ಬೆಳಗಾವಿ: ಪ್ರವಾಹದ ಹೆಸರಲ್ಲೂ ಅಧಿಕಾರಿಗಳ ಕಳ್ಳಾಟ, ಕಾಳಜಿ ಕೇಂದ್ರ ತೆರೆದಿದ್ದೇವೆಂದು ವರದಿ ಸಲ್ಲಿಸಿ ಗೋಲ್ ಮಾಲ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 03, 2024 | 4:38 PM

ಸಪ್ತ ನದಿಗಳ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಗೆ ಮಹಾ ಪ್ರವಾಹ ಎದುರಾಗಿದೆ. ನದಿ ತೀರದ ಜನಗಳ ಮನೆಗಳಲ್ಲಿ ನೀರು ಹೊಕ್ಕು ಜನ ಅಕ್ಷರಶಃ ಬಳಲಿ ಹೋಗಿದ್ದು, ಬದುಕು ಬೀದಿಗೆ ಬಿದ್ದಿದೆ. ಬೆಳೆದ ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಇಂತಹ ಪ್ರವಾಹದಲ್ಲೇ ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದು. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಟಾ ಬಯಲಾಗಿದೆ. ಅಷ್ಟಕ್ಕೂ ಅಧಿಕಾರಿಗಳು ಹಣದಾಸೆಗ ಮಾಡ್ತಿದ್ದಾದ್ರೂ ಎನೂ?, ಕಾಳಜಿ ಕೇಂದ್ರಗಳ ಹೆಸರಲ್ಲಿ ಅಧಿಕಾರಿಗಳು ಮಾಡ್ತಿರೋದಾದರೂ ಎಂಥ ಕೆಲಸ ಗೊತ್ತಾ? ಈ ಸ್ಟೋರಿ ಓದಿ.

ಬೆಳಗಾವಿ: ಪ್ರವಾಹದ ಹೆಸರಲ್ಲೂ ಅಧಿಕಾರಿಗಳ ಕಳ್ಳಾಟ, ಕಾಳಜಿ ಕೇಂದ್ರ ತೆರೆದಿದ್ದೇವೆಂದು ವರದಿ ಸಲ್ಲಿಸಿ ಗೋಲ್ ಮಾಲ್
ಕಾಳಜಿ ಕೇಂದ್ರ ತೆರೆಯಲಾಗಿವೆ ಎನ್ನಲಾದ ಕೇಂದ್ರಗಳು ಖಾಲಿ ಖಾಲಿ
Follow us on

ಬೆಳಗಾವಿ, ಆಗಸ್ಟ್.03: ಸದ್ಯ ಬೆಳಗಾವಿ(Belagavi)ಯಲ್ಲಿ ಸಪ್ತ ನದಿಗಳು ಅಬ್ಬರಿಸಿ ಬೊಬ್ಬೆರೆಯುತ್ತಿದ್ದು, ನದಿ ತೀರದ ಯಾವುದೇ ಹಳ್ಳಿಗೆ ಹೋದರೂ ಸಹ ಈ ದೃಶ್ಯಗಳು ಕಾಣಸಿಗುತ್ತವೆ. ಇದನ್ನೆ ಬಂಡವಾಳ ಮಾಡಿಕೊಂಡಿರೋ ತಿನ್ನುಬಾಕ ಅಧಿಕಾರಿಗಳು ಸದ್ಯ ಸಂತ್ರಸ್ತರ ಹೆಸರಲ್ಲೂ ಸಹ ಹಣ ಹೊಡೆಯುವ ಪ್ಲಾನ್ ಮಾಡಿದ್ರಾ ಎನ್ನುವ ಅನುಮಾನಗಳು ಶುರುವಾಗಿವೆ. ಹೌದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಮಳೆಗೆ ವಸತಿ ಪ್ರದೇಶದಲ್ಲಿ ನೀರು ನುಗ್ಗಿದೆ. ಮನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಇದರಿಂದ ಸುಮಾರು 60 ಕುಟುಂಬಗಳು ತೋಟದ ವಸತಿ ಬಿಟ್ಟು ಸುರಕ್ಷಿತ ಪ್ರದೇಶಕ್ಕೆ ಬಂದಿವೆ.

