ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಮರ್ಡರ್​​ ರಹಸ್ಯ ಬಿಚ್ಚಿಟ್ಟಿದ್ದು ಹೆತ್ತಮ್ಮ!

ಡಿ. 18ರಂದು ಊರಲ್ಲೊಂದು ಸಾವಾಗಿತ್ತು. ಹಂಚು ಹಾಕಲು ಹೋಗಿ ಜಾರಿ ಬಿದ್ದು ಮನೆಮಗ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಆದ್ರೆ ಈ ಬಗ್ಗೆ ಅನುಮಾನಗೊಂಡ ಪೊಲೀಸರು ಕುಟುಂಬಸ್ಥರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಏನೂ ಮಾಹಿತಿ ಸಿಗದ ಕಾರಣ ಮೃತ ವ್ಯಕ್ತಿಯ ತಾಯಿ ಬಳಿ ಭಾವನಾತ್ಮಕವಾಗಿ ಮಾತನಾಡಿ ಸತ್ಯ ಬಯಲು ಮಾಡಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಮಾಹಿತಿ ಇಲ್ಲಿದೆ.

ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಮರ್ಡರ್​​ ರಹಸ್ಯ ಬಿಚ್ಚಿಟ್ಟಿದ್ದು ಹೆತ್ತಮ್ಮ!
ಬಂಧಿತ ಆರೋಪಿ ಸಿದ್ದಪ್ಪ
Edited By:

Updated on: Jan 01, 2026 | 4:32 PM

ಚಿಕ್ಕೋಡಿ, ಜನವರಿ 01: ಆಸ್ತಿ ವಿಚಾರಕ್ಕೆ ಒಡ ಹುಟ್ಟಿದವನನ್ನೇ ಕೊಂದಿದ್ದಲ್ಲದೆ ಆತ ಮೃತಪಟ್ಟಿರೋದು ಆಕಸ್ಮಿಕ ಸಾವಿನಿಂದ ಎಂದು ಬಿಂಬಿಸಿದ್ದ ಖತರ್ನಾಕ್​​ ವ್ಯಕ್ತಿಯನ್ನು ಸಿನಿಮೀಯ ಮಾದರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಸಲಿಂಗ ರಾಮಾಪುರೆ (38) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಸಹೋದರ ಸಿದ್ದಪ್ಪ ರಾಮಾಪುರೆಯೇ ಆರೋಪಿ ಎಂಬುದು ತನಿಖೆ ವೇಳೆ ಪೊಲೀಸರು ಬಯಲು ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ಡಿ.18ರಂದು ಬಸಲಿಂಗ ರಾಮಾಪುರೆ ಮೃತಪಟ್ಟಿದ್ದ. ಹಂಚು ಹಾಕುವಾಗ ಬಿದ್ದು ಆತ ಮೃತಪಟ್ಟಿರೋದಾಗಿ ಕುಟುಂಬಸ್ಥರು ತಿಳಿಸಿದ್ದರು. ಆದರೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಈ ಬಗ್ಗೆ ಅನುಮಾನ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೂ ಕೂಡ ತಲೆಗೆ ಬಲವಾಗಿ ಪೆಟ್ಟುಬಿದ್ದ ಕಾರಣ ವ್ಯಕ್ತಿ ಮೃತಪಟ್ಟಿರೋದಾಗಿ ತಿಳಿಸಿದ್ದರು. ಹೀಗಾಗಿ ಬಸಲಿಂಗ ಕುಟುಂಬಸ್ಥರನ್ನು ಪೊಲೀಸರು ಮತ್ತೊಮ್ಮೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ತಾಯಿ ರತ್ನವ್ವ ಬಳಿ ಸಿಬ್ಬಂದಿ ಭಾವನಾತ್ಮಕವಾಗಿ ಮಾತಾಡಿದಾಗ ಆಕೆ ಕೊಲೆಯ ರಹಸ್ಯ ಬಿಚ್ಚಿಟ್ಟಿದ್ದಾಳೆ.

ಇದನ್ನೂ ಓದಿ: ಮನೆಯೊಳಗೆ ಗುಂಡಿಕ್ಕಿ ಆಭರಣ ವ್ಯಾಪಾರಿ ಮತ್ತವರ ಪತ್ನಿಯ ಹತ್ಯೆ

ನಾಲ್ಕು ಎಕರೆ ಜಮೀನಿಗಾಗಿ ಬಸಲಿಂಗ ಮತ್ತು ಸಿದ್ದಪ್ಪ ನಡುವೆ ಗಲಾಟೆ ನಡೆದಿತ್ತು. ಆಸ್ತಿ ಬಗ್ಗೆ ತಮ್ಮ ಬಸಲಿಂಗ ಅಣ್ಣನ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಹೀಗಾಗಿ ದನದ ಕೊಟ್ಟಿಗೆಯಲ್ಲಿ ಆತನ ಮೇಲೆ ಸಿದ್ದಪ್ಪ ಹಲ್ಲೆ ನಡೆಸಿದ್ದ. ಕಟ್ಟಿಗೆ ಮತ್ತು ಕಲ್ಲಿನಿಂದ ದಾಳಿ ನಡೆಸಿದ ಪರಿಣಾಮ ಬಸಲಿಂಗ ಮೃತಪಟ್ಟಿದ್ದ. ತಾಯಿ ರತ್ನವ್ವ ಮತ್ತು ಬಸಲಿಂಗನ ಪತ್ನಿ ವೀಣಾ ಎದುರೇ ಈ ಘಟನೆ ನಡೆದಿತ್ತು. ಬಳಿಕ ವೀಣಾಗೆ ಜೀವ ಬೆದರಿಕೆ ಹಾಕುವ ಮೂಲಕ ಸಿದ್ದಪ್ಪ ಪ್ರಕರಣ ಮುಚ್ಚಿಹಾಕಿದ್ದ. ಆದರೆ ಆತನ ತಾಯಿಯೇ ಈಗ ಮಗನ ಕೊಲೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ತನಿಖೆ ವೇಳೆ ರತ್ನವ್ವ ನೀಡಿರುವ ಮಾಹಿತಿ ಹಿನ್ನೆಲೆ ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಸಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ತಮ್ಮನ ಕೊಂದು ಬಚಾವ್​ ಆಗಲು ಆರೋಪಿ ನಡೆಸಿದ್ದ ಸರ್ವ ಪ್ರಯತ್ನಗಳೂ ವಿಫಲವಾಗಿದ್ದು, ಕಂಬಿ ಹಿಂದೆ ನಿಲ್ಲಲೇ ಬೇಕಾದ ಸ್ಥಿತಿ ಸಿದ್ದಪ್ಪಗೆ ಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.