ವಕೀಲ ಮಗಳ ಬರ್ತ್ಡೇ ಆಚರಿಸಲು ಬೆಳಗಾವಿ ಸುವರ್ಣ ಸೌಧ ಬಾಡಿಗೆ ಕೇಳಿದ್ಯಾಕೆ? ಅಸಲಿ ಕಾರಣ ಇಲ್ಲಿದೆ
ಬೆಳಗಾವಿಯ ವಕೀಲ ಮಲ್ಲಿಕಾರ್ಜುನ ದುಂಡಪ್ಪ ಚೌಕಾಶಿ ಸುವರ್ಣ ಸೌಧದಲ್ಲಿ ಮಗಳ ಜನ್ಮದಿನವನ್ನು ಆಚರಿಸಲು ಅನುಮತಿ ಕೋರಿದ್ದಾರೆ.

ಶುಭಕಾರ್ಯಗಳಿಗೆ ಕಲ್ಯಾಣ ಮಂಟಪ ಅಥವಾ ಸಭಾಂಗಣಗಳನ್ನು ಬಾಡಿಗೆಗೆ ಕೇಳುವುದು ಸಹಜ, ಆದರೆ ಬೆಳಗಾವಿ ಜಿಲ್ಲೆಯ ಗೋಕಾಕ್ ಕೋರ್ಟ್ ವಕೀಲ ವೃತ್ತಿ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ದುಂಡಪ್ಪ ಚೌಕಾಶಿ ಅವರು ತಮ್ಮ ಮಗಳ ಬರ್ತಡೇಯನ್ನು ಸುವರ್ಣ ಸೌಧದಲ್ಲಿ ಆಚರಿಸಲು ಅಧಿಕಾರಿಗಳ ಬಳಿ ಅನುಮತಿ ಕೇಳಿದ್ದಾರೆ. ಇದಕ್ಕೆ ಕಾರಣವೇನೆಂಬುದರ ಕುರಿತು ಟಿವಿ9 ಕನ್ನಡ ಡಿಜಿಟಲ್ ನೊಂದಿಗೆ ಮಲ್ಲಿಕಾರ್ಜುನ ಮಾತನಾಡಿದ್ದಾರೆ. ಇಲ್ಲಿದೆ ಓದಿ
ಹೌದು ಇವರು ಒಂದು ದಿನ ತಮ್ಮ 6 ವರ್ಷದ ಮಗಳನ್ನು ಬೆಳಗಾವಿಯಿಂದ ಧಾರವಾಡಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾಣುವ ಸುವರ್ಣ ಸೌಧವನ್ನು ಮಗಳು ನೋಡಲು ಇಚ್ಚಿಸಿದಳು. ಹೀಗಾಗಿ ವಕೀಲರಾದ ಇವರು ಸುವರ್ಣ ಸೌಧವನ್ನು ತೋರಿಸಲೆಂದು ಒಳಗೆ ಹೋದರು. ಆದರೆ ಅಲ್ಲಿಯ ಕಾವಲುಗಾರರು ರವಿವಾರ ರಜೆ ಇದೆ ಒಳಗಡೆ ಬಿಡಲ್ಲ ಎಂದರು. ಇದರಿಂದ ನಿರಾಶೆಗೊಂಡ ತಂದೆ ಮತ್ತು ಮಗಳು ಆಚೆ ಬಂದರು.
