ಬೆಳಗಾವಿ ಕಾಂಗ್ರೆಸ್​ನಲ್ಲಿ ಎರಡು ಬಣ, ಒಳಜಗಳದಿಂದ ಬಿಜೆಪಿ ಲಾಭ: ಸತೀಶ್ ಜಾರಕಿಹೊಳಿ ಒಪ್ಪಿಗೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 08, 2021 | 4:28 PM

ಕಾಂಗ್ರೆಸ್ ನಾಯಕರಲ್ಲಿ ಹೊಂದಾಣಿಕೆ ಕೊರತೆಯ ಕಾರಣ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣದಲ್ಲಿ 3, ಉತ್ತರದಲ್ಲಿ 5 ಕ್ಷೇತ್ರ ಕಳೆದುಕೊಳ್ಳಬೇಕಾಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತಿಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಕಾಂಗ್ರೆಸ್​ನಲ್ಲಿ ಎರಡು ಬಣ, ಒಳಜಗಳದಿಂದ ಬಿಜೆಪಿ ಲಾಭ: ಸತೀಶ್ ಜಾರಕಿಹೊಳಿ ಒಪ್ಪಿಗೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತಿಶ್ ಜಾರಕಿಹೊಳಿ
Follow us on

ಬೆಳಗಾವಿ: ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ಎರಡು ಬಣಗಳು ಇರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬುಧವಾರ ಒಪ್ಪಿಕೊಂಡರು. ಪಕ್ಷದಲ್ಲಿ ಬಣಗಳ ಮೇಲಾಟ ನಡೆದಿದ್ದರಿಂದ ಹಿನ್ನಡೆ ಕಾಣಬೇಕಾಯಿತು ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಂದಾಣಿಕೆ ಕೊರತೆಯ ಕಾರಣ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣದಲ್ಲಿ 3, ಉತ್ತರದಲ್ಲಿ 5 ಕ್ಷೇತ್ರ ಕಳೆದುಕೊಳ್ಳಬೇಕಾಯಿತು ಎಂದರು.

ಮಾಜಿ ಶಾಸಕ ಫಿರೋಜ್ ಸೇಠ್ ಹಾಗೂ ಸತೀಶ್ ಜಾರಕಿಹೊಳಿ‌ ಮಧ್ಯೆ ಹೊಂದಾಣಿಕೆ ಕೊರತೆಯಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಸೋಲನ್ನು ಇಲ್ಲಿನ ನಾಯಕರು ವೈಫಲ್ಯ ಎಂದು ಹೇಳಲು ಆಗುವುದಿಲ್ಲ. ಬೆಳಗಾವಿಯಲ್ಲಿ ನಿಜಕ್ಕೂ ವೈಫಲ್ಯ ಅನುಭವಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ. ನಮಗೆ ನಮ್ಮ ಶಕ್ತಿ ಸೀಮಿತವಾದದ್ದು ಎಂದು ಗೊತ್ತಿತ್ತು. ಹೀಗಾಗಿಯೇ ಸೀಮಿತವಾಗಿ ಸ್ಪರ್ಧೆ ಮಾಡಿದ್ದೆವು. 58 ವಾರ್ಡ್​ಗಳ ಪೈಕಿ 45ರಲ್ಲಿ ಮಾತ್ರ ನಾವು ಸ್ಪರ್ಧಿಸಿದ್ದೆವು ಎಂದು ವಿವರಿಸಿದರು.

ಬೆಳಗಾವಿ ಕಾಂಗ್ರೆಸ್ ಘಟಕದಲ್ಲಿ ಮೂರು ಬಣಗಳು ಇಲ್ಲ. ಇರುವುದು ಎರಡೇ ಬಣ. ಉತ್ತರ ಕ್ಷೇತ್ರ, ದಕ್ಷಿಣ ಕ್ಷೇತ್ರಕ್ಕೆ ಹೊಂದಾಣಿಕೆ ಆಗುತ್ತಿಲ್ಲ. ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಎಂಬಂತೆ ಕೆಲವರೊಂದಿಗೆ ಸಹಯೋಗದ ಕೆಲಸ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಶಾಸಕ ಫಿರೋಜ್ ಸೇಠ್ ಜೊತೆ ಹೊಂದಾಣಿಕೆ ಕೊರತೆ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡರು.

ಟಿಕೆಟ್ ಹಂಚಿಕೆ ವಿಚಾರದಲ್ಲಿಯೂ ಗೊಂದಲಗಳು ಮುಂದುವರಿದ ಕುರಿತು ಪ್ರಸ್ತಾಪಿಸಿದ ಅವರು, ನಮಗೆ ಅಭ್ಯರ್ಥಿಗಿಂತಲೂ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧಿಸಿದ್ದವರು ಗೆಲ್ಲುವುದು ಮುಖ್ಯ. ಕಾಂಗ್ರೆಸ್​ ಮತ ನೀಡಬೇಡಿ ಎಂದು ನಮ್ಮ ಪಕ್ಷದ ಕೆಲ ನಾಯಕರೇ ಪ್ರಚಾರ ಮಾಡಿದ್ದೂ ಇದೆ ಎಂದು ಅವರು ಒಪ್ಪಿಕೊಂಡರು.

ಪಾಲಿಕೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಬಹುಮತ ಪಡೆದಿರುವುದು ನನಗೆ ಆಶ್ಚರ್ಯ ತಂದಿಲ್ಲ. ಯಾರು ಗೆಲ್ಲಬೇಕಿತ್ತೋ ಅವರು ಗೆದ್ದಿಲ್ಲ. ಅಂಥವರ ಸೋಲಿನ ಲಾಭ ಬಿಜೆಪಿಗೆ ಆಗಿದೆಯಷ್ಟೇ ಎಂದು ನುಡಿದರು.