ಹೀಗೆ ಬಂದವರು ಕಾಳಜಿ ಕೇಂದ್ರ ನೆಚ್ಚಿಕೊಳ್ಳದೇ, ಸಂಬಂಧಿಕರ ಮನೆ ಹಾಗೂ ಗ್ರಾಮದಲ್ಲಿರುವ ತಮ್ಮದೇ ಮನೆಗಳಿಗೆ ಶಿಪ್ಟ್ ಆಗಿದ್ದಾರೆ. ಸದ್ಯ ಮಳಗೆ ವಸತಿಯ 60 ಕ್ಕೂ ಹೆಚ್ಚು ಮನೆಗಳು‌ ನೀರಲ್ಲಿ ತೇಲಿ ಹೋಗ್ತಿವೆ. ಆದ್ರೇ ಇದನ್ನ ಬಂಡವಾಳ ಮಾಡಿಕೊಂಡ ಅಧಿಕಾರಿಗಳು, ಅದೇ 60 ಕುಟುಂಬಗಳನ್ನು ಇಂಗಳಿಯ ಗಾವಾಠಾಣದಲ್ಲಿರುವ ಪ್ರಾಥಮಿಕ ಶಾಲೆಗೆ ಶಿಫ್ಟ್ ಮಾಡಿದ್ದೀವಿ ಎಂದು ದಾಖಲೆ ಸೃಷ್ಟಿ ಮಾಡಿದ್ದಾರೆ. ಅಲ್ಲದೆ ಅಲ್ಲಿ 35 ಜ‌ನ ಮಕ್ಕಳೂ ಸೇರಿದಂತೆ 261 ಜನರನ್ನು ಶಿಫ್ಟ್ ಮಾಡಿದ್ದಿವಿ ಎಂದು ವರದಿ ಕೊಟ್ಟಿದ್ದಾರೆ. ಆದರೆ‌, ಗ್ರಾಮಸ್ಥರು ಮಾತ್ರ ಕಾಳಜಿ ಕೇಂದ್ರ ತೆರೆದಿಲ್ಲ ಎಲ್ಲರೂ ಅವರವರ ಮನೆಗಳಿಗೆ ಹೋಗಿದ್ದಾರೆ ಅಂತಾ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಭಾರಿ ಪ್ರವಾಹಕ್ಕೆ ರಸ್ತೆ ಸಂಪರ್ಕ ಬಂದ್; ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಓಡಾಟ

ಇಂಗಳಿಯ ಮಳಗೆ ವಸತಿಯ ಜನಕ್ಕೆ ಗಾವಠಾಣದಲ್ಲಿ ಕಾಳಜಿ ಕೇಂದ್ರ ತೆಗೆಯಲಾಗಿದೆ ಎಂದು ಅಧಿಕಾರಿಗಳು ಸುಳ್ಳು ವರದಿ ನೀಡಿದ್ದಾರೆ ಎನ್ನುವುದು ಟಿವಿ9 ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ. ಅಧಿಕಾರಿಗಳು ತೋರಿಸಿದ ಶಾಲೆಯಲ್ಲಿ 261 ಅಲ್ಲ, ಕೇವಲ ಒಬ್ಬರೆ ಒಬ್ಬ ಸಂತ್ರಸ್ಥನೂ ವಾಸವಿಲ್ಲದಿರೋದು ಬೆಳಕಿಗೆ ಬಂದಿದೆ. ಕಳೆದ ತಿಂಗಳು 28 ರಿಂದ ಶಾಲೆಯಲ್ಲಿ ಸಂತ್ರಸ್ಥರನ್ನು ಇರಿಸಲಾಗಿದೆ ಎಂದು ಅಧಿಕಾರಿಗಳು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸುಳ್ಳು ದಾಖಲೆ ಸೃಷ್ಟಿಸಿ ಕಣ್ಣಿಗೆ ಮಣ್ಣೆರೆಚಿದ್ದಾರೆ. ಅಷ್ಟಕ್ಕೂ ಸಂತ್ರಸ್ತರನ್ನ ಹೆಸರಿನಲ್ಲಿ ಖರ್ಚಾಗುವ ಹಣ ಹಾಗೂ ಅವರ ದನಕರುಗಳಿಗೆ ಖರ್ಚಾಗುವ ಹಣವನ್ನು ಅಧಿಕಾರಿಗಳು ತಮ್ಮ ಜೇಬಿಗೆ ಇಳಿಸುವ ಲೆಕ್ಕಾಚಾರ ಮಾಡಿದ್ರಾ ಅನುಮಾನಗಳು ಶುರುವಾಗಿವೆ.

