ಬೆಳಗಾವಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಮೊಹಮ್ಮದ್ ಜಮಾದಾರ್ ತಯಾರಿಸುವ ಗಣಪತಿ

Ganesh Chaturthi 2021: ಈ ಮೂರ್ತಿಗಳನ್ನ ಖ್ಯಾತ ಕಲಾವಿದರು ಸಿದ್ದಪಡಿಸಿದ್ದು ಅಲ್ಲ, ಇದ್ಯಾವುದೋ ಕುಂಬಾರರು ಮಾಡೋ ಮೂರ್ತಿಗಳೂ ಅಲ್ಲ. ಬದಲಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಈ ಮೂರ್ತಿಗಳನ್ನು ಮಾಡುತ್ತಿದೆ.

ಬೆಳಗಾವಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಮೊಹಮ್ಮದ್ ಜಮಾದಾರ್ ತಯಾರಿಸುವ ಗಣಪತಿ
ಮೊಹಮ್ಮದ್ ಜಮಾದಾರ್ ಗಣಪತಿ ತಯಾರಿಯಲ್ಲಿ ನಿರತರಾಗಿ ಇರುವುದು
Follow us
TV9 Web
| Updated By: Praveen Sahu

Updated on:Sep 07, 2021 | 8:56 PM

ಬೆಳಗಾವಿ: ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಠಿ ಮಾಡಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಕೆಲ ನಾಯಕರು, ಸಂಘಟನೆಗಳ ನಡುವೆ ಸದ್ದಿಲ್ಲದೆ ಭಾವೈಕ್ಯತೆ ಸಾರುವ ಜನರು ನಮ್ಮಲ್ಲಿ ಇಂದಿಗೂ ಇದ್ದಾರೆ. ವೃತ್ತಿಯಲ್ಲಿ ಶಾಲೆಯ ಹೆಡ್ ಮಾಸ್ಟರ್ ಆದ್ರೂ ಸಹ ಪೃವೃತ್ತಿಯಿಂದ ಕುಂಬಾರರು ಮಾಡೋ ಕೆಲಸ ಮಾಡುತ್ತಾ ಭಾವೈಕ್ಯತೆ ಸಂದೇಶ ಸಾರುತ್ತಾ ಇಡೀ ಊರಿಗೆ ಮಾದರಿಯಾಗಿದ್ದಾರೆ. ಅಷ್ಟಕ್ಕೂ ಇವರು ಸಾರುತ್ತಿರುವ ಭಾವೈಕ್ಯತೆ ಎಂತಹದ್ದು, ಇವರು ಮಾಡಿರುವ ಒಳ್ಳೆಯ ಕೆಲಸ ಏನು ಇಲ್ಲಿದೆ ವಿವರ.

ಬಣ್ಣ ಬಳಿದುಕೊಂಡು ಮುದ್ದು ಮುದ್ದಾಗಿ ಝಗಮಗಿಸುತ್ತಿರುವ ಕಲರ್ಪುಲ್ ಗಣಪತಿ ಮೂರ್ತಿಗಳು, ವಿಘ್ನೇಶನಿಗೆ ಪೈನಲ್ ಟಚ್ ನೀಡ್ತಿರೋ ಟೋಪಿದಾರಿ ವ್ಯಕ್ತಿ. ಈ ಮೂರ್ತಿಗಳನ್ನ ಖ್ಯಾತ ಕಲಾವಿದರು ಸಿದ್ದಪಡಿಸಿದ್ದು ಅಲ್ಲ, ಇದ್ಯಾವುದೋ ಕುಂಬಾರರು ಮಾಡೋ ಮೂರ್ತಿಗಳೂ ಅಲ್ಲ. ಬದಲಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಈ ಮೂರ್ತಿಗಳನ್ನು ಮಾಡುತ್ತಿದೆ.

