ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ ನವಿಲು ಸಾವು; ರಾಷ್ಟ್ರಧ್ವಜ ಹೊದಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

| Updated By: preethi shettigar

Updated on: Aug 01, 2021 | 9:19 AM

ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿದ ನವಿಲನ್ನು ದಡಕ್ಕೆ ತಂದ ಬಳಿಕ ಎನ್‌ಡಿಆರ್‌ಎಫ್, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗೌರವ ಸೂಚಿಸಿದ್ದು, ರಾಷ್ಟ್ರಧ್ವಜ ಹೊದಿಸಿ ಸರ್ಕಾರಿ ಗೌರವದೊಂದಿಗೆ ನವಿಲಿನ ಅಂತ್ಯಕ್ರಿಯೆ ಮಾಡಿದ್ದಾರೆ.

ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ ನವಿಲು ಸಾವು; ರಾಷ್ಟ್ರಧ್ವಜ ಹೊದಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ ನವಿಲು ಸಾವು
Follow us on

ಬೆಳಗಾವಿ: ಕಳೆದ ಕೆಲವು ದಿನಗಳಿಂದ ಮಳೆರಾಯನ ಆರ್ಭಟ ಜೋರಾಗಿದ್ದು, ಪ್ರವಾಹ ಭೀತಿಯಿಂದ ಜನರು ನಲುಗಿ ಹೋಗಿದ್ದಾರೆ. ಅದರಲ್ಲೂ ಬೆಳಗಾವಿ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಕೃಷ್ಣಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ. ಹೀಗಿರುವಾಗಲೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಬಳಿ ಇಂದು ದುರಂತವೊಂದು ಸಂಭವಿಸಿದ್ದು, ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ ರಾಷ್ಟ್ರಪಕ್ಷಿ ನವಿಲು ಸಾವಿಗೀಡಾಗಿದೆ.

ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿದ ನವಿಲನ್ನು ದಡಕ್ಕೆ ತಂದ ಬಳಿಕ ಎನ್‌ಡಿಆರ್‌ಎಫ್, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗೌರವ ಸೂಚಿಸಿದ್ದು, ರಾಷ್ಟ್ರಧ್ವಜ ಹೊದಿಸಿ ಸರ್ಕಾರಿ ಗೌರವದೊಂದಿಗೆ ನವಿಲಿನ ಅಂತ್ಯಕ್ರಿಯೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಸ್ಥಿತಿ ಇನ್ನೂ ಅತಂತ್ರ
ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಮುಂದುವರೆದಿದ್ದು, ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 60 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕೃಷ್ಣಾ ನದಿಯಲ್ಲಿ 3.70 ಲಕ್ಷ ಕ್ಯುಸೆಕ್ ಹೊರ ಹರಿವು ಉಂಟಾಗಿದೆ. ಈಗಾಗಲೇ‌ 105 ಟಿಎಂಸಿ ಸಾಮರ್ಥ್ಯದ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋಯ್ನಾ ಜಲಾಶಯ 90 ಟಿಎಂಸಿ ಭರ್ತಿಯಾಗಿದ್ದು, ಮಳೆ ಮುಂದುವರೆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಕೃಷ್ಣಾ ನದಿಗೆ ಬಿಡುವ ಸಾಧ್ಯತೆ ಇದೆ. ಇದರಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ ತೀರದಲ್ಲಿ ಸಾಕಷ್ಟು ಹಾನಿಯಾಗುವ ಭೀತಿ ಎದುರಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಸ್ಥಿತಿ ಇನ್ನೂ ಅತಂತ್ರ
ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯಾದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಬೇಕಾಬಿಟ್ಟಿ ಬಂದು, ಹೋದರು ಒಂದು ಪೈಸೆಯೂ ಪರಿಹಾರ ತುರ್ತಾಗಿ ನೀಡಲಿಲ್ಲ. ಯಡಿಯೂರಪ್ಪಗೆ ಜುಲೈ 25 ರಂದು ಬೆಳಗಾವಿ ಪ್ರವಾಸದ ವೇಳೆ ಅಂದಿನ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ 200 ಕೋಟಿ ಬಿಡುಗಡೆಗೆ ಒತ್ತಾಯಿಸಿದ್ದರು. ಇದೀಗ ಹೊಸದಾಗಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಒಂದು ಪೈಸೆಯೂ ಪರಿಹಾರ ಬಿಡುಗಡೆ ಇಲ್ಲ ಎಂದು ನೆರೆ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಖಾತೆಯಲ್ಲಿ ಕೇವಲ 90 ಕೋಟಿ ರೂಪಾಯಿ ಮಾತ್ರ ಇದ್ದು, ನೆರೆ ಸಂತ್ರಸ್ತರ ಸ್ಥಳಾಂತರ ಸೇರಿದಂತೆ ತುರ್ತು ಕೆಲಸಕ್ಕೂ ಈ ಹಣ ಸಾಲಲ್ಲ. ತಹಶಿಲ್ದಾರ ಅಕೌಂಟ್‌ಗಳಲ್ಲಿ ಕೇವಲ ಹತ್ತು ಲಕ್ಷ ಮಾತ್ರ ಇದ್ದು, ಯಾವುದಕ್ಕೆ ಬಳಕೆ ಮಾಡಿಕೊಳ್ಳಬೇಕು ಅನ್ನುವ ಗೊಂದಲದಲ್ಲಿ ತಹಶಿಲ್ದಾರರು ಇದ್ದಾರೆ. ಹೊಸ ಸಿಎಂ ಬರೀ ಸನ್ಮಾನ, ದೇವಸ್ಥಾನ ಓಡಾಟದಲ್ಲಿ ಬಿಜಿಯಾದರೆ ಬೆಳಗಾವಿ ನೆರೆ ಸಂತ್ರಸ್ತರ ನೋವು ಆಲಿಸುವವರು ಯಾರು? ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು ಅಷ್ಟೇ, ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ನೆರೆ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಕೃಷ್ಣಾ ನದಿ‌ ತೀರದಲ್ಲಿ ಮುಂದುವರೆದ ಪ್ರವಾಹದ ಪರಿಸ್ಥಿತಿ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಕೃಷ್ಣಾ ನದಿ ನೀರಿನಿಂದ ಜಲಾವೃತವಾಗಿದೆ. ಗ್ರಾಮ ಜಲಾವೃತ ಹಿನ್ನಲೆ ಸ್ಥಳೀಯ ಬೋಟ್ನಲ್ಲಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಲೈಫ್ ಜಾಕೆಟ್ ಕೂಡ ಇಲ್ಲದೇ ಜೀವ ಭಯದಲ್ಲಿ ಬೋಟ್ನಲ್ಲಿ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ. ನದಿ ಇಂಗಳಗಾಂವ ಗ್ರಾಮದ ಇನ್ನೂರಕ್ಕೂ ಅಧಿಕ ಮನೆಗಳು ಜಲಾವೃತವಾಗಿದ್ದು, ಬಟ್ಟೆ ಹಾಗೂ ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಂಡು ಜನರು ಊರು ತೊರೆಯುತ್ತಿದ್ದಾರೆ.
ಇದನ್ನೂ ಓದಿ:
Karnataka Rains: ಮಹಾರಾಷ್ಟ್ರದಲ್ಲಿ ಮತ್ತೆ ಮುಂದುವರೆದ ಮಳೆಯ ಅಬ್ಬರ; ಬೆಳಗಾವಿ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಸ್ಥಿತಿ ಅತಂತ್ರ

ಅಪಾಯದ ಗುರುತು ಮೀರಿ ಉಕ್ಕಿ ಹರಿದ ಯಮುನಾ ನದಿ, ದೆಹಲಿಯಲ್ಲಿ ‘ಪ್ರವಾಹ’ ಎಚ್ಚರಿಕೆ