ಬೆಳಗಾವಿ: ಹಿರೇಕೋಡಿ ಜೈನಮುನಿ (Jain Muni) ಕಾಮಕುಮಾರ ನಂದಿ ಮಹಾರಾಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆ, ಕಾಂಗ್ರೆಸ್ (Cogress) ಸರ್ಕಾರ ಬಂದ ಬಳಿಕವೂ ಮುಂದುವರೆದಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ (BJP) ವಿರುದ್ಧ ಎಸ್‌ಡಿಪಿಐ (SDPI) ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ವಾಗ್ದಾಳಿ ಮಾಡಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಘಟನೆ ನಡೆದ ಆರು ಗಂಟೆಯಲ್ಲಿ ಆರೋಪಿ ಅರೆಸ್ಟ್ ಮಾಡಿದ ಪೊಲೀಸರಿಗೆ ಅಭಿನಂದಿಸುತ್ತೇವೆ. ರಾಜ್ಯದ ಯಾವುದೇ ಮೂಲೆಯಲ್ಲಿ ಯಾವುದೇ ಕಾರಣಕ್ಕೂ ಕೊಲೆ ಆದರೂ, ಅಲ್ಲಿ ಬೆಂಕಿ ಹಚ್ಚಲು ನಳೀನ್ ಕುಮಾರ್ ಕಟೀಲು ಟೀಮ್ ಭೇಟಿ ನೀಡುತ್ತೆ. ನಾರಾಯಣ ಮಾಳಿ ಬದಲಿಗೆ ಮುಸ್ಲಿಂ, ಕ್ರಿಶ್ಚಿಯನ್ ಇದ್ದಿದ್ದರೇ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ನಿರಾಶ್ರಿತ ಸಿಟಿ ರವಿ ಮೈಸೂರಿನಲ್ಲಿ ನಡೆದ ಕೊಲೆ ಜಾಗಕ್ಕೆ ಭೇಟಿ ನೀಡುತ್ತಾರೆ. ಬಿಜೆಪಿಯವರು ಕೊಲೆಯಲ್ಲಿ ಭಾಗಿಯಾಗಿದ್ದನ್ನು ಕೇಳಿ ಕಾಲ್ಕಿಳುತ್ತಾರೆ. ಕೋಮು ವಿಷ ಬೀಜ ಬಿತ್ತುವ ಕೋಮು ಕ್ರಿಮಿಗಳನ್ನು ಹದ್ದುಬಸ್ತಿನಲ್ಲಿಡಬೇಕು. ಈ ನಿಟ್ಟಿನಲ್ಲಿ ರಾಜ್