ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ

ಕಳೆದ ಮೂರು ದಶಕಗಳಿಂದ ಮಂಜುನಾಥ ಹಿರೇಮಠ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ನಿರ್ಮಿಸುತ್ತಿದ್ಧಾರೆ. ಜೇಡಿಮಣ್ಣು, ಗೋಪಿ ಚಂದನ, ಅಷ್ಟಗಂಧ, ಇದ್ದಿಲು ಪುಡಿಯ ಮಿಶ್ರಣದಿಂದ ಬಗೆ ಬಗೆಯ ವಿಗ್ರಹಗಳನ್ನು ಇವರು ತಯಾರಿಸುತ್ತಿದ್ಧಾರೆ.

ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ
ಪರಿಸರ ಸ್ನೇಹಿ ಗಣೇಶ ವಿಗ್ರಹಗಳು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 07, 2021 | 5:09 PM

ಧಾರವಾಡ: ವಿಘ್ನವಿನಾಶಕ, ಮೋದಕ ಪ್ರೀಯ ಗಣೇಶನ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ನಗರದ ಯಾವುದೇ ರಸ್ತೆಗಳಲ್ಲಿ ತಿರುಗಾಡಿದರೂ ಮಾರಾಟಕ್ಕಿಟ್ಟ ಬಣ್ಣ ಬಣ್ಣದ ಗಣಪನ ವಿಗ್ರಹಗಳೇ ಕಣ್ಣಿಗೆ ಬೀಳುತ್ತವೆ. ಗಣೇಶ ಚತುರ್ಥಿ ದಿನ ಪ್ರತಿಷ್ಠಾಪನೆಯಾಗುವ ಗಣಪ ಆಯಾ ಮನೆಯವರ ಪದ್ಧತಿಯಂತೆ ಪೂಜಿಸಿಕೊಂಡು, ಕೊನೆಗೆ ನೀರಿನಲ್ಲಿ ವಿಸರ್ಜನೆಗೊಳ್ಳುತ್ತಾನೆ. ಹೀಗೆ ವಿಸರ್ಜನೆಗೊಳ್ಳುವ ವಿಗ್ರಹಗಳು ಕೆರೆ, ಬಾವಿಗಳಲ್ಲಿ ಉಂಟು ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಗಣೇಶ ವಿಗ್ರಹ ತಯಾರಿಕೆ ವೇಳೆ ಪರಿಸರಕ್ಕೆ ಹಾನಿಕಾರಕವಾಗಿರುವ ಬಣ್ಣಗಳನ್ನು ಬಳಸಲಾಗಿತ್ತುದೆ. ಹೀಗಾಗಿ ವಿಗ್ರಹವನ್ನು ನೀರಿಗೆ ಹಾಕುತ್ತಿದ್ದಂತೆಯೇ ನೀರು ಮಲೀನಗೊಳ್ಳುತ್ತದೆ. ಇನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ವಿಗ್ರಹಗಳಂತೂ ಎಷ್ಟು ದಿನಗಳಾದರೂ ಕರಗದೇ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇಂಥ ದಿನಗಳಲ್ಲಿ ಧಾರವಾಡದ ವಿಗ್ರಹ ತಯಾರಕ ಮಂಜುನಾಥ ಹಿರೇಮಠ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸುತ್ತಿರುವ ಇವರು ಸದ್ದಿಲ್ಲದೇ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ಪರಿಸರ ಸ್ನೇಹಿ ಗಣಪ ತಯಾರಾಗುವುದು ಹೇಗೆ? ಇದೀಗ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಆದರೆ ಗಣೇಶ ವಿಗ್ರಹ ಕೊಳ್ಳುವಾಗ ಕೊಂಚವಾದರೂ ಪರಿಸರದ ಬಗ್ಗೆ ನಾವು ಕಾಳಜಿ ವಹಿಸಲೇಬೇಕು. ಏಕೆಂದರೆ ಗಣೇಶ ವಿಸರ್ಜನೆ ಬಳಿಕ ವಿಗ್ರಹದಲ್ಲಿರುವ ಹಾನಿಕಾರಕ ರಾಸಾಯನಿಕಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ. ಇದು ಪರಿಸರದ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಧಾರವಾಡದ ಕೆಲಗೇರಿಯ ಗಾಯಿತ್ರಿಪುರಂ ಬಡಾವಣೆಯ ಮಂಜುನಾಥ ಹಿರೇಮಠ ಹಾಗೂ ಕುಟುಂಬ ಪರಿಸರ ಪ್ರೇಮಿಯಾಗಿ ಹಬ್ಬವನ್ನು ಆಚರಿಸುವ ಪದ್ಧತಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ.

