ಬೆಳಗಾವಿ, ಏ.13: ಬೆಳಗಾವಿ ಲೋಕಸಭಾ ಕ್ಷೇತ್ರ,(Belgavi Lok Sabha Constituency) ದಿನೇ ದಿನೇ ರಂಗು ಪಡೆದುಕೊಳ್ಳುತ್ತಿದ್ದು, ಚುನಾವಣೆ ಕಾವು ಜೋರಾಗುತ್ತಿದೆ. ಮೊದಲ ಬಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಗೋಕಾಕ್, ಅರಬಾವಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಪುತ್ರನ ಪರ ರಮೇಶ್ ಜಾರಕಿಹೊಳಿ(Ramesh Jarkiholi) ಕೋಟೆಯಲ್ಲಿ ಭರ್ಜರಿ ಮತಯಾಚನೆ ನಡೆಸಿದ್ದರು. ಇದಾದ ಬಳಿಕ ಸೈಲೆಂಟ್ ಆಗಿದ್ದ ಸಾಹುಕಾರ್ ಇದೀಗ ಅಖಾಡಕ್ಕಿಳಿದಿದ್ದಾರೆ. ಚುನಾವಣಾ ಅಖಾಡಕ್ಕೆ ಧುಮ್ಮಿಕ್ಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮೊದಲ ದಿನವೇ ಹೆಬ್ಬಾಳ್ಕರ್ ಕ್ಷೇತ್ರದಿಂದ ಪ್ರಚಾರ ಶುರು ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದರು. ಇನ್ನು ಸಮಾವೇಶದಲ್ಲಿ ಹೆಬ್ಬಾಳ್ಕರ್ ವಿರುದ್ದ ಒಂದೇ ಒಂದು ಮಾತಾಡದೇ ಮೋದಿಯವರನ್ನ ಪ್ರಧಾನಿ ಮಾಡಬೇಕು ಮತ್ತು ಕೆಟ್ಟ ಸರ್ಕಾರ ಕಿತ್ತು ಒಗೆಯಬೇಕು ಎಂದು ಹೇಳಿದ್ದಾರೆ. ಆದರೆ, ಅವರ ಶಿಷ್ಯಂದಿರಾದ ಸಂಜಯ್ ಪಾಟೀಲ್ ಮತ್ತು ಧನಂಜಯ್ ಜಾಧವ್ ಮೂಲಕ ತಾವೇನೂ ಹೆಬ್ಬಾಳ್ಕರ್ಗೆ ಮೆಸೆಜ್ ಪಾಸ್ ಮಾಡಬೇಕಿತ್ತೋ ಅದನ್ನ ಭಾಷಣದಲ್ಲಿ ಮಾಡಿಸಿದರು. ಇದೇ ಸಂದರ್ಭದಲ್ಲಿ ಮತ್ತೆ ಸರ್ಕಾರ ಬೀಳುವ ಮಾತಾಡಿದ ರಮೇಶ್, ಚುನಾವಣೆ ಮುಗಿದ ಮೇಲೆ ಮತ್ತೆ ಡಬಲ್ ಇಂಜಿನ್ ಸರ್ಕಾರ ಬರುತ್ತೆ ಎಂದು ಹೇಳಿದರು.
ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಮಾತನಾಡಲು ಹೋಗಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಅತೀ ಹೆಚ್ಚು ಮಹಿಳೆಯರು ಸಮಾವೇಶದಲ್ಲಿ ಭಾಗಿಯಾಗಿದ್ದೀರಿ, ಇದರಿಂದ ಅವರಿಗೆ ಇಂದು ರಾತ್ರಿ ನಿದ್ದೆ ಬರುವುದಿಲ್ಲ. ಅದರಲ್ಲೂ ಇಂದು ರಮೇಶ್ ಜಾರಕಿಹೊಳಿ ಕೂಡ ಪ್ರಚಾರಕ್ಕೆ ಬಂದಿದ್ದರಿಂದ ಮಾತ್ರೆ ಜೊತೆಗೆ ಒಂದು ಪೆಗ್ ಎಕ್ಸ್ಟ್ರಾ ಹಾಕಿಕೊಳ್ಳಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜೊತೆಗೆ ಹೆಬ್ಬಾಳ್ಕರ್ ಅವರು ಒಂದು ಕಡೆ ಹಿಂದುತ್ವದ ಜಪ ಮಾಡ್ತಾರೆ, ಮತ್ತೊಂದು ಕಡೆ ಟಿಪ್ಪು ಸುಲ್ತಾನ್ ಪರವಾಗಿ ಮಾತಾಡ್ತಾರೆ. ಈ ರೀತಿ ಡಬಲ್ ಸ್ಟ್ಯಾಂಡ್ ಯಾಕೆ ಎಂದು ಕೇಳಿದ್ದಾರೆ. ಹಿಂದುತ್ವದ ಮೇಲೆ ನಿಜವಾಗಿಯೂ ಕಾಳಜಿ ಇದ್ದರೆ ನಿಮ್ಮದೇ ಸರ್ಕಾರ ಇದೆ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತನ್ನಿ, ಹಾಗೇನಾದ್ರೂ ಮಾಡಿದರೆ ನಿಮ್ಮ ಜೊತೆಗೆ ನಾನು ಓಡಾಡುತ್ತೇನೆ. ಒಂದು ವೇಳೆ ನಿಮಗೆ ಮಾಡಲು ಆಗಲಿಲ್ಲ ಎಂದರೆ, ನೀವು ಹಿಂದುತ್ವದ ಹೆಸರು ಹೇಳಬೇಡಿ ಎಂದು ಸಂಜಯ್ ಪಾಟೀಲ್ ಸವಾಲ್ ಹಾಕಿದ್ದಾರೆ.
ಒಂದು ಕಡೆ ಚುನಾವಣೆ ಕಾವು ರಂಗೇರುತ್ತಿದ್ದರೆ, ಇನ್ನೊಂದು ಕಡೆ ನಾಯಕರ ನಡುವಿನ ಮಾತಿನ ವರಸೆಯೂ ಜೋರಾಗುತ್ತಿದ್ದು, ಅತೀ ರೇಖಕ್ಕೂ ಹೋಗುತ್ತಿದೆ. ವೈಯಕ್ತಿಕ ನಿಂದನೆ ಕೂಡ ಚುನಾವಣೆಯಲ್ಲಿ ನಡೆಯುತ್ತಿದ್ದು, ಮತದಾರರು ಎಲ್ಲವನ್ನೂ ಸೂಕ್ಷವಾಗಿ ಗಮನಿಸುತ್ತಿದ್ದಾರೆ. ಒಟ್ಟಿನಲ್ಲಿ ಮೇ.7ರಂದು ನಡೆಯುವ ಮತದಾನಕ್ಕೆ, ಮತದಾರರು ಯಾರಿಗೆ ಜೈ ಅಂತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಬದ್ದ ವೈರಿಗಳನ್ನ ಸೋಲಿಸಲು ತಂತ್ರ-ರಣತಂತ್ರ ನಡೆದಿದ್ದು, ಇದರಲ್ಲಿ ಯಾರು ಸಕ್ಸಸ್ ಆಗುತ್ತಾರೆ ಎನ್ನುವುದು ಜೂನ್ 4ರಂದು ಫಲಿತಾಂಶದ ಮೂಲಕ ಗೊತ್ತಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