
ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ (Reservation) ಕೊಡುತ್ತಾರೋ ಇಲ್ಲವೋ ಅದನ್ನು ಹೇಳಲಿ. ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಮಾಡಿದ್ದಾರೆ. ತಾಯಿ ಮೇಲೆ ಗೌರವ ಇದ್ದರೆ 24 ತಾಸಿನಲ್ಲಿ ಹೇಳುತ್ತಾರೆ ಎಂದು ಸಿಎಂ ಬೊಮ್ಮಾಯಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 24 ಗಂಟೆ ಗಡುವು ನೀಡಿದ್ದಾರೆ. ಜಿಲ್ಲೆಯ ಗಾಂಧಿ ಭವನದಲ್ಲಿ ನಡೆದ ಪಂಚಮಸಾಲಿ (Panchamasali) ಸಮುದಾಯದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿ, ಧಮ್ಮಿ ಹಾಕಿ ಪಂಚಮಸಾಲಿ ಸಮುದಾಯ ಮೀಸಲಾತಿ ಕೇಳುತ್ತಿಲ್ಲ. ಧಮ್ಕಿ ಹಾಕಿದ್ರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತಿದ್ದೆವು. ನಿಮ್ಮನ್ನು ಮೂತ್ರ ವಿಸರ್ಜನೆಗೂ ಬಿಡುತ್ತಿರಲಿಲ್ಲ. ಏನೂ ಮಾಡದಿದ್ದರೂ ಧಮ್ಕಿ ಅಂತಾ ಅಪವಾದ ಮಾಡ್ತೀರಾ ಎಂದು ವಾಗ್ದಾಳಿ ಮಾಡಿದರು.
ಬೊಮ್ಮಾಯಿ ಸಿಎಂ ಆಗಿದಾಗಿನಿಂದ ನಮ್ಮ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವರದಿ ಕೊಡುವ ಪುಣ್ಯಾತ್ಮ ಮಳೆ ಐತಿ, ಕೊರೊನಾ ಐತಿ ಅಂತಾ ನೆಪ ಹೇಳಿದ್ರು. ಸುಮ್ಮನೆ ಕೊಡಬ್ಯಾಡ ಅಂತಾ ಹೇಳಿರಬೇಕು. ಇದರ ಹಿಂದ ಶಿಕಾರಿಪುರ ರಾಜ ಇದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪಗೆ ಟಾಂಗ್ ಕೊಟ್ಟರು. ಯಡಿಯೂರಪ್ಪ ಮಾತು ಕೇಳಿ ಎಷ್ಟು ದಿವಸ ನಮಗೆ ಟೋಪಿ ಹಾಕುತ್ತೀರಾ ಎಂದು ಸಿಎಂ ಬೊಮ್ಮಾಯಿಗೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Panchamasali Reservation ಮೀಸಲಾತಿ ಸಿಕ್ಕಿತ್ತೆಂದು ಯಾರು ಸಂಭ್ರಮಾಚರಣೆ ಮಾಡಬೇಡಿ: ಮೃತ್ಯುಂಜಯ ಸ್ವಾಮೀಜಿ ಕರೆ
ನಿಮ್ಮ ಮಂತ್ರಿಗಳಿಗೆ 2ಡಿ ಮೀಸಲಾತಿ ಅಂದ್ರೆ ಗೊತ್ತಿಲ್ಲ. ಇನ್ನೊಬ್ಬ ಮಂತ್ರಿಗೆ ಸಮಾಜ ಬೇಕಿಲ್ಲ, ಕೇವಲ ರೊಕ್ಕ ಬೇಕು. ಬೊಮ್ಮಾಯಿಯವರೇ ನಿಮ್ಮನ್ನ ನಂಬಿದ್ದಕ್ಕೆ ಈ ಕಾಣಿಕೆ ನೀಡಿದ್ದೀರಿ. ಬೊಮ್ಮಾಯಿ ನಂಬಬೇಡ್ರಿ ಅಂತಾ ಹಲವು ಜನ ಹೇಳಿದ್ರು. ಆದರೂ ನಾನು ನೀವು ತಾಯಿ ಆಣೆ ಕೊಟ್ಟೀರಿ ಅಂತಾ ಒಪ್ಪಿದ್ದೇವು. ನಾವು ಅಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ರೆ ಬೊಮ್ಮಾಯಿಯವರೇ ನಿಮ್ಮ ಕೊನೆ ದಿವಸ ಆಗುತ್ತಿತ್ತು. ನೀವು ಟಿಕೆಟ್ ನೀಡದೇ ಇರಬಹುದು, ಇಲ್ಲ ಪಕ್ಷದಿಂದ ಉಚ್ಛಾಟಿಸಬಹುದು ಎಂದರು.
ಶಿಕಾರಿಪುರ ರಾಜನ ಕೇಳಿ ಆಟ ಆಡಿದ್ರೆ ಶಿಕಾರಿಪುರ ರಾಜನೂ ಹೋಗುತ್ತಾರೆ. ನೀವು ಹೋಗುತ್ತೀರಾ. ಆ ಜಯಪ್ರಕಾಶ್ ಹೆಗಡೆಗೆ ವರದಿ ಕೊಡಬೇಡಿ ಅಂತಾ ಹೇಳಿ ಬಿಟ್ಟೀರಿ. ಸುಮ್ಮನೇ ಮಧ್ಯಂತರ ವರದಿ ಪಡೆದರು. ಬಿಜೆಪಿಯಲ್ಲಿ ನಾನೇ ಕೊನೆಯ ಸಿಎಂ ಆಗಬೇಕು ಅಂತಾ ಬೊಮ್ಮಾಯಿಗೆ ಇದೆ ಅನಿಸುತ್ತೆ. ಮೇ ವರೆಗೂ ಸಿಎಂ ಆಗಿ ಆಮೇಲೆ ಏನಾದರೂ ಆಗಲಿ ಅಂತಾ ಬಂದಿರಬೇಕು ಎಂದು ಸಿಎಂ ಬೊಮ್ಮಾಯಿ ವಿರುದ್ಧ ಹರಿಹಾಯ್ದರು.
ಸಿಎಂ ಮೋಸ ಮಾಡಿದ್ದಾರೆ ಎಂಬ ಭಾವನೆ ಇಡೀ ಸಮುದಾಯಕ್ಕಿದೆ. ಮತ್ತೊಬ್ಬರಿಗೆ ಕೊಡಲು ನಾವು ವಿರೋಧ ಮಾಡಲ್ಲ. 2ಡಿ ಕೊಡುತ್ತೇವೆ 2Aದಲ್ಲಿ ಎಲ್ಲ ಸಮಾನಾಗಿ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಅದರ ಬಗ್ಗೆ ಸ್ಪಷ್ಟೀಕರಣ ಇಲ್ಲ. ಕಾನೂನು ಸಚಿವರು ಹೇಳುತ್ತಾರೆ ಇ.ಡಬ್ಲ್ಯೂಎಸ್ನಲ್ಲಿ ತಗೆದು ಕೊಡ್ತಾರಂತ. ಹಿಂಗ ತೆಗೆದು ಹಂಗ ಮಾಡ್ತೀನಿ ಅಂತಾ ಕಾನೂನು ಮಂತ್ರಿ ಹೇಳುತ್ತಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.