ಬೆಳಗಾವಿ: ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿದೆ. ಅಪೆಕ್ಸ್ ಬ್ಯಾಂಕ್ಗೆ ಮಾಜಿ ಮಂತ್ರಿ 600 ಕೋಟಿ ರೂ. ಕಟ್ಟಬೇಕು. ಅಪೆಕ್ಸ್ ಬ್ಯಾಂಕ್ ನವರು ಜಿಲ್ಲಾಧಿಕಾರಿಗೆ ಪತ್ರ ಬರೆದು 2 ವರ್ಷ ಆದರೂ ಕ್ರಮ ಕೈಗೊಂಡಿಲ್ಲ. ರೈತರಿಗೆ 50 ಕೋಟಿ ರೂಪಾಯಿ ಕೊಡಬೇಕು. ಇದನ್ನ ಕೊಡಿಸುವುದು ಜಿಲ್ಲಾಡಳಿತದ ಕರ್ತವ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ಅವರನ್ನ (ರಮೇಶ್ ಜಾರಕಿಹೊಳಿ) ರಕ್ಷಣೆ ಮಾಡಿಕೊಂಡು ಸಿಎಂ ಅವರ ಬೆನ್ನಿಗೆ ನಿಂತಿದ್ದಾರೆ. ಮುಖ್ಯಮಂತ್ರಿಗೆ ಗೊತ್ತಿದ್ದರೂ ಕೂಡ ಅವರು ಏನೂ ಮಾಡಿಲ್ಲ. ಕೂಡಲೇ ಸಿಎಂ ಮತ್ತು ಸಹಕಾರಿ ಸಚಿವರು ಇದಕ್ಕೆ ಉತ್ತರ ನೀಡಲಿ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹ ಮಾಡಿದ್ದಾರೆ.
ಅಪೆಕ್ಸ್ ಬ್ಯಾಂಕ್ ನಿಂದ ಒಂದು ಖಾತೆ ಬರೆಯಿಸಿಬಿಟ್ಟು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಒಂದು ಸಣ್ಣ ಸೊಸೈಟಿಯಲ್ಲಿ ಇಪ್ಪತ್ತು ಕೋಟಿ ದಿವಾಳಿ ಅಂತಾ ಹಾಕಿಕೊಂಡು ಕುಳಿತಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬೇನಾಮಿ ಹೆಸರಲ್ಲಿ ಇಸ್ಕೊಂಡು ಈಗ ಇವರೇ ಕಾರ್ಖಾನೆ ನಡೆಸುವ ಕೆಲಸ ಆಗ್ತಿದೆ. ಕೂಡಲೇ ಮುಖ್ಯಮಂತ್ರಿ ಮತ್ತು ಸಹಕಾರಿ ಸಚಿವರು ಇದಕ್ಕೆ ಉತ್ತರ ಕೊಡಬೇಕು. ಕೇಂದ್ರ ಸಚಿವರಿಗೂ ಈ ವಿಚಾರವನ್ನ ತಿಳಿಸಬೇಕು. ಹಣ ವಸೂಲಿ ಮಾಡಿಕೊಳ್ಳಲು ಆಸ್ತಿ ಪಾಸ್ತಿ ಜಪ್ತಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ರಕ್ಷಣೆ ಕೊಟ್ಟ ಅಧಿಕಾರಿಗಳನ್ನ ಕೂಡಲೇ ಅಮಾನತು ಮಾಡಬೇಕು. ಸೌಭಾಗ್ಯ ಲಕ್ಷ್ಮೀ ಕಾರ್ಖಾನೆಯವರೇ ಕೇಳಿಕೊಂಡಿದ್ದಾರೆ. ನಾವು ದಿವಾಳಿಯಾಗಿದ್ದೇವೆ, ಬರಬಾದ್ ಆಗಿದ್ದೇವೆ, ನಾವು ಭಿಕ್ಷುಕರಾಗಿದ್ದೇವೆ ಅಂತಾ ಅವರೇ ಹೇಳಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಸಾಹುಕಾರ್ ವಿರುದ್ಧ ಡಿಕೆಶಿ ತೀವ್ರ ವಾಗ್ದಾಳಿ ನಡೆಸಿದರು. ರೈತರ ಹಣ ಸಿಗಬೇಕು, ಬ್ಯಾಂಕ್ ಗೆ ಹಣ ಸಿಗಬೇಕು, ಟ್ಯಾಕ್ಸ್ ಕಟ್ಟಬೇಕು. ಮಂಗಳೂರು, ತುಮಕೂರು, ವಿಜಯಪುರ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಎಲ್ಲಾ ವಸೂಲಿ ಆಗಬೇಕು. ಮುಖ್ಯಮಂತ್ರಿಗಳು, ಸಹಕಾರಿ ಸಚಿವರು ರಕ್ಷಣೆ ಕೊಟ್ರೇ ನಮ್ಮ ಹೋರಾಟ ಎನು ಎಂಬುದನ್ನ ತಿಳಿಸುತ್ತೇವೆ ಎಂದು ಡಿಕೆಶಿ ಸವಾಲು ರೂಪದಲ್ಲಿ ಹೇಳಿದರು.