ಈ ವೇಳೆ ತಂದೆ ಮಲ್ಲಿಕಾರ್ಜುನ ಮಗಳಿಗೆ ಚಿಂತಿಸಬೇಡ ನಿನ್ನ ಜನ್ಮದಿನವನ್ನು ಇಲ್ಲೇ ಆಚರಿಸುತ್ತೇನೆ ಎಂದು ಭರವಸೆ ನೀಡಿದರು. ನಂತರ ಬಾಲಕಿ ಟಿವಿಗಳಲ್ಲಿ ವಿಧಾನ ಸೌಧ, ಸುವರ್ಣ ಸೌಧ ನೋಡಿದಾಗ ತಂದೆಗೆ ಹುಟ್ಟಿದ ಹಬ್ಬದ ಕುರಿತು ನೆನಪು ಮಾಡುತ್ತಿದ್ದಳು. ಹೀಗಾಗಿ ತಂದೆ, ಮಗಳ ಆಸೆಯನ್ನು ಈಡೇರಿಸಲು ಸುವರ್ಣ ಸೌಧದಲ್ಲಿ ಮಗಳ ಜನ್ಮದಿನ ಆಚರಿಸಲು ಅನುಮತಿ ಕೇಳಲು ಅಲ್ಲಿಯ ಅಧಿಕಾರಿಗಳ ಬಳಿ ಕೇಳಲು ಹೋದಾಗ ಜಿಲ್ಲಾಧಿಕಾರಿ, ಲೋಕೊಪಯೋಗಿ ಇಲಾಖೆ, ವಿಧಾನಸಭೆ, ವಿಧಾನ ಪರಿಷತ್ ಸಭಾಪತಿ ಮತ್ತು ಉಪಸಭಾಪತಿಗಳ ಕಡೆ ಕೈ ಮಾಡಿ ತೋರಿಸಿದ್ದಾರೆ.
ನಂತರ ವಕೀಲ ಮಲ್ಲಿಕಾರ್ಜುನ ಜಿಲ್ಲಾಧಿಕಾರಿ, ಲೋಕೊಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ. ಇನ್ನೂ ಕೂಡ ಉತ್ತರ ಬಂದಿಲ್ಲ. ಹಾಗೇ ಸಭಾಪತಿ, ಉಪಸಭಾಪತಿಗಳಿಗೆ ಈ ಕುರಿತು ಮಲ್ಲಿಕಾರ್ಜುನ ಪತ್ರ ಬರೆದಿದ್ದಾರೆ. ಇನ್ನೂ ಮಲ್ಲಿಕಾರ್ಜುನ ಸುವರ್ಣ ಸೌಧ ಕೂಡ ಪ್ರಜಾಪ್ರಭುತ್ವದ ದೇವಾಲಯ, ಮಕ್ಕಳು ದೇವರ ಸಮ ಹೀಗಾಗಿ ಜನ್ಮದಿನ ಆಚರಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ತಿರುವು ಪಡೆದ ಜನ್ಮದಿನ
ಇದು ರಾಜಕೀಯವಾಗಿ ಬದಲಾಗಿದೆ ಜನ್ಮದಿನ ಆಚರಿಸಲು ಅನುಮತಿ ಕೇಳುವುದಕ್ಕೂ ಇನ್ನೊಂದು ಕಾರಣವಿದೆ ಅದೇನೆಂದರೆ ಸುವರ್ಣ ಸೌಧ ನಿರ್ಮಾಣದವಾಗಿ 10 ವರ್ಷಗಳು ಕಳೆದವು. ಇನ್ನುವರೆಗು ಯಾವುದೇ ಸರ್ಕಾರಿ ಕಚೇರಿಗಳ ಉಪ ಕಚೇರಿಗಳನ್ನು ತೆರೆದಿಲ್ಲ. ಹೀಗಾಗಿ ಸರ್ಕಾರ ಪ್ರತಿಯೊಂದು ಇಲಾಖೆಯ ಉಪಕಚೇರಿಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಇದರಿಂದ ಉತ್ತರ ಕರ್ನಾಟಕ ಭಾಗದ ಜನರು ಬೆಂಗಳೂರಿಗೆ ಬರುವುದು ತಪ್ಪುತ್ತದೆ. ತಮ್ಮ ಯಾವುದೇ ಸಮಸ್ಯೆಗಳನ್ನು ಸುವರ್ಣ ಸೌಧದಲ್ಲೇ ಬಗೆಹರಿಸಿಕೊಳ್ಳಬಹುದು. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ವಿಚಾರವಿಟ್ಟುಕೊಂಡು 2012ರಿಂದ ಸಾಮಾಜಿಕ ಜಾಲತಾಣದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಮಲ್ಲಿಕಾರ್ಜುನ ಅವರು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಮನವಿ ಕೂಡ ಸಲ್ಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




