Panchamasali Reservation ಮೀಸಲಾತಿ ಸಿಕ್ಕಿತ್ತೆಂದು ಯಾರು ಸಂಭ್ರಮಾಚರಣೆ ಮಾಡಬೇಡಿ: ಮೃತ್ಯುಂಜಯ ಸ್ವಾಮೀಜಿ ಕರೆ
ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ವರ್ಗಗಳನ್ನ ರಚಿಸಿ ಮೀಸಲಾತಿ ನೀಡಲು ಸಂಪುಟ ನಿರ್ಧಾರದ ಬೆನ್ನಲ್ಲೇ ಹಲವು ಗೊಂದಲವೂ ಎದ್ದಿವೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಸಿಕ್ಕಿದೆ ಎಂದು ಯಾರು ಸಂಭ್ರಮಾಚರಣೆ ಮಾಡಬೇಡಿ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.
ಬೆಳಗಾವಿ: 2A ಮೀಸಲಾತಿ ಕೇಳುತ್ತಿದ್ದ ಲಿಂಗಾಯತ ಪಂಚಮಸಾಲಿ(Panchamasali Reservation) ಸಮುದಾಯಕ್ಕೂ, ಹಾಗೂ ಮೀಸಲಾತಿ ಪರ್ಸೆಂಟೇಜ್ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದ ಒಕ್ಕಲಿಗ ಸಮುದಾಯಕ್ಕೂ ಹೊಸ ಮೀಸಲಾತಿ ಕೆಟಗರಿಯನ್ನೇ ರಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಎರಡು ಪ್ರತ್ಯೇಕ ವರ್ಗಗಳನ್ನ ರಚಿಸಿ ಮೀಸಲಾತಿ ನೀಡಲು ಸಂಪುಟ ನಿರ್ಧಾರದ ಬೆನ್ನಲ್ಲೇ ಹಲವು ಗೊಂದಲವೂ ಎದ್ದಿವೆ. ಇನ್ನು ಈ ಬಗ್ಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ(Basava Jaya Mrityunjaya swamiji) ಪ್ರತಿಕ್ರಿಯಿಸಿದ್ದು, ಮೀಸಲಾತಿ ಸಿಕ್ಕಿದೆ ಎಂದು ಯಾರು ಸಂಭ್ರಮಾಚರಣೆ ಮಾಡಬೇಡಿ ಎಂದು ಕರೆ ಕೊಟ್ಟಿದ್ದಾರೆ.
ಇನ್ನು ಈ ಬಗ್ಗೆ ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಇಂದು ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಬರುತ್ತೆ ಎಂದು ಕಾಯುತ್ತಿದ್ದೇವು. ಆದ್ರೆ, ಸಂಪುಟದಲ್ಲಿ ಆದ ನಿರ್ಣಯದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೀಸಲಾತಿ ಸಿಕ್ಕಿದೆ ಎಂದು ಯಾರು ಸಂಭ್ರಮಾಚರಣೆ ಮಾಡಬೇಡಿ. 2ಡಿಯಲ್ಲಿ ಪಂಚಮಸಾಲಿಗೆ ಎಷ್ಟು ಪ್ರಮಾಣ ನೀಡಿದ್ದಾರೆ ಎನ್ನುವುದು ನೋಡಬೇಕಿದೆ. ಒಂದು ಹಂತದಲ್ಲಿ ಸರ್ಕಾರ ಮೀಸಲಾತಿ ನೀಡಲು ಒಂದು ಹೆಜ್ಜೆ ಮುಂದಿಟ್ಟಿದೆ. ತಾತ್ವಿಕವಾಗಿ ಸಂಪುಟದಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ. ಪ್ರತಿ ಬಂದ ಮೇಲೆ ಬೆಳಗಾವಿಯಲ್ಲಿ ಸಭೆ ಕರೆದು ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ವಿವರಣೆಯ ಪ್ರತಿ ಎರಡ್ಮೂರು ದಿನಗಳಲ್ಲಿ ಸಿಗುತ್ತೆ. ಸಂಪುಟದಲ್ಲಿ ಕೂಡ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ನಿರ್ಣಯ ಪ್ರತಿ ನಮ್ಮ ಕೈಗೆ ಬರುವವರೆಗೂ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಇಂದಿನ ನಿರ್ಧಾರ ನಮಗೆ ಸಮಾಧಾನ ತಂದಿರಬಹುದು. ಶಿಕ್ಷಣ ಮತ್ತು ಉದ್ಯೋಗಕ್ಕೆ 2ಡಿಯಲ್ಲಿ ಎಷ್ಟು ಪ್ರಮಾಣದಲ್ಲಿ ಸಿಕ್ಕಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಪ್ರತಿ ಸಿಕ್ಕ ಮೇಲೆ ಕಾನೂನು ತಜ್ಞರು ಮತ್ತು ಸಮುದಾಯ ಮುಖಂಡರ ಜತೆಗೆ ಚರ್ಚೆ ಮಾಡುತ್ತೇವೆ. ಕೂಲಂಕಷವಾಗಿ ಚರ್ಚೆ ಮಾಡಿ ರಾಜ್ಯಕ್ಕೆ ಸಂದೇಶ ರವಾನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟದಲ್ಲಿ ಸ್ಪಷ್ಟವಾದ ಅಂಕಿಅಂಶಗಳನ್ನ ಹೇಳಿಲ್ಲ. ನಮ್ಮದು ಹೋರಾಟ ನಿರಂತರ, ದಾಖಲೆ ಬಂದ ಮೇಲೆ ನಮ್ಮ ಹೋರಾಟದ ರೂಪರೇಷೆಗಳನ್ನ ಹೇಳುತ್ತೇವೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಕೆಟಗರಿ ರಚನೆಗೆ ನಿರ್ಧಾರ ಮಾಡಲಾಗಿದ್ದು, ಲಿಂಗಾಯತ ಸಮುದಾಯದ ಎಲ್ಲ ಪಂಗಡಳಿಗೆ ಪ್ರತ್ಯೇಕ ಕೆಟಗರಿ ರಚನೆಯಾಗಿದೆ. ಅಂದ್ರೆ 3Bನಲ್ಲಿದ್ದ ಲಿಂಗಾಯತರಿಗೆ 2D ಎಂದು ಕೆಟಗರಿ ಮಾಡಲು ತೀರ್ಮಾನಿಸಲಾಗಿದೆ. ಆದ್ರೆ, ಯಾರಿಗೆ ಎಷ್ಟು ಪ್ರಮಾಣ ಮೀಸಲಾತಿ ಎನ್ನುವುದು ಮಾತ್ರ ರಾಜ್ಯ ಸರ್ಕಾರ ಘೋಷಣೆ ಮಾಡಿಲ್ಲ.