವರಿಗೆ ನೀಡಲಿ. ನಾವು ಯಾರದ್ದೇ ಮೀಸಲಾತಿ ಕಸಿದುಕೊಳ್ತಿಲ್ಲಾ. ಅವರಿಗೂ ನೀಡಲಿ ನಮಗೂ ನೀಡಲಿ. ಕೆಲವೊಂದು ಸಮುದಾಯಗಳು 3ಬಿ, 2ಎ ಹಾಗೂ ಅಲ್ಪಸಂಖ್ಯಾತರಲ್ಲಿದ್ದಾರೆ. ಅವರಿಗೆ ಒಂದೇ ವರ್ಗದಲ್ಲಿ ಸೀಮಿತಗೊಳಿಸಿ. ಮುಸ್ಲಿಂರು ಹಿಂದುಳಿದ ವರ್ಗ ಎ ಹಾಗೂ ಅಲ್ಪಸಂಖ್ಯಾತ ವರ್ಗದಲ್ಲಿದ್ದಾರೆ. ಅವರನ್ನ ಒಂದು ಕಡೆ ಹಾಕಿ, ಉಳಿಕೆ ಮೀಸಲಾತಿ ಪ್ರಮಾಣವನ್ನ ಒಕ್ಕಲಿಗರಿಗಾಗಿ ಪಂಚಮಸಾಲಿಗಾಗಿ ಹಂಚಿ. ಒಕ್ಕಲಿಗರಿಗೆ ಮೀಸಲಾತಿ ಕೊಡವಲ್ಲಿ ನಮ್ಮ ಆಕ್ಷೇಪವಿಲ್ಲಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇದನ್ನೂ ಓದಿ: ನಾಳೆ ವಿಧಾನಸಭೆ ಅಧಿವೇಶನದಲ್ಲಿ SC, ST ಮೀಸಲಾತಿ ಹೆಚ್ಚಳ ವಿಧೇಯಕ ಸೇರಿ ಒಟ್ಟು 4 ಮಸೂದೆ ಮಂಡನೆ
ಈ ಕುರಿತಾಗಿ ಬೆಂಗಳೂರಿನಲ್ಲಿ ಟಿವಿ9ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದು, ರಾಜಕೀಯ ಶಕ್ತಿಯನ್ನು ಇಟ್ಟುಕೊಂಡು ಮೀಸಲಾತಿ ಕೊಡುವುದಲ್ಲ. ಶಿಕ್ಷಣ, ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಕೊಡುವುದು. ಅದೇ ಮಾನದಂಡ ಇಟ್ಟು ಪಂಚಮಸಾಲಿಗಳು ಮೀಸಲಾತಿ ಕೇಳ್ತಿದ್ದಾರೆ. ಶಿಕ್ಷಣ, ಆರ್ಥಿಕವಾಗಿ ಹಿಂದುಳಿದವರೆಂದು ಮೀಸಲಾತಿ ಕೇಳುತ್ತಿದ್ದೇವೆ. ರಾಜಕೀಯವಾಗಿ ಮೀಸಲಾತಿ ನೀಡಲ್ಲ. ಒಂದೊಮ್ಮೆ ಅವರು ಬಲಾಢ್ಯರು ಅಂದ್ರೆ ಮೀಸಲಾತಿಯನ್ನೇ ನೀಡಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯವಾಗಿ ಮಾತಾಡಬಾರದಿತ್ತು ಎಂದರು.
ಒಕ್ಕಲಿಗ ಸಮುದಾಯದವರು ಭೂಮಿ ನಂಬಿಕೊಂಡು ಬದುಕುತ್ತಿದ್ದಾರೆ. ಒಕ್ಕಲಿಗ ಸಮುದಾಯ ವಿರೋಧ ಮಾಡಿ ಸರ್ಕಾರ ಮಾಡಲು ಆಗಲ್ಲ. ಒಕ್ಕಲಿಗರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಯಾರ ಸರ್ಟಿಫಿಕೆಟ್ ಬೇಕಿಲ್ಲ. ನಮಗೆ ವಿಶ್ವಾಸವಿದೆ, ಸಿಎಂ ಕಾನೂನಿನ ಅಡಿಯಲ್ಲಿ ನ್ಯಾಯ ಒದಗಿಸ್ತಾರೆ. ಪಂಚಮಸಾಲಿ ಸಮುದಾಯಕ್ಕೂ ಸಿಎಂ ಬೊಮ್ಮಾಯಿ ನ್ಯಾಯ ಒದಗಿಸಲಿ ಎಂದು ಸಚಿವ ಡಾ.ಸುಧಾಕರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:44 pm, Fri, 23 December 22