ಕಳೆದ ಮೂರು ದಶಕಗಳಿಂದ ಮಂಜುನಾಥ ಹಿರೇಮಠ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ನಿರ್ಮಿಸುತ್ತಿದ್ಧಾರೆ. ಜೇಡಿಮಣ್ಣು, ಗೋಪಿ ಚಂದನ, ಅಷ್ಟಗಂಧ, ಇದ್ದಿಲು ಪುಡಿಯ ಮಿಶ್ರಣದಿಂದ ಬಗೆ ಬಗೆಯ ವಿಗ್ರಹಗಳನ್ನು ಇವರು ತಯಾರಿಸುತ್ತಿದ್ಧಾರೆ. ಇದರಿಂದಾಗಿ ವಿಸರ್ಜನೆ ಬಳಿಕ ಇವೆಲ್ಲ ನೀರಿನಲ್ಲಿ ಸುಲಭವಾಗಿ ಕರಗುತ್ತವಲ್ಲದೇ ಪರಿಸರಕ್ಕೂ ಹಾನಿ ಮಾಡಲಾರವು. ಇನ್ನು ಇತ್ತೀಚಿಗೆ ಎಲ್ಲೆಡೆ ಪ್ಲಾಸ್ಟರ್ ಆಫ್ ಪ್ಯಾರೀಸ್​ನಿಂದ ಮೂರ್ತಿಗಳನ್ನು ನಿರ್ಮಿಸಲಾಗುತ್ತದೆ. ಇದರಿಂದಾಗಿ ವಿಗ್ರಹಗಳ ತೂಕ ಕಡಿಮೆಯಾಗೋದಲ್ಲದೇ ಹೆಚ್ಚು ಆಕರ್ಷಕವಾಗಿರುತ್ತವೆ. ಹೀಗಾಗಿ ಜನರು ಇಂಥ ವಿಗ್ರಹಗಳನ್ನೇ ಖರೀದಿಸಲು ಮುಂದೆ ಬರುತ್ತಾರೆ. ಆದರೆ ಇಂಥ ವಿಗ್ರಹಗಳನ್ನು ಎಷ್ಟೇ ದಿನ ನೀರಿನಲ್ಲಿ ಇಟ್ಟರೂ ಕರಗೋದೇ ಇಲ್ಲ.

ಇದು ಜಲ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಮೂರು ದಶಕಗಳ ಹಿಂದೆಯೇ ಇದನ್ನು ಗಂಭೀರವಾಗಿ ಪರಿಗಣಿಸಿದ ಮಂಜುನಾಥ ಹಿರೇಮಠ, ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ತಯಾರಿಸಲು ನಿರ್ಧರಿಸಿದರು. ಆರಂಭದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಹಾಗಂತ ಮಂಜುನಾಥ ಸುಮ್ಮನೇ ಕೂರಲಿಲ್ಲ. ತಮ್ಮ ಕೆಲಸವನ್ನು ಮುಂದುವರೆಸೋದಲ್ಲದೇ ಜನರಲ್ಲಿ ಜಾಗೃತಿಯನ್ನು ಮೂಡಿಸೋ ಕೆಲಸವನ್ನೂ ಮಾಡಿದರು. ನಿಧಾನವಾಗಿ ಜನರಿಗೆ ಮಂಜುನಾಥ ಅವರ ಪರಿಸರ ಕಾಳಜಿ ಬಗ್ಗೆ ಅರ್ಥವಾಗತೊಡಗಿತು. ಜನರು ನಿಧಾನವಾಗಿ ಇವರ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳನ್ನು ಖರೀದಿಸಲು ಮುಂದೆ ಬರತೊಡಗಿದರು.

