ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಇತಿಹಾಸ ಸೃಷ್ಟಿಸಿದೆ. ಮೇಯರ್ ಸ್ಥಾನದ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ ಇದೇ ಮೊದಲ ಬಾರಿಗೆ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. 25 ವರ್ಷದ ಬಳಿಕ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆಗಿಳಿದಿದ್ದ ಬಿಜೆಪಿ ಒಟ್ಟು 30 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನುಳಿದಂತೆ ಕಾಂಗ್ರೆಸ್‌ಗೆ 7, ಪಕ್ಷೇತರ 5, ಎಂಇಎಸ್ 2, ಎಂಐಎಂ 1 ಸ್ಥಾನದಲ್ಲಿ ಗೆಲುವು ಸಾಧಿಸಿವೆ. ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ, ಕಲಬುರಗಿ ಪಾಲಿಕೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ಮತ್ತು ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಪುತ್ರ ಚಂದು ಪಾಟೀಲ್ ಅವರಿಗೆ ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಲಾಗಿತ್ತು. ಅಲ್ಲದೇ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಬಿಬಿಎಂಪಿಯ 25 ಮಾಜಿ ಕಾರ್ಪೊರೇಟರ್‌ಗಳಿಗೂ ವಹಿಸಲಾಗಿತ್ತು. ಬೆಳಗಾವಿಯಲ್ಲಿ ಬಿಜೆಪಿ ಗೆಲುವಿಗೆ ಮಹಾರಾಷ್ಟ್ರ ವಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಪಾತ್ರವೂ ಬಹಳ ಪ್ರಾಮುಖ್ಯತೆ ಪಡೆದಿದೆ. ಮಹಾರಾಷ್ಟ್ರದಿಂದ 6 ತಂಡ ಕಳಿಸಿ ಬೆಳಗಾವಿಯ ಮರಾಠ ಸಮುದಾಯದ ಮತಗಳು ಬಿಜೆಪಿ ಪಾಲಾಗುವಂತೆ ದೇವೇಂದ್ರ ಫಡ್ನವೀಸ್ ನೋಡಿಕೊಂಡಿದ್ದರು ಎಂದು ಬಿಜೆಪಿಯ ಆಂತರಿಕ ಮೂಲಗಳು ತಿಳಿಸಿವೆ.
ವಾರ್ಡ್ 57 ರಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಸೋಮನಾಚೆ, ವಾರ್ಡ್ 8 ರಲ್ಲಿ ಬಿಜೆಪಿ ಅಭ್ಯರ್ಥಿ ಜ್ಯೋತಿಬಾ ನಾಯಿಕ್. ವಾರ್ಡ್ 42 ರಲ್ಲಿ ಬಿಜೆಪಿ ಅಭ್ಯರ್ಥಿ ಅಭಿಜಿತ್ ಜವಳೇಕರ್, ವಾರ್ಡ್ 49 ರಲ್ಲಿ ಬಿಜೆಪಿ ಅಭ್ಯರ್ಥಿ ದೀಪಾಲಿ ಟೋಪಗಿ, ವಾರ್ಡ್ 24 ರಲ್ಲಿ ಬಿಜೆಪಿ ಅಭ್ಯರ್ಥಿ ಗಿರೀಶ್ ದೊಂಗಡಿ, ವಾರ್ಡ್ 32ರಲ್ಲಿ ಬಿಜೆಪಿ ಅಭ್ಯರ್ಥಿ ಸಂದೀಪ್ ಗೆಲುವು ಸಾಧಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಬಹುತೇಕ ಬಿಜೆಪಿ ತೆಕ್ಕೆಗೆ ಹೋಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಮತ ಎಣಿಕೆ ಕೇಂದ್ರದತ್ತ ಆಗಮಿಸದ ‘ಕೈ’ ಮುಖಂಡರು ದೂರವೇ ಉಳಿದಿದ್ದಾರೆ. ಇತ್ತ ನಾಡದ್ರೋಹಿ ಎಂಇಎಸ್‌ಗೆ ಭಾರೀ ಮುಖಭಂಗವಾಗಿದೆ.
ಕಲಬುರಗಿ: ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಹಿನ್ನೆಲೆಯಲ್ಲಿ ಪಾಲಿಕೆ ಚುಕ್ಕಾಣಿ ಹಿಡಿಯೋಕೆ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಬೆಂಗಳೂರಿನಲ್ಲಿರುವ ಡಿ ಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ‘ಕೈ’ ನಾಯಕರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಲಬುರಗಿ ಚುನಾವಣಾ ಉಸ್ತುವಾರಿ ಆಗಿದ್ದ ಈಶ್ವರ್ ಖಂಡ್ರೆ ಹಾಗೂ ಕಲಬುರಗಿ ಜಿಲ್ಲೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಹುಬ್ಬಳ್ಳಿ- ಧಾರವಾಡ: ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತದತ್ತ ದಾಪುಗಾಲು ಹಾಕಿದೆ. ಇಲ್ಲಿಯವರೆಗೂ 30 ವಾಡ್೯ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದು, ಕಾಂಗ್ರೆಸ್ನ 17 ಅಭ್ಯರ್ಥಿಗಳು, ಪಕ್ಷೇತರರಾದ 05 ಮಂದಿ ಗೆಲುವಿನ ನಗೆ ಬೀರಿದ್ದಾರೆ.
ಹುಬ್ಬಳ್ಳಿ ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷ ಭಾರೀ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷನ ಪುತ್ರ ಸೋಲು ಕಂಡಿದ್ದು, ವಾರ್ಡ್ ನಂ.71ರಲ್ಲಿ ಕಾಂಗ್ರೆಸ್ 3ನೇ ಸ್ಥಾನಕ್ಕೆ ಕುಸಿದಿದೆ. ಕೈ ಅಭ್ಯರ್ಥಿ ಮೊಹಮ್ಮದ್ ಅಳ್ಳೂರುಗೆ ಹೀನಾಯ ಸೋಲು ಎದುರಾಗಿದ್ದು, ಎಐಎಂಐಎಂ ಅಭ್ಯರ್ಥಿ ನಜೀರ್ 2800 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಸಾದುದ್ದೀನ್ ಓವೈಸಿ ಅಭ್ಯರ್ಥಿಗೆ ಗೆಲುವು; ಉಳಿದ ಪಾಲಿಕೆಗಳ ತಾಜಾ ಫಲಿತಾಂಶ ಇಲ್ಲಿದೆ
(Hubballi Dharwad Belagavi Kalaburagi civic body polls latest updates)