ಬೆಂಗಳೂರು, ಮೇ 6: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ (Randeep Surjewala) ಭಾನುವಾರ ಹೇಳಿದ್ದಾರೆ. ಬೆಳಗಾವಿಯಲ್ಲಿ (Belagavi) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂಥ ಪ್ರಕರಣದ ದೇಶದಲ್ಲೇ ಮೊದಲು. ಇದು ಅತ್ಯಂತ ಹೇಯ ಮತ್ತು ಅಪರೂಪದ ಪ್ರಕರಣವಾಗಿದೆ. ಸಾವಿರಾರು ಮಹಿಳೆಯರು ದೌರ್ಜನ್ಯವನ್ನು ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
ಘೋರ ಅಪರಾಧ ಎಸಗಿದ ವ್ಯಕ್ತಿಯೊಬ್ಬ (ಪ್ರಜ್ವಲ್ ರೇವಣ್ಣ) 68 ವರ್ಷದ ವೃದ್ಧೆಯ ಮೇಲೂ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವೀಡಿಯೊಗಳನ್ನು ಸಹ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಲಾಗಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ ಎಂಬುದನ್ನೂ ಸುರ್ಜೇವಾಲಾ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಜೆಡಿಎಸ್ ನಾಯಕರು ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.
ಪ್ರಜ್ವಲ್ ರೇವಣ್ಣರ ಘೋರ ಅಪರಾಧಗಳ ಬಗ್ಗೆ ತಿಳಿದಿದ್ದರೂ ಬಿಜೆಪಿ ಏಕೆ ಮೌನ ವಹಿಸಿದೆ ಮತ್ತು ಜೆಡಿಎಸ್‌ನೊಂದಿಗೆ ಮೈತ್ರಿ ಮುಂದುವರಿಸಿದೆ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಇರುವ ವಿಚಾರ ಗೊತ್ತಿದ್ದರೂ ಬಿಜೆಪಿ-ಜೆಡಿಎಸ್ ನಾಯಕರು ಅವರನ್ನೇ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಪ್ರಜ್ವಲ್ ಕೈ ಹಿಡಿದು ಎತ್ತಿದ್ದೇಕೆ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ. ‘ಪ್ರಜ್ವಲ್ ರೇವಣ್ಣ ಕೀ ಜೀತ್ ಸೇ ಮೋದಿ ಕೋ ತಾಕತ್ ಮಿಲೇಗಿ’ ಎಂದು ರ್ಯಾಲಿಯಲ್ಲಿ ಮೋದಿ ಹೇಳಿದ್ದರು ಎಂದು ಸುರ್ಜೇವಾಲ ಕಿಡಿ ಕಾರಿದರು.
ಪ್ರಜ್ವಲ್ ರೇವಣ್ಣ ದೇಶದಿಂದ ಓಡಿ ಹೋಗುತ್ತಿರುವುದು ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಿಳಿದಿಲ್ಲವೇ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಂತ್ರಸ್ತೆ ಹೇಳಿಕೆ ಮೇಲೆ ರೇವಣ್ಣ ಕಿಡ್ನ್ಯಾಪ್ ಕೇಸ್ ಭವಿಷ್ಯ, ಅಪ್ಪ-ಮಗನ ಹಣೆಬರಹ ಬರೆಯಲಿರುವ ಮಹಿಳೆ
ಏತನ್ಮಧ್ಯೆ, ಪ್ರಜ್ವಲ್ ರೇವಣ್ಣಗೆ ನೀಡಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ ಮತ್ತು ಪ್ರಜ್ವಲ್ ಎಲ್ಲಿದ್ದಾರೆಂದು ತಿಳಿಯಲು ಸಿಬಿಐಗೆ ಬ್ಲೂ ಕಾರ್ನರ್ ನೋಟಿಸ್ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ಘೋರ ಅಪರಾಧವನ್ನು ಮಾಡಿ ದೇಶದಿಂದ ಓಡಿಹೋದ ವ್ಯಕ್ತಿಯನ್ನು ವಾಪಸ್ ಕರೆತರುವುದು ಕೇಂದ್ರದ ಕರ್ತವ್ಯ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