ಬೆಳಗಾವಿ: ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ. ಮಹಿಳೆಯರನ್ನು ಎಳೆದಾಡಿ ಸೀರೆ ಹರಿದು ಅಮಾನವೀಯವಾಗಿ ವರ್ತಿಸಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ. ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆಗಳಾಗುತ್ತಿದ್ದು ಮಹಿಳಾ ಪೊಲೀಸರು ಮಹಿಳೆಯರನ್ನು ಎಳೆದಾಡಿ ದುರ್ವರ್ತನೆ ತೋರುತ್ತಿದ್ದಾರೆ. ಭೂಸ್ವಾಧೀನ ವಿರೋಧಿಸಿ ನೂರಾರು ರೈತರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಇದೇ ವೇಳೆ ಜಮೀನು ಮಾಲೀಕ ಆಕಾಶ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿಕೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಸರ್ವೆ ಆದ ಜಮೀನು ಬಿಟ್ಟು ಬೇರೆ ಜಮೀನು ತೆಗೆದುಕೊಂಡಿದ್ದಕ್ಕೆ ವಿರೋಧಿಸಿದ್ದರು. ಫಲವತ್ತಾದ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಏಕಾಏಕಿ ನೂರಾರು ಪೊಲೀಸರನ್ನು ಕರೆತಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಜೀವ ಕೊಟ್ಟೇವು ಜಮೀನು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಕೈಯಲ್ಲಿ ಕುಡುಗೋಲು ಹಿಡಿದು ರೈತರು ಆತ್ಮಹತ್ಯೆಗೆ ಯತ್ನಿಸಿದ್ದು ಪೊಲೀಸರು ಮಹಿಳೆಯರನ್ನ ಎಳೆದಾಡಿ ಸೀರೆ ಹರಿದು ಹಾಕಿದ ಘಟನೆ ಸ್ಥಳದಲ್ಲಿ ನಡೆದಿದೆ.
ಪ್ರತಿಭಟನೆಗೆ ಎಂಟು ತಿಂಗಳ ಮಗುವಿನೊಂದಿಗೆ ಬಂದಿದ್ದ ಮಹಿಳೆಯನ್ನೂ ಬಿಡದೆ ಪೊಲೀಸರು ಎಳೆದಾಡಿ ಹೊರಗೆ ಕಳುಹಿಸಿದ್ದಾರೆ. ಕಾಮಗಾರಿ ನಿಲ್ಲಿಸುವಂತೆ ಓರ್ವ ರೈತ ಮರ ಏರಿ ಕುಳಿತಿದ್ದು ಜೆಸಿಬಿ ಡ್ರೈವರ್ ಕಾಮಗಾರಿ ನಿಲ್ಲಿಸಿದ್ದಾನೆ. ಕಾಮಗಾರಿ ಮಾಡಿದ್ರೇ ಮರದಿಂದ ಜಿಗಿಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ನಮಗೆ ಹಣ ಬೇಡಾ ಜಮೀನು ಬೇಕು ಕೆಲಸ ನಿಲ್ಲಿಸಿ ಎಂದು ಪಟ್ಟು ಹಿಡಿದಿದ್ದಾನೆ. 15ಕ್ಕೂ ಅಧಿಕ ರೈತರನ್ನ ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಪೊಲೀಸರು ಮಹಿಳೆಯರನ್ನ ಎಳೆದಾಡಿ ವಶಕ್ಕೆ ಪಡೆದು ವಾಹನದಲ್ಲಿ ಕೂಡಿಸಿದ್ದಾರೆ. ಪೊಲೀಸರ ದೌರ್ಜನ್ಯದಿಂದ ಮಹಿಳೆಯರು ಕಣ್ಣೀರಿಟ್ಟ ದೃಶ್ಯ ಕಂಡು ಬಂದಿದೆ. ಪೊಲೀಸರ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ.
ಯಾವುದೇ ಕಾರಣಕ್ಕೂ ನಾವು ಭೂಮಿಯನ್ನು ಬಿಟ್ಟುಕೊಡಲ್ಲ. ಕೋರ್ಟ್ ಆದೇಶ ಉಲ್ಲಂಘಿಸಿ ಕಾಮಗಾರಿ ಆರಂಭಿಸಿದ್ದಾರೆ. ಪೊಲೀಸ್ ಫೋರ್ಸ್ ನೆರವಿನಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಸರ್ಕಾರದ ಮೊದಲ ಆದೇಶದಲ್ಲಿ ನಮ್ಮ ಜಮೀನು ಸೇರಿಲ್ಲ. ಆದರೆ ಏಕಾಏಕಿ ನಮ್ಮ ಜಮೀನಿನಲ್ಲಿ ಕಾಮಗಾರಿಗೆ ಪ್ರಯತ್ನ ಮಾಡಲಾಗುತ್ತಿದೆ ಎಂದ ಜಮೀನು ಕಳೆದುಕೊಳ್ಳುತ್ತಿರುವ ಯುವಕ ಅಮಿತ್ ಆಕ್ರೋಶ ಹೊರ ಹಾಕಿದ್ದಾನೆ. ಕಾಮಗಾರಿ ನಿಲ್ಲಿಸುವಂತೆ ಜಮೀನು ಮಾಲಕಿ ವೃದ್ಧೆ ಕೂಡ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಡಿಸಿಪಿ ವಿಕ್ರಂ ಆಮಟೆ, ಎಸಿ ರವೀಂದ್ರ ಕರಲಿಂಗನವರ್ ಭೇಟಿ ನೀಡಿದ್ದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಪೊಲೀಸರು ಡಿಸಿಪಿ ಬಂದ್ರೂ ಕೆಲ ಮಹಿಳಾ ರೈತರನ್ನ ಎಳೆದು ಆ್ಯಂಬುಲೆನ್ಸ್ ನಲ್ಲಿ ಕೂಡಿಸಿದ್ದಾರೆ. ಎಂಟು ತಿಂಗಳ ಮಗುವನ್ನ ಮಹಿಳಾ ಪೊಲೀಸ್ ಪೇದೆ ಕಸಿದುಕೊಂಡು ವಾಹನ ಹತ್ತಿಸಿದ್ದಾರೆ.
Published On - 11:34 am, Thu, 11 November 21