ಮಂಜುನಾಥ ಅವರಿಗೆ ಕುಟುಂಬದವರ ಸಾಥ್ ಮಂಜುನಾಥ ಅವರ ಈ ಕೆಲಸಕ್ಕೆ ಪತ್ನಿ ನಿರ್ಮಲಾ ಹಾಗೂ ಇಬ್ಬರು ಮಕ್ಕಳು ಕೂಡ ಸಾಥ್ ನೀಡಲು ಶುರು ಮಾಡಿದರು. ಮಂಜುನಾಥ ವಿಗ್ರಹಗಳನ್ನು ತಯಾರಿಸಿದರೆ, ಅವುಗಳಿಗೆ ಬಣ್ಣ ಕೊಡುವ ಜವಾಬ್ದಾರಿ ಪತ್ನಿ ನಿರ್ಮಲಾ ಹಾಗೂ ಮಕ್ಕಳದ್ದು. ಎಲ್ಲರೂ ಸೇರಿ ಪರಿಸರ ಸ್ನೇಹಿ ವಿಗ್ರಹಗಳಿಗೆ ಸುಂದರವಾದ ರೂಪ ನೀಡುತ್ತಾರೆ. ಇನ್ನು ಇಲ್ಲಿ ತಯಾರಾಗುವ ವಿಗ್ರಹಗಳ ವಿಶೇಷತೆ ಸಾಕಷ್ಟಿದೆ. ಇವರು ತಯಾರಿಸುವ ವಿಗ್ರಹಗಳ ಮೇಲೆ ವಸ್ತ್ರಾಲಂಕಾರಕ್ಕೆ ಬಟ್ಟೆಗಳನ್ನು ಬಳಸಲಾಗುತ್ತೆ. ಇದರಿಂದಾಗಿ ವಿಸರ್ಜನೆ ವೇಳೆಯಲ್ಲಿ ಬಟ್ಟೆಯನ್ನ ಹೊರತೆಗೆದು, ವಿಗ್ರಹವನ್ನಷ್ಟೇ ನೀರಿಗೆ ಹಾಕಿದರೆ ಸಾಕು. ಇದರಿಂದಾಗಿ ನೀರು ಕೂಡ ಸುರಕ್ಷಿತ, ಬಟ್ಟೆಗಳನ್ನು ಬಳಿಕ ಬಳಸಲೂ ಕೂಡ ಅವಕಾಶ ಸಿಗುತ್ತದೆ. ಕಳೆದ ಹಲವಾರು ವರ್ಷಗಳಿಂದ ನಿರ್ಮಲಾ ಪತಿಗೆ ಆಸರೆಯಾಗಿ ನಿಂತು, ಪರಿಸರ ಸ್ನೇಹಿ ಗಣಪನ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ganesha

