ಬೆಳಗಾವಿ: ನನ್ನ ಸಿಡಿ ತಯಾರಿಸಿದ್ದ ‘ಮಹಾನ್ ನಾಯಕನೇ’ ಇದರಲ್ಲೂ ಭಾಗಿ ಆಗಿದ್ದಾರೆ. ನನ್ನ ಸಿಡಿ ತಯಾರಿಸಿದ ಟೀಂನವರೇ ಇದರಲ್ಲೂ ಷಡ್ಯಂತ್ರ ಮಾಡಿದ್ದಾರೆ. ಹೀಗಾಗಿ ಸಂತೋಷ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಲಿ. ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ನೀಡಬಾರದು. ತನಿಖೆಯಲ್ಲಿ ತಪ್ಪಿತಸ್ಥನೆಂದು ಸಾಬೀತಾದ್ರೆ ರಾಜೀನಾಮೆ ನೀಡಲಿ. ಅಲ್ಲಿಯವರೆಗೂ ಸಚಿವ ಈಶ್ವರಪ್ಪ ರಾಜೀನಾಮೆ ನೀಡಬಾರದು ಎಂದು ಸಂತೋಷ್ ಪ್ರಕರಣದ ಬಗ್ಗೆ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸುತ್ತೇನೆ. ಹೈಕಮಾಂಡ್ ಅನುಮತಿ ಪಡೆದು ಸುದ್ದಿಗೋಷ್ಠಿ ನಡೆಸುತ್ತೇನೆ. ಸುದ್ದಿಗೋಷ್ಠಿ ನಡೆಸಿ ಷಡ್ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವೆ. ಸಿಡಿ ಕೇಸ್, ಸಂತೋಷ್ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಲಿ. ಎರಡೂ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಯಲಿ. ನಾನು ಕಾಂಗ್ರೆಸ್‌ನಲ್ಲಿದ್ದಾಗಲೂ ಸಂತೋಷ್ ನನ್ನ ಜತೆಯಲ್ಲಿದ್ರು ಎಂದು ಸಂತೋಷ್ ಮನೆಗೆ ಭೇಟಿ ಬಳಿಕ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಪರೋಕ್ಷ ಆರೋಪ ಮಾಡಿದ್ದಾರೆ. ಸಂತೋಷ್ ಸಾವಿನ ಹಿಂದೆ ಡಿಕೆಶಿ ಕೈವಾಡದ ಬಗ್ಗೆ ಆರೋಪ ಮಾಡಿದ್ದಾರೆ. ಹೆಸರು ಹೇಳದೇ ‘ಮಹಾನ್ ನಾಯಕ’ನೆಂದು ಹೇಳಿ ಆರೋಪ ಮಾಡಿದ್ದಾರೆ. ನನ್ನ ಸಿಡಿ ತಯಾರಿಸಿದ ‘ಮಹಾನ್ ನಾಯಕ’ನೇ ಇದರಲ್ಲೂ ಭಾಗಿ. ಸಂತೋಷ್ ಕೇಸ್‌ನಲ್ಲೂ ‘ಮಹಾನ್ ನಾಯಕ’ ಭಾಗಿಯಾಗಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಬೆಳಗಾವಿಯ ವಿಜಯನಗರದಲ್ಲಿರುವ ಸಂತೋಷ್ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದಾರೆ. ಸಂತೋಷ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ವಿರುದ್ಧ ರಮೇಶ್ ಪರೋಕ್ಷ ಆರೋಪ ವಿಚಾರಕ್ಕೆ ಸಂಬಂಧಿಸಿ ದಾಖಲೆಗಳಿದ್ರೆ ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಲಿ. ಮಂಚದ ಹಿಂದೆ, ಲಂಚದ ಹಿಂದೆ ಯಾರಿದ್ದಾರೆಂದು ತಿಳಿಯುತ್ತದೆ. ರಾಜ್ಯದಲ್ಲಿ ಬಿಜೆಪಿಯವರೇ ಆಡಳಿತ ನಡೆಸುತ್ತಿದ್ದಾರೆ. ಬಿಜೆಪಿ ಬಳಿ ಸೂಕ್ತ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲ ಮೂಡಿಸಿದೆ. ಮಹಾನ್ ನಾಯಕನ ಬಗ್ಗೆ ಸುದ್ದಿ ಗೋಷ್ಠಿ ಮಾಡಲು ಸಾಹುಕಾರ್ ಸಿದ್ದತೆ ನಡೆಸಿದ್ದಾರೆ. ರಮೇಶ್ ಸಾಕಷ್ಟು ದಾಖಲೆ ಸಂಗ್ರಹ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಸಂತೋಷ್ ಗುತ್ತಿಗೆ ಕೆಲಸದ ಬಗ್ಗೆ ಸಂತೋಷ್ ಆಪ್ತರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಮ್ಮದು ಪಾರದರ್ಶಕ ಸರ್ಕಾರ: ಶ್ರೀರಾಮುಲು