ಹೌದು. ಹೀಗೆ ಮೂರ್ತಿಗಳನ್ನ ತಯಾರು ಮಾಡ್ತಿರುವ ಇವರ ಹೆಸರು ಮೊಹಮ್ಮದ್ ಜಮಾದಾರ್ ಅಂತ. ಈ ಮೊಹಮ್ಮದ್ ಜಮಾದಾರ್ ವೃತ್ತಿಯಲ್ಲಿ ಪ್ರಾಥಮಿಕ ಶಾಲೆ ಹೆಡ್ ಮಾಸ್ಟರ್ ಆಗಿದ್ದು ಗಣೇಶ ಚತುರ್ಥಿ ಬಂದಾಗ ಅಣ್ಣ ಅಲಾಭಕ್ಷ ಜತೆಗೂಡಿ ಗಣಪತಿ ವಿಗ್ರಹಗಳನ್ನ ತಯಾರು ಮಾಡ್ತಾರೆ. ಈ ರೀತಿ ಕಳೆದ 57 ವರ್ಷಗಳಿಂದ ಜಮಾದಾರ್ ಕುಟುಂಬ ಗಣೇಶ ಮೂರ್ತಿಗಳನ್ನು ತಯಾರು ಮಾಡಿಕೊಂಡು ಬರ್ತಿದ್ದಾರೆ. ಇವರ ಅಜ್ಜನ ಕಾಲದಿಂದ ಶುರುವಾದ ಗಣೇಶ ಮೂರ್ತಿ ತಯಾರಿಕೆ ಇಂದಿಗೂ ಸಹ ಮುಂದುವರಿದೆ. ಯಾರು ಏನೇ ಹೇಳಿದ್ರೂ ಜಾತಿ ಮತದ ಬಗ್ಗೆ ಮತಾಡಿದ್ರೂ ಅದನ್ನ ತಲೆಯಲ್ಲಿ ಹಾಕಿಕೊಳ್ಳದೇ ಇಡೀ ಕುಟುಂಬ ಗಣಪತಿಯನ್ನ ತಯಾರಿಸಿಕೊಂಡು ಬರ್ತಿದೆ. ಇವರು ತಯಾರು ಮಾಡುವ ಗಣಪತಿಗೆ ಬಲು ಡಿಮ್ಯಾಂಡ್ ಇದ್ದು ಅಕ್ಕಪಕ್ಕದ ಗ್ರಾಮಸ್ಥರು ಕೂಡ ಇಲ್ಲಿಯೇ ಬಂದು ಗಣಪತಿಯನ್ನ ಖರೀದಿಸಿಕೊಂಡು ಹೋಗುತ್ತಾರೆ.

Ganesh Chaturthi Ganapathi

ಮೊಹಮ್ಮದ್ ಜಮಾದಾರ್ ತಯಾರಿಸಿರುವ ಗಣಪತಿ ಮೂರ್ತಿಗಳು

ಗಣೇಶ ಚತುರ್ಥಿಗೂ ಎರಡು ತಿಂಗಳು ಮುಂಚೆಯೇ ಜಮಾದಾರ್ ಕುಟುಂಬಸ್ಥರು ಗಣಪತಿ ಮೂರ್ತಿ ತಯಾರಿಸುವ ಕೆಲಸ ಶುರು ಮಾಡುತ್ತಾರೆ. ಒಬ್ಬರು ಮಣ್ಣು ಹದ ಮಾಡಿದರೆ, ಇನ್ನೊಬ್ಬರು ಮೂರ್ತಿಗೆ ಬೇಕಾದ ಸೊಂಡಿಲು, ಕೈ, ಹಾಗೂ ಕೀರೀಟ ತಯಾರು ಮಾಡ್ತಾರೆ. ಮನೆಯ ಹೆಣ್ಣು ಮಕ್ಕಳೂ ಸಹ ಈ ಗಣೇಶ ಮೂರ್ತಿ ತಯಾರು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬರೂ ಸಹ ಒಂದೊಂದು ಕೆಲಸ ಅಂತ ಹಂಚಿಕೊಂಡು ಗಣೇಶ ಚತುರ್ಥಿಗೆ ಜನರಿಗೆ ಬೇಕಾದ ರೀತಿಯಲ್ಲಿ ವಿವಿಧ ಅಳತೆ, ಗಾತ್ರದ ಸುಂದರ ಮೂರ್ತಿಗಳನ್ನು ತಯಾರು ಮಾಡುತ್ತಾರೆ.