ಕಲಾವಿದ ಮಂಜುನಾಥ ಹಿರೇಮಠ

ಮಣ್ಣನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಬಲು ಮುಖ್ಯ ಗಣೇಶ ಚತುರ್ಥಿಗೆ ತಯಾರಾದ ವಿಗ್ರಹಗಳನ್ನು ಜನರು ತೆಗೆದುಕೊಂಡು ಹೋಗುತ್ತಲೇ ಮುಂದಿನ ವರ್ಷದ ಗಣೇಶ ಚತುರ್ಥಿಗೆ ವಿಗ್ರಹಗಳನ್ನು ಆರ್ಡರ್ ನೀಡಿ ಹೋಗುತ್ತಾರೆ. ಬಳಿಕ ಮುಂದಿನ ವರ್ಷದ ವಿಗ್ರಹಗಳ ತಯಾರಿ ಕೆಲಸ ಶುರುವಾಗಿಯೇ ಬಿಡುತ್ತದೆ. ಮಂಜುನಾಥ ವಿವಿಧ ಕಡೆಗಳಲ್ಲಿ ತಿರುಗಾಡಿ, ಮೂರ್ತಿ ತಯಾರಿಕೆಗೆ ಬೇಕಾದ ಮಣ್ಣನ್ನು ತರುತ್ತಾರೆ. ಪರಿಸರ ಸ್ನೇಹಿ ವಿಗ್ರಹಗಳ ತಯಾರಿಕೆಯಲ್ಲಿ ಬಳಸಲ್ಪಡುವ ಮಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ತಾವೇ ನಿಂತು ಮಂಜುನಾಥ ಮಣ್ಣನ್ನು ಆಯ್ಕೆ ಮಾಡಿ, ಅಲ್ಲಿಂದ ಖರೀದಿಸಿ ತರುತ್ತಾರೆ. ಬಳಿಕ ಮಣ್ಣನ್ನು ಹದ ಮಾಡುತ್ತಲೇ ಈ ಬಾರಿ ತಾವು ನಿರ್ಮಿಸಬೇಕೆಂದಿರುವ ವಿಗ್ರಹಗಳ ಬಗ್ಗೆ ಯೋಜನೆ ಹಾಕಿಕೊಳ್ಳುತ್ತಾರೆ. ಅಲ್ಲದೇ ಅದಾಗಲೇ ಅನೇಕರು ತಮಗೆ ಬೇಕಾದ ವಿಗ್ರಹಗಳ ಮಾದರಿಗಳ ಫೋಟೋ ನೀಡಿ ಹೋಗಿರುತ್ತಾರೆ.

ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಂಜುನಾಥ ಗಣೇಶನ ತಯಾರಿಕೆಗೆ ನಿಲ್ಲುತ್ತಾರೆ. ಆರಂಭದಲ್ಲಿ ತಯಾರಿಸುತ್ತಿದ್ದ ವಿಗ್ರಹಗಳು ಬಲುಭಾರವಾಗಿರುತ್ತಿದ್ದವು. ಅವುಗಳನ್ನು ಹೊತ್ತೊಯ್ಯೋದೇ ಕಷ್ಟಕರವಾಗಿತ್ತು. ಇದನ್ನು ಗಮನಿಸಿದ ಮಂಜುನಾಥ ಅದಕ್ಕೂ ಒಂದು ಪರಿಹಾರ ಕಂಡುಕೊಂಡರು. ವಿಗ್ರಹದ ಒಳಗಡೆಯೆಲ್ಲಾ ಪೊಳ್ಳು ಮಾಡಿ, ವಿಗ್ರಹಗಳ ತೂಕವನ್ನ ಕಡಿಮೆ ಮಾಡಿದರು. ತೂಕವೇನೋ ಕಡಿಮೆಯಾಯಿತು. ಆದರೆ ಅವುಗಳಿಗೆ ಆಕರ್ಷಣೆ ಅನ್ನೋದೇ ಇಲ್ಲವಾಯಿತು. ಮಾರುಕಟ್ಟೆಯಲ್ಲಿ ಬಗೆ ಬಗೆಯ, ಬಣ್ಣ ಬಣ್ಣದ ಗಣಪತಿ ವಿಗ್ರಹಗಳು ಕಡಿಮೆ ಬೆಲೆಗೆ ಸಿಗೋವಾಗ ಇವರ ಪರಿಸರ ಪ್ರೇಮಿ ಗಣಪನನ್ನ ಕೇಳೋರಾರು? ಇದರಿಂದ ಮಂಜುನಾಥ ನಿರಾಶರಾಗಲಿಲ್ಲ. ಆಗಲೇ ಅವರಿಗೆ ಹೊಸದೊಂದು ಯೋಜನೆ ತಲೆಯಲ್ಲಿ ಮೂಡಿ ಬಂತು.