ಪಾಲಿಕೆ ಚುನಾವಣೆಯಲ್ಲಿ ಗೆಲುವಿನ ಸಾಧನೆ ತಮ್ಮದೆಂದು ಬಿಜೆಪಿ ನಾಯಕರು ಬೀಗಬಾರದು. ಕಾಂಗ್ರೆಸ್ ಚಿಹ್ನೆಯ ಮೇಲೆ ಸ್ಪರ್ಧಿಸಿದ್ದ 15 ಮಂದಿ ಮತ್ತು ನಮ್ಮ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಐವರು ಗೆಲ್ಲುತ್ತಾರೆ ಎಂದು ಲೆಕ್ಕ ಹಾಕಿದ್ದೆವು. ನಮ್ಮ ಪಕ್ಷದ 10, ನಾವು ಬೆಂಬಲಿಸಿದ ಐವರು ಗೆದ್ದಿದ್ದಾರೆ. ನಮ್ಮಲ್ಲಿನ‌ ಹೊಂದಾಣಿಕೆ ಕೊರತೆಯಿಂದ 8 ಸ್ಥಾನ ಕಳೆದುಕೊಂಡೆವು. ಆದರೆ ನಾವು ಅಂದುಕೊಂಡಿದನ್ನು ಪಾಲಿಕೆ ಚುನಾವಣೆಯಲ್ಲಿ ಸಾಧಿಸಿದ್ದೇವೆ. ಎಂಇಎಸ್ ಬಂಡಾಯದ ಲಾಭ ಬಿಜೆಪಿಗೆ ಆಗಿದೆಯಷ್ಟೇ ಎಂದು ಒಂದೇ ವಾರ್ಡ್​ನಲ್ಲಿ ಎಂಇಎಸ್​ನ ನಾಲ್ವರು ಸ್ಪರ್ಧಿಸಿದ್ದ ವಿಚಾರ ಪ್ರಸ್ತಾಪಿಸಿದರು.

ಪಾಲಿಕೆಯ ಗೆಲುವನ್ನೇ ಲೋಕಸಭೆಯನ್ನೇ ಗೆದ್ದ ರೀತಿಯಲ್ಲಿ ಬಿಜೆಪಿ ನಾಯಕರು ಸಂಭ್ರಮಿಸುತ್ತಿದ್ದಾರೆ. ಲೋಕಸಭೆ ಉಪಚುನಾವಣೆಯಲ್ಲಿ ಬಂದಷ್ಟೇ ಮತಗಳು ಈಗಲೂ ಬಂದಿವೆ. ಮತ ಹಂಚಿಕೆಯಲ್ಲಿಯೂ ಯಾವುದೇ ವ್ಯತ್ಯಾಸವಾಗಿಲ್ಲ. ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಗಟ್ಟಿ ತಳಹದಿ ನಿರ್ಮಿಸಿದ್ದೇವೆ. ಫಲಿತಾಂಶದ ವಿರುದ್ಧ ಕೆಲ ಪರಾಜಿತ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಮತ ಹಂಚಿಕೆಯನ್ನು ಪರಿಶೀಲಿಸಬೇಕು. ಸುಮ್ಮನೆ ನ್ಯಾಯಾಲಯದ ಮೊರೆ ಹೋಗುವುದರಿಂದ ಯಾವುದೇ ಲಾಭವಿಲ್ಲ ಎಂದು ವಿವರಿಸಿದರು.

ಕಳೆದ ಸಲ ಎಂಇಎಸ್ 32 ಸ್ಥಾನಗಳಲಲ್ಲಿ ಜಯಗಳಿಸಿತ್ತು, ಈ ಬಾರಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಂಇಎಸ್​ಗೆ ಆಗಿರುವ ನಷ್ಟವೇ ಬಿಜೆಪಿಗೆ ಲಾಭವಾಗಿದೆ. ಎಂಟು ಸ್ಥಾನ ಕಳೆದುಕೊಳ್ಳಲು ನಮ್ಮಲ್ಲಿನ ಹೊಂದಾಣಿಕೆ ಕೊರತೆಯೇ ಕಾರಣ. ಚುನಾವಣೆ ‌ಸೋಲಿನ ಬಗ್ಗೆ ಶೀಘ್ರವೇ ಆತ್ಮಾವಲೋಕನ ಮಾಡುತ್ತೇವೆ. ಎಂಇಎಸ್​ನವರು ಭಾಷಾ ರಾಜಕಾರಣ ಬಿಟ್ಟು, ಅಭಿವೃದ್ಧಿ ಪರ ರಾಜಕಾರಣ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ‌ ಸಲಹೆ ಮಾಡಿದರು.

(Satish Jarkiholi Accepts There are Sections in Belagavi Congress Analyse reasons for failure)

ಇದನ್ನೂ ಓದಿ: Belagavi Municipal Election Results 2021: ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದವರ ಸಂಪೂರ್ಣ ಪಟ್ಟಿ ಇಲ್ಲಿದೆ

ಇದನ್ನೂ ಓದಿ: ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸಿಹಿ; ಕಲಬುರಗಿಯಲ್ಲಿ ಕಾಂಗ್ರೆಸ್​ಗೆ ಹೆಚ್ಚು ಖುಷಿ

Published On - 4:28 pm, Wed, 8 September 21