ಹೀಗೆ ಪ್ರತಿ ಬಾರಿ ಗಣಪತಿ ಹಬ್ಬಕ್ಕೆ ಮಹಾರಾಷ್ಟ್ರದ ಕೊಲ್ಹಾಪುರ ಹಾಗೂ ಗಡಹಿಂಗ್ಲಜ್ ಭಾಗದಲ್ಲಿ ಹೇರಳವಾಗಿ ದೊರೆಯುವ ಕೆಂಪು ಮಣ್ಣನ್ನು ತೆಗೆದುಕೊಂಡು ಬಂದು ಅವರೇ ಮನೆಯಲ್ಲಿ 250 ರಿಂದ 300 ಗಣಪತಿಗಳನ್ನು ತಯಾರು ಮಾಡ್ತಾರೆ. ಇನ್ನೂ ಒಂದು ವಿಶೇಷ ಅಂದರೆ, ಇವರು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಗಣಪನನ್ನ ತಯಾರಿಸಿ ಪರಿಸರಕ್ಕೂ ಹಾನಿಯಾಗದಂತೆ ನೋಡಿಕೊಳ್ತಿದ್ದಾರೆ. ಈ ಗ್ರಾಮದಲ್ಲಿ ಕುಂಬಾರರಿದ್ದರೂ ಸಹ ಯಾವುದೇ ಕುಂಬಾರರು ಗಣೇಶ ಮೂರ್ತಿಗಳನ್ನು ತಯಾರಿಸೊಲ್ಲ. ಜಮಾದಾರ್ ಕುಟುಂಬಸ್ಥರೇ ಗ್ರಾಮದಲ್ಲಿ ಮೂರ್ತಿ ತಯಾರು ಮಾಡುತ್ತಿದ್ದು ಜನರೂ ಸಹ ಅವರ ಬಳಿಯೇ ಬಂದು ಮೂರ್ತಿ ಪಡೆಯುತ್ತಾರೆ.

Mohammed Jamadar Belagavi

ಮೂರ್ತಿ ತಯಾರಿಕೆಯಲ್ಲಿ ನಿರತರಾಗಿರುವ ಮೊಹಮ್ಮದ್ ಜಮಾದಾರ್

ಒಟ್ಟಿನಲ್ಲಿ ಜಮಾದಾರ್ ಕುಟುಂಬ ಮುಸ್ಲಿಂ ಆಗಿದ್ದರೂ ಅರ್ಥಿಕವಾಗಿ ಸದೃಢವಾಗಿದ್ರೂ ಸಹ ಪ್ರತಿವರ್ಷ ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರೋ ಮೂರ್ತಿ ತಯಾರು ಮಾಡೊ ಕೆಲಸ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಭಾವೈಕ್ಯತೆಯ ಸಂದೇಶವನ್ನ ಈ ಕುಟುಂಬ ಸಾರುತ್ತಿದೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬ ಕನಕದಾಸರ ವಾಣಿಯಂತೆ ಈ ಕುಟುಂಬ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದಂತಿರುವುದು ಹೆಮ್ಮೆಯ ವಿಚಾರ.

ವಿಶೇಷ ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ

ಇದನ್ನೂ ಓದಿ: ವಿನಾಯಕ ಚತುರ್ಥಿಗೆ ಈ ಬಾರಿ ಮುಹೂರ್ತ ಯಾವುದು, ಗಣೇಶನನ್ನು ಕೂಡಿಸುವುದು ಹೇಗೆ, ಪೂಜಾ ವಿಧಾನ ಹೇಗೆ?

ಇದನ್ನೂ ಓದಿ: Lord Ganesha: ಪ್ರಥಮ ಪೂಜಿತ ಗಣೇಶನ ದೇಹದ ಅಂಗಾಂಗಗಳ ಮಹತ್ವ ನಿಮಗೆ ಗೊತ್ತೇ?

Published On - 8:59 am, Sun, 5 September 21