ಯಾವಾಗ ಜನರು ಗಣೇಶನ ವಿಗ್ರಹಗಳು ಬಣ್ಣ ಬಣ್ಣದ್ದಾಗಿರಬೇಕು ಅಂತಾ ಬಯಸಿದರುವ ಆಗ ಅನಿವಾರ್ಯವಾಗಿ ಜನರ ಇಷ್ಟಕ್ಕೆ ತಕ್ಕಂತೆ ಏನಾದರೂ ಬದಲಾವಣೆ ಮಾಡಲೇಬೇಕೆಂದು ಮಂಜುನಾಥ ನಿರ್ಧರಿಸಿದರು. ಆಗಲೇ ಅವರ ತಲೆಯಲ್ಲಿ ಬಂದಿದ್ದು ಪರಿಸರ ಸ್ನೇಹಿ ಬಣ್ಣಗಳು. ಇದ್ದಿಲನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಮಿಶ್ರಣ ಮಾಡಿದರೆ ಅದು ಕಪ್ಪು ಬಣ್ಣ. ಇನ್ನು ಕೆಮ್ಮಣ್ಣನ್ನು ನೀರಿನಲ್ಲಿ ಹಾಕಿದರೆ ಕೆಂಪು ಬಣ್ಣ. ಇನ್ನು ಬಿಳಿ ಬಣ್ಣಕ್ಕೆ ಸುಣ್ಣ, ಹಳದಿ ಬಣ್ಣಕ್ಕೆ ಗೋಪಿ ಚಂದನ ಇಲ್ಲವೇ ಅಷ್ಟಗಂಧ. ಹೀಗೆ ಪರಿಸರದಲ್ಲಿಯೇ ಸಿಗುವ ವಸ್ತುಗಳಿಂದ ಬಣ್ಣ ತಯಾರಿಸಿ, ವಿಗ್ರಹಗಳಿಗೆ ಒಂದು ರೂಪ ನೀಡುವ ಮಂಜುನಾಥ, ಅವುಗಳಿಂದಲೇ ವಿಗ್ರಹಗಳಿಗೆ ಆಕರ್ಷಕ ರೂಪ ಕೊಡಬಹುದು ಎನ್ನುವುದನ್ನು ನಿರೂಪಿಸಿದರು. ವಿಗ್ರಹ ತಯಾರಾಗಿ ಒಣಗಿದ ಬಳಿಕ ಅಲಂಕಾರದ ಕೆಲಸ ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಅಲಂಕಾರಿಕ ವಸ್ತುಗಳಿಂದ, ಅದರಲ್ಲೂ ಪರಿಸರದಲ್ಲಿ ಸಿಗುವ ವಸ್ತುಗಳಿಂದ ಮಾಡಿರುವ ಅಲಂಕಾರಿಕ ಆಭರಣಗಳಿಂದ ವಿಗ್ರಹಗಳನ್ನು ಅಲಂಕರಿಸಲಾಗುತ್ತದೆ.

ಬಟ್ಟೆಗಳಿಂದ ಅಲಂಕೃತ ಗಣೇಶ ಇವರು ತಯಾರಿಸುವ ವಿಗ್ರಹಗಳಲ್ಲಿ ಮತ್ತೊಂದು ವಿಶೇಷವಿದೆ. ವಿಗ್ರಹಗಳಿಗೆ ಆದಷ್ಟು ಕಡಿಮೆ ಪ್ರಮಾಣದ ಬಣ್ಣಗಳನ್ನು ಬಳಸಿ, ಎಲ್ಲಿ ಅವಶ್ಯಕವಿಲ್ಲವೋ ಅಲ್ಲೆಲ್ಲಾ ಬಟ್ಟೆಗಳನ್ನು ಬಳಸಿ, ಅಲಂಕರಿಸಲಾಗುತ್ತದೆ. ಗಣೇಶ ವಿಸರ್ಜನಾ ವೇಳೆಯಲ್ಲಿ ಬಟ್ಟೆಗಳನ್ನು ತೆಗೆದರೆ ಮುಗಿಯಿತು. ಒಂದು ಕಡೆ ಗಣೇಶನ ಮೈಮೇಲಿನ ಬಟ್ಟೆಯನ್ನು ತಾವು ಬಳಸುವುದರಿಂದ ಜನರಿಗೆ ಸಂತಸ, ಇನ್ನೊಂದೆಡೆ ಪರಿಸರ ಮಾಲಿನ್ಯವೂ ಆಗೋದಿಲ್ಲ ಅನ್ನೋದೇ ಇಲ್ಲಿನ ವಿಶೇಷ. ಇಂಥ ಅನೇಕ ಕಾರಣಗಳಿಂದಾಗಿ ಇಲ್ಲಿ ತಯಾರಾಗೋ ವಿಗ್ರಹಗಳಿಗೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಭಾರೀ ಬೇಡಿಕೆಯಿದೆ. ಒಂದು ವರ್ಷ ಮುಂಚೆಯೇ ತಮ್ಮ ವಿಗ್ರಹದ ಬಗ್ಗೆ ಮಾಹಿತಿ ನೀಡುವ ಜನರು. ಗಣೇಶ ಚತುರ್ಥಿ ಇನ್ನೆರಡು ದಿನಗಳಿರುವಂತೆಯೇ ವಿಗ್ರಹಗಳನ್ನು ತಮ್ಮೂರಿಗೆ ತೆಗೆದುಕೊಂಡು ಹೋಗುತ್ತಾರೆ. ಇಂಥ ಅನೇಕ ವಿಗ್ರಹಗಳೊಂದಿಗೆ ಮತ್ತೆ ಕೆಲ ವಿಗ್ರಹಗಳು ನೋಡುಗರ ಗಮನ ಸೆಳೆಯುತ್ತವೆ.

