ಸಿಡಿ ಕೇಸ್ ಮುಕ್ತಾಯದ ಹಂತದಲ್ಲಿದೆ, ರಮೇಶ್‌ಗೆ ಮತ್ತೆ ಸಚಿವ ಸ್ಥಾನ ಸಿಗಲಿ: ಬಾಲಚಂದ್ರ ಜಾರಕಿಹೊಳಿ
ಶಾಸಕ ರಮೇಶ್‌ಗೆ ಒಳ್ಳೆಯದಾಗುತ್ತೆಂಬ ಆಸೆ ಇದೆ ಎಂದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಹೇಳಿದರು.
ಬೆಳಗಾವಿ: ಮಾರ್ಚ್ 25ರ ಬಳಿಕ ಮುಖ್ಯಮಂತ್ರಿ ದೆಹಲಿಗೆ ಹೋಗುವ ಸಾಧ್ಯತೆಯಿದೆ. ಏಪ್ರಿಲ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ನಿರೀಕ್ಷೆಯಿದೆ. ಬೆಳಗಾವಿ ಜಿಲ್ಲೆಗೆ ಎಷ್ಟು ಸ್ಥಾನ ಕೊಡ್ತಾರೆಂಬುದು ಹೈಕಮಾಂಡ್ ಮತ್ತು ಸಿಎಂಗೆ ಬಿಟ್ಟ ವಿಚಾರ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದರು. ರಮೇಶ್ ಜಾರಕಿಹೊಳಿ (Ramesh Jarkiholi) ಸಿಡಿ ಪ್ರಕರಣ ಕ್ಲಿಯರ್ ಆಗಿದೆ. ಪ್ರಕರಣ ಕ್ಲಿಯರ್ ಆದ ಬಳಿಕ ನೋಡೋಣ ಎಂದಿದ್ದರು. ಹೀಗಾಗಿ ಶಾಸಕ ರಮೇಶ್‌ಗೆ ಒಳ್ಳೆಯದಾಗುತ್ತೆಂಬ ಆಸೆ ಇದೆ ಎಂದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಹೇಳಿದರು.
ಏಪ್ರಿಲ್‌ನಲ್ಲಿ ಸಂಪುಟ ವಿಸ್ತರಣೆ ಆಗಬಹುದು ಎನ್ನುವ ಮಾತುಗಳಿವೆ. ಆಗ ಅವಕಾಶ ಸಿಕ್ಕರೆ ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗುತ್ತದೆ. ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದರು. ಈಗ ಸಿಡಿ ಕೇಸ್ ಮುಕ್ತಾಯದ ಹಂತದಲ್ಲಿದೆ. ಹೈಕೋರ್ಟ್‌ಗೆ ಪಿಐಎಲ್ ಹಾಕಿದ್ರು, ತೀರ್ಪು ಬಂದ ಬಳಿಕ ಸುಪ್ರೀಂಕೋರ್ಟ್‌ಗೆ ಹೋದ್ರು. ಸುಪ್ರೀಂಕೋರ್ಟ್ ಸಹ ವಾಪಸ್ ಹೈಕೋರ್ಟ್ನಲ್ಲಿ ಡಿಸಿಷನ್ ತಗೊಳಿ ಅಂದಿತ್ತು. ಕಳೆದ ತಿಂಗಳು ಹತ್ತನೇ ತಾರೀಖು ಆ ಪಿಐಎಲ್ ಡಿಸ್ಮಿಸ್ ಆಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ವರದಿ ಸಲ್ಲಿಕೆಯಾಗಿದೆ. ಸಿಡಿ ಕೇಸ್ ಬಿ-ರಿಪೋರ್ಟ್‌ನಲ್ಲಿ ಹೆಚ್ಚು ಕಡಿಮೆ ಟ್ರ್ಯಾಪ್ ಅಂತ ಇದೆ. ರಮೇಶ್ ಅವರ ಮೇಲೆ ಬಹುತೇಕ ಯಾವುದೂ ಕೇಸ್ ಇಲ್ಲ. ಸಣ್ಣಪುಟ್ಟ ಬೇರೆ ಯಾವುದೋ ಎಫ್ಐಆರ್ ಕ್ವ್ಯಾಶಿಂಗ್ ಕೇಸ್ ಇವೆ. ರಮೇಶ್ ಜಾರಕಿಹೊಳಿ ಅವರ ಸಿಡಿ ಕೇಸ್ ಕ್ಲಿಯರ್ ಆಗಿದೆ. ಆದಷ್ಟು ಬೇಗ ಒಳ್ಳೆಯದಾಗಲಿ ಅಂತಾ ನಾವು ಹಾರೈಸುತ್ತೇವೆ. ಹೈಕಮಾಂಡ್ ಜೊತೆ ನಾವೇನೂ ಮಾತನಾಡಿಲ್ಲ. ರಮೇಶ್ ಅವರಿಗೆ ಒಳ್ಳೆಯದಾಗಲಿ ಅಂತಾ ಹಾರೈಸುತ್ತೇವೆ. ಪಂಚರಾಜ್ಯ ಚುನಾವಣೆ ಬಳಿಕ ಹೊಸ ಮುಖ್ಯಮಂತ್ರಿ ಆಯ್ಕೆ ಸಂಬಂಧ ನಾಯಕರು ಬ್ಯುಸಿ ಇದ್ದಾರೆ ಎಂದು ನುಡಿದರು.
‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ’ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್ ನಾಯಕರ ಮಧ್ಯೆ ಟಾಕ್‌ಫೈಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಬಾಲಚಂದ್ರ ಜಾರಕಿಹೊಳಿ, ನಾನಿನ್ನೂ ಸಿನಿಮಾ ನೋಡಿಲ್ಲ, ಸಿನಿಮಾ ನೋಡಿದ ಬಳಿಕ ಯಾರ ಹೇಳಿಕೆ ಸರಿ ಇದೆ ಎಂದು ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಜನರು ಈಗಾಗಲೇ ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಕಲೆಕ್ಷನ್ ಚೆನ್ನಾಗಿದೆ ಎಂಬ ವರದಿಗಳೂ ಬರುತ್ತಿವೆ. ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆದ್ದ ಮೇಲೆ ಕಾಂಗ್ರೆಸ್‌ನವರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಬಗ್ಗೆ ತಲೆ ಕೆಡಿಸಿಕೊಳ್ಳೋದು ನಿಲ್ಲಿಸಿ, 2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡೋಣ. ಪಕ್ಷ ಬಿಟ್ಟು ಹೋದವರು ಬಂದರೆ ಮತ್ತೆ ಸೇರಿಸಿಕೊಳ್ಳುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಹೋಗ್ತಾರೆ, ಇವರು ಹೋಗ್ತಾರೆ ಅಂತೆಲ್ಲಾ ಎಲ್ಲರೂ ಸುಮ್ಮನೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಪಕ್ಷ ಬಿಟ್ಟು ಯಾರೂ ಹೋಗುವುದಿಲ್ಲ. ಎಲ್ಲರೂ ಬಿಜೆಪಿಯಲ್ಲೇ ಇರುತ್ತಾರೆ. 2023ರ ಚುನಾವಣೆಯಲ್ಲಿ 17 ಶಾಸಕರು ಬಿಜೆಪಿ ಟಿಕೆಟ್ ಮೇಲೆಯೇ ಸ್ಪರ್ಧಿಸುತ್ತಾರೆ. ವದಂತಿ ಹಬ್ಬಿಸುವವರ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ ಎಂದರು.
ಹಾಲಿನ ಬೆಲೆ ಏರಿಕೆಗೆ ಒತ್ತಾಯ
ನಂದಿನ ಹಾಲು ಉತ್ಪನ್ನ ಘಟಕವನ್ನು ಬೆಳಗಾವಿಯಲ್ಲಿ ನಿರ್ಮಿಸಿದರೆ ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಮಾರ್ಕೆಟಿಂಗ್ ಮಾಡಲು ಅನುಕೂಲ ಆಗುತ್ತದೆ. ಘಟಕ ನಿರ್ಮಾಣಕ್ಕೆ 100 ಎಕರೆ ಜಮೀನು ಬೇಕಿದೆ. ಹೆದ್ದಾರಿ ಸಂಪರ್ಕ ಮತ್ತು ನೀರಿನ ವ್ಯವಸ್ಥೆ ಇರುವ ಸೂಕ್ತ ಜಾಗ ಸಿಕ್ಕ ಕೂಡಲೇ ₹ 300 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಾಣ ಮಾಡುತ್ತೇವೆ ಎಂದು ಘೋಷಿಸಿದರು. ಇದರಿಂದ ಈ ಭಾಗದ ಜನರಿಗೆ ಉದ್ಯೋಗವಕಾಶವೂ ಸಿಗುತ್ತೆ. ಕೆಎಂಎಫ್ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಬೇಡಿಕೆಯಿದೆ. ಆದರೆ ಬೇಡಿಕೆಯಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೆಳಗಾವಿಯಲ್ಲಿ ಪ್ಲಾಂಟ್ ಮಾಡುತ್ತೇವೆ. ರೈತರು, ಗ್ರಾಹಕರಿಗೆ ಅನುಕೂಲ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದರು. ಹಾಲಿನ ದರ ಹೆಚ್ಚಿಸಬೇಕು ಎಂದು ರಾಜ್ಯದ ಎಲ್ಲ 14 ಜಿಲ್ಲಾ ಹಾಲಿನ ಒಕ್ಕೂಟಗಳು ಒತ್ತಡ ಹಾಕುತ್ತಿವೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ, ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಬೇಸಿಗೆಯಲ್ಲಿ ಹಾಲು ಬರುವುದು ಕಡಿಮೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಹೆಚ್ಚಿನ ದರ ಕೊಟ್ಟರೆ ರೈತರಿಗೆ ಅನುಕೂಲ ಆಗುತ್ತದೆ. ಬೆಳಗಾವಿಯಲ್ಲಿ ಆಕಳು ಹಾಲು ಖರೀದಿಗೆ ₹ 23 ದರ ಇತ್ತು. ಇದನ್ನು ₹ 25 ಮಾಡಿದ್ದೇವೆ. ಎಮ್ಮೆ ಹಾಲನ್ನು ₹ 36ಕ್ಕೆ ಖರೀದಿಸುತ್ತಿದ್ದೇವು, ಇದನ್ನು ₹ 38 ಮಾಡಿದೆವು. ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಹಾಲು ಮಾರುತ್ತಿರುವುದು ನಾವು. ಗ್ರಾಹಕರಿಗೆ ಹೊರೆ ಆಗದ ರೀತಿಯಲ್ಲಿ ಹಾಲಿನ ದರ ಹೆಚ್ಚು ಮಾಡಿದ್ರೆ ರೈತರಿಗೆ ಅನುಕೂಲವಾಗುತ್ತದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ತೀರ್ಮಾನವೇ ಅಂತಿಮ ಎಂದು ನುಡಿದರು.
ಬಿಜೆಪಿಯ ಬೆಳಗಾವಿ ಜಿಲ್ಲಾ ಘಟಕದಲ್ಲಿ ಬಣಗಳ ರಾಜಕೀಯ ಹೆಚ್ಚಾಗಿರುವ ಕುರಿತು ಪ್ರತಿಕ್ರಿಯಿಸಿ ಅವರು, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಮುಖ್ಯಮಂತ್ರಿಯೊಂದಿಗೆ ರಮೇಶ್ ಜಾರಕಿಹೊಳಿ ಚರ್ಚಿಸಿರಬಹುದು. ಬಣ ರಾಜಕೀಯ ಶಮನಕ್ಕೆ ಈ ಹಿಂದೆ ನಾನು ಪ್ರಯತ್ನಿಸಿದ್ದೆ. ಆದರೆ ಯಾರೂ ಕೂಡ ಅದಕ್ಕೆ ಸ್ಪಂದಿಸಲಿಲ್ಲ. ಹೀಗಾಗಿ ನಾವು ನಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದೇವೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ವಿರುದ್ಧ ನೌಕರಸ್ಥರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಚುನಾವಣೆ ನಡೆದಾಗ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿ ಮತ್ತು ಸಂಘಪರಿವಾರದವರು ಬಂದು ಎಲ್ಲಾ ಸೆಟಲ್ ಮಾಡಿದ್ದಾರೆ. ಈಗಲೂ ಅವರ ಮುಂದೆಯೇ ವಿಷಯ ಪ್ರಸ್ತಾಪಿಸಿ, ಸರಿಪಡಿಸಲು ಕೇಳುತ್ತೇವೆ. ನೌಕರಸ್ಥರ ಸಮಸ್ಯೆ ಬಗೆಹರಿಸಲು ನೌಕರಸ್ಥರ ಸಂಘದವರು ಮನವಿ ಮಾಡಿದ್ದರು ಎಂದರು.
ಇದನ್ನೂ ಓದಿ: ಎಸ್ಐಟಿ ವರದಿ ಸಲ್ಲಿಕೆಗೆ ಸುಪ್ರೀಂ ತಡೆಯಾಜ್ಞೆ: ಶಾಸಕ ರಮೇಶ್ ಜಾರಕಿಹೊಳಿಗೆ ತಪ್ಪಲಿಲ್ಲ ಸಂಕಷ್ಟ!
ಇದನ್ನೂ ಓದಿ: ಸಿಡಿ ಬಹಿರಂಗ ಪ್ರಕರಣ: ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ; ಪ್ರಕರಣದ ಮರುತನಿಖೆ ಕೋರಿ ಅರ್ಜಿ ಸಲ್ಲಿಕೆ
Published On - 9:19 am, Sun, 20 March 22