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯ ಬಳಿಕ ಸತ್ಯಾಂಶ ಬಯಲಾಗುತ್ತದೆ. ಪ್ರಾಥಮಿಕ ವರದಿ ನೀಡಲು ಸಿಎಂ ಸೂಚನೆ ನೀಡಿದ್ದಾರೆ. ವರದಿ ಬಂದ ಬಳಿಕ ರಾಜೀನಾಮೆ ಬಗ್ಗೆ ನಿರ್ಧಾರ ಮಾಡುತ್ತಾರೆ. ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಗುತ್ತಿಗೆದಾರರು ಮಾಡುತ್ತಿರುವ ಆರೋಪ ನಿರಾಧಾರವಾಗಿದೆ. ಗುತ್ತಿಗೆದಾರರು ಹೇಳುವಂತೆ ನಮ್ಮ ಸರ್ಕಾರವಿಲ್ಲ. ನಮ್ಮದು ಪಾರದರ್ಶಕ ಸರ್ಕಾರ ಎಂದು ಬಿ.ಶ್ರೀರಾಮುಲು ಹೇಳಿದ್ದಾರೆ.
ಸಂತೋಷ್ ಸಾವಿನ ಸುತ್ತ ಅನುಮಾನದ ಹುತ್ತವೇ ಇದೆ: ಸಿಟಿ ರವಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆ ಈಶ್ವರಪ್ಪ ರಾಜೀನಾಮೆ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ. ಸಿಎಂ, ರಾಜ್ಯಾಧ್ಯಕ್ಷರು, ಈಶ್ವರಪ್ಪ ಸೂಕ್ತ ನಿರ್ಧಾರ ಮಾಡ್ತಾರೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಸಂತೋಷ್ ಸಾವಿನ ಸುತ್ತ ಅನುಮಾನದ ಹುತ್ತವೇ ಇದೆ. ಸಂತೋಷ್ ಬಿಜೆಪಿ ಕಾರ್ಯಕರ್ತ ಎಂದು ಹೇಳುತ್ತಾರೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯಲು ಯತ್ನಿಸಿದ್ದಾರೆ. ರಾಹುಲ್ ಗಾಂಧಿ ಹೆಸರು ನಕಲು ಮಾಡಿ ಪ್ರಯತ್ನಿಸಿದ್ದಾರೆ. ಜಿ.ಪಂ. ಟಿಕೆಟ್ ಪಡೆಯಲು ಯತ್ನಿಸಿದ್ದಾರೆಂಬ ಮಾಹಿತಿ ಇದೆ. ಸಂತೋಷ್ ಪಾಟೀಲ್ ದೆಹಲಿಗೆ ಹೋಗಿ ಸುದ್ದಿಗೋಷ್ಠಿ ಮಾಡ್ತಾರೆ. ಸಾಮಾನ್ಯ ವ್ಯಕ್ತಿ ದೆಹಲಿಗೆ ಹೋಗಿ ಸುದ್ದಿಗೋಷ್ಠಿ ಮಾಡಲು ಆಗುತ್ತಾ? ಇಷ್ಟೆಲ್ಲಾ ರಾಜಕಾರಣ ಗೊತ್ತಿರುವವರು ಆತ್ಮಹತ್ಯೆಗೆ ಏಕೆ ಶರಣಾದ? ಆತ್ಮಹತ್ಯೆಯೇ ಆಗಿದ್ಯಾ? ಇದರ ಹಿಂದೆ ಬೇರೆ ಏನಾದ್ರೂ ಇದೆಯಾ? ಎಲ್ಲಾ ವಿಚಾರಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಸಿ.ಟಿ. ರವಿ ಹೇಳಿದ್ದಾರೆ. ಏನೇ ಆದರೂ ಸಾವು ದುರದೃಷ್ಟಕರ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಕೆಎಸ್ ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಮೆರವಣಿಗೆ; ಪ್ರತಿಭಟನಾನಿರತರನ್ನು ವಶಕ್ಕೆ ಪಡೆದ ಪೊಲೀಸರು
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ, ಈಶ್ವರಪ್ಪ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ
Published On - 1:31 pm, Thu, 14 April 22