ಜನರಿಗೆ ಪರಿಸರದ ಪಾಠವೂ ಸಿಗುತ್ತದೆ ಇಲ್ಲಿನ ಗಣೇಶ ವಿಗ್ರಹಗಳನ್ನು ನೋಡಲು ಅನೇಕರು ಬರುತ್ತಾರೆ. ಗಣೇಶ ವಿಗ್ರಹ ತಯಾರಿಸುವ ವೇಳೆಯೇ ಇಲ್ಲಿಗೆ ಬರುವ ಜನರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಬಗ್ಗೆಯೂ ನೀತಿ ಪಾಠ ಹೇಳಿಕೊಡಲಾಗುತ್ತದೆ. ಪರಿಸರವನ್ನು ಉಳಿಸಿ, ಬೆಳೆಸುವ ಬಗ್ಗೆ ತಜ್ಞರ ಹೇಳಿಕೆಗಳನ್ನು ಪ್ರತಿಯೊಂದು ಗಣಪತಿ ವಿಗ್ರಹದ ಪಕ್ಕ ತೂಗುಹಾಕಲಾಗಿರುತ್ತದೆ. ಆ ಮೂಲಕ ಮಂಜುನಾಥ ಪರಿಸರದ ಬಗ್ಗೆ ಜನರಲ್ಲಿ ಕಾಳಜಿ ಹುಟ್ಟುವಂತೆ ಮಾಡಿದ್ದಾರೆ. ಇನ್ನು ಇಲ್ಲಿ ನಿರ್ಮಾಣವಾಗುವ ವಿಗ್ರಹಗಳನ್ನೊಮ್ಮೆ ಗಮನಿಸಿದರೆ ಮಂಜುನಾಥ ಅವರಿಗೆ ಇರುವ ಕಾಳಜಿ ಬಗ್ಗೆ ಗೊತ್ತಾಗಿ ಹೋಗುತ್ತದೆ.

ಅರಣ್ಯ ಸಂರಕ್ಷಣೆ, ಐತಿಹಾಸಿಕ ರಕ್ಷಣೆ ಬಗ್ಗೆ ತಿಳಿ ಹೇಳುವ ವಿಗ್ರಹಗಳು ಒಂದೆಡೆಯಾದರೆ, ಶಿವರೂಪಿ, ಸಾಯಿಬಾಬಾ ರೂಪಿ, ಸಿದ್ಧಾರೂಢ, ಬಸವಣ್ಣ ರೂಪಿ ಗಣಪತಿ ವಿಗ್ರಹಗಳು ಇನ್ನೊಂದೆಡೆ. ತೀರಾನೇ ಸಹಜವಾಗಿ, ಸರಳವಾಗಿ ವಿಗ್ರಹಗಳನ್ನು ನಿರ್ಮಿಸುವ ಮಂಜುನಾಥ ಪರಿಸರವೇ ದೇವರು ಅಂತಾ ನಂಬಿದ್ದಾರೆ. ಪರಿಸರಕ್ಕೆ ಪೂರಕವಾದದ್ದನ್ನೇ ಪೂಜಿಸೋಣ ಎಂದು ನಂಬಿದ್ದಾರೆ. ಇಂಥವರ ನಂಬಿಕೆಗೆ ಹಾಗೂ ಹಬ್ಬಗಳಿಗೆ ಅರ್ಥ ಬರಬೇಕೆಂದರೆ, ಪರಸರ ಸ್ನೇಹಿ ಗಣಪತಿಗಳನ್ನು ಬಳಸಬೇಕು.

ಕೊವಿಡ್ ನಿಂದಾದ ಸಮಸ್ಯೆ ಬಹಳ ಕಳೆದ ವರ್ಷ ಎಲ್ಲ ವಿಗ್ರಹಗಳನ್ನು ತಯಾರಿಸಿ ಇಡಲಾಗಿತ್ತು. ಆದರೆ ಕೊವಿಡ್​ನಿಂದಾಗಿ ಸರಕಾರ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿತು. ಹೀಗಾಗಿ ಎಲ್ಲ ವಿಗ್ರಹಗಳು ಹಾಗೆಯೇ ಕುಳಿತು ಬಿಟ್ಟವು. ಕೊನೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಂಜುನಾಥ ಜನರಿಗೆ ಮನವಿ ಮಾಡಿಕೊಂಡರು. ಈ ವೇಳೆ ವಿದೇಶದಲ್ಲಿರುವ ಕನ್ನಡಿಗರು ಇವರ ಸಹಾಯಕ್ಕೆ ಬಂದು, ಅವರು ವಿಗ್ರಹಗಳನ್ನು ಖರೀದಿಸಿದರು. ನಿತ್ಯವೂ ಇಲ್ಲಿಯೇ ಮಂಜುನಾಥ ಅವುಗಳಿಗೆ ಪೂಜೆ ನೆರವೇರಿಸಿ, ಐದನೇ ದಿನಕ್ಕೆ ವಿಸರ್ಜನೆ ಮಾಡಿದರು. ಅವುಗಳ ದೃಶ್ಯಗಳನ್ನು ಖರೀದಿಸಿದವರಿಗೆ ಕಳಿಸಿದರು. ಇದರಿಂದಾಗಿ ಕೊರೊನಾ ಹಾವಳಿಯಿಂದಾಗಿ ಸ್ವದೇಶಕ್ಕೆ ಬರಲಾಗದೇ, ಹಬ್ಬದಲ್ಲಿ ಪಾಲ್ಗೊಳ್ಳಲಾಗದೇ ಇದ್ದವರಿಗೆ ಸಂತೋಷವಾಯಿತು.

ಸರಕಾರ ಯಾವುದೇ ನಿಯಮಗಳನ್ನು ರೂಪಿಸುವಾಗ ಎಲ್ಲದರ ಬಗ್ಗೆ ಕಾಳಜಿ ವಹಿಸಬೇಕು. ಅಲ್ಲದೇ ನಿಯಮಗಳನ್ನು ಆದಷ್ಟು ಬೇಗನೇ ರೂಪಿಸಿದರೆ, ಜನರಿಗೆ ಮುಂದೆ ತೆಗೆದುಕೊಳ್ಳಬಹುದಾದ ನಿರ್ಧಾರಕ್ಕೆ ಅನುಕೂಲವಾಗುತ್ತದೆ ಎಂದು  ಮಂಜುನಾಥ ಹಿರೇಮಠ  ತಿಳಿಸಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ:

ಬೆಳಗಾವಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಮೊಹಮ್ಮದ್ ಜಮಾದಾರ್ ತಯಾರಿಸುವ ಗಣಪತಿ

ಯಾದಗಿರಿ: ಆರ್ಥಿಕ ಸಂಕಷ್ಟದಲ್ಲಿರುವ ಶಿಕ್ಷಕರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿ

Published On - 3:00 pm, Sun, 5 September 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