ಮೆಂಟಲ್ ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಹಾಕಿದ್ದೇನೆ:
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಮೆಂಟಲ್ ಎಂದು ಡಿಕೆ ಶಿವಕುಮಾರ್ ಇದೆ ಸಂದರ್ಭದಲ್ಲಿ ಟಾಂಗ್ ಕೊಟ್ಟರು. ನಾನು ಬಿಜೆಪಿ ನಾಯಕರ ಬಳಿ ಹೋಗಿ ರಕ್ಷಣೆ ಕೇಳಿದ್ದೇನಂತೆ! IT, EDಯಿಂದ ರಕ್ಷಿಸಿ ಎಂದು ನಾನು ಕೇಳಿದ್ದೇನಂತೆ! ಹೀಗಂತ ಯತ್ನಾಳ್ ನನ್ನ ಬಗ್ಗೆ ಹೇಳಿಕೊಂಡಿದ್ದಾನೆ ಎಂದು ಡಿಕೆಶಿ ಆಕ್ರೋಶಭರಿತರಾಗಿ ಪ್ರತಿಕ್ರಿಯಿಸಿದರು. ಈ ಹಿನ್ನೆಲೆಯಲ್ಲಿ 102 ಕೋಟಿ ರೂಪಾಯಿ ಮಾನನಷ್ಟ ಕೇಸ್ ಹಾಕಿದ್ದೇನೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಯತ್ನಾಳ್ ಹೇಳಿಕೆ ಬಗ್ಗೆ ಸಿಬಿಐ, ಇಡಿ, ಐಟಿ ಕ್ರಮಕೈಗೊಳ್ಳಬೇಕು: ಕರ್ನಾಟಕ ಮುಖ್ಯಮಂತ್ರಿ ಕುರ್ಚಿಗೆ 2,500 ಕೋಟಿ ರೂ ಕೇಳಿದ್ದರು ಅಂತಾ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ. ಶಿಕ್ಷಕರ, ಪಿಎಸ್ಐ, ಕೆಪಿಎಸ್‌ಸಿ, ಇಂಜಿನಿಯರ್ ಎಲ್ಲರ ಆಯ್ಕೆ ವಿಚಾರದಲ್ಲಿ ಭ್ರಷ್ಟಾಚಾರವಿದೆ. ಎಂದಿಗೂ ರಾಜ್ಯದಲ್ಲಿ ಈ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರಲಿಲ್ಲ, ಈಗ ನಡೀತಿದೆ. ಪೋಸ್ಟಿಂಗ್‌ಗೆ ಇಷ್ಟಿಷ್ಟು ಬೆಲೆ ಅಂತಾ ತನಿಖೆ ಮಾಡಿ ಮಾಧ್ಯಮದವರು ಹೇಳಿದ್ರು. ಸಿಎಂ, ಮಂತ್ರಿ ಸ್ಥಾನಕ್ಕೂ ಬೆಲೆ ಫಿಕ್ಸ್ ಆಗಿದೆ. ಒಬ್ಬ ಆಡಳಿತ ಪಕ್ಷದ ನಾಯಕ ಇದನ್ನು ತಿಳಿಸಿದ್ದಾರೆ. ಈ ಬಗ್ಗೆ ಸಿಬಿಐ, ಇಡಿ, ಐಟಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಶಾಸಕ ಯತ್ನಾಳ್ ವಶಕ್ಕೆ ಪಡೆದು ಈ ಬಗ್ಗೆ ಮಾಹಿತಿ ಪಡೆಯಲಿ ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಆಗ್ರಹಿಸಿದರು. ಡಿಕೆಶಿ ಅಕ್ರಮ ಆಸ್ತಿ ನಾಶಕ್ಕೆ ಯತ್ನಾಳ್ ಬುಲ್ಡೋಜರ್ ಕಳಿಸ್ತಾರೆ ಎಂಬ ಹೇಳಿಕೆಗೆ ಯತ್ನಾಳ್ ಬರೋವರೆಗೆ ತಡವಾಗುತ್ತೆ, ಅವರದ್ದೇ ಸರ್ಕಾರ ಇದೆ. ಈಗಲೇ ಬುಲ್ಡೋಜರ್ ಕಳಿಸಲಿ ಎಂದೂ ಡಿಕೆಶಿ ಸವಾಲೆಸೆದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:17 pm, Sat, 7 May 22