ಅಧಿಕಾರಿಗಳ ಬಂಡವಾಳವನ್ನ ಅವರೇ ಕೊಟ್ಟಿರುವ ದಾಖಲೆಯೇ ಸಾರಿ ಸಾರಿ ಹೇಳುತ್ತಿದೆ. ಇಲ್ಲಿ ಮೊದಲ ದಿನ ಎರಡು ಕುಟುಂಬಗಳು ಬಂದು ಹೋಗಿದ್ದನ್ನ ಬಿಟ್ಟರೆ, ಕ್ರಮೇಣ ಅಲ್ಲಿ ಯಾರು ಕೂಡ ಹೋಗಿಲ್ಲ, ಉಳಿದಿಲ್ಲ. ಆದರೆ ಅಧಿಕಾರಿಗಳು ಮಾತ್ರ ಆರಂಭದಲ್ಲಿ ಮೂವತ್ತು ಕುಟುಂಬ, ಮಾರನೇ ದಿನ ನಲವತ್ತು ಕುಟುಂಬ ಹೀಗೆ ಐದು ದಿನದಲ್ಲಿ ಅರವತ್ತು ಕುಟುಂಬ ಉಳಿದಿವೆ ಎಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುತ್ತಾ ಹೋಗಿದ್ದು, ಅಧಿಕಾರಿಗಳು ನೀಡುವ ಪ್ರವಾಹ ವರದಿಯಲ್ಲೇ ಈ ಎಲ್ಲ ಅಂಕಿ-ಅಂಶಗಳು ಸಿಕ್ಕಿವೆ‌. ಇದರ ಬೆನ್ನು ಬಿದ್ದ ಟಿವಿ9 ತಂಡ ಅಧಿಕಾರಿಗಳ ಹಗರಣವನ್ನ ಬಟಾ ಬಯಲು ಮಾಡಿದೆ.

ಒಟ್ಟಿನಲ್ಲಿ ಬೆಕ್ಕಿಗೆ ಆಟವಾದ್ರೆ, ಇಲಿಗೆ ಪ್ರಾಣ ಸಂಕಟವಂತೆ. ಸಂತ್ರಸ್ಥರು ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ರೇ, ಅವರಿಗೆ ಯಾವುದೇ ಸೌಲಭ್ಯವನ್ನೂ ನೀಡದೆ ಅವರ ಹೆಸರಿನಲ್ಲಿ ಹಣ ಹೊಡೆಯೊಕೆ ಮುಂದಾಗಿರೋದು ದುರಂತವೇ ಸರಿ. ಇನ್ನಾದ್ರೂ ತಪ್ಪಿತಸ್ತ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಕ್ರಮಕ್ಕೆ ಕೈಗೊಂಡು ನೆರೆ ಸಂತ್ರಸ್ತರ ಬೆನ್ನಿಗೆ ನಿಲ್ಲುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:04 pm, Sat, 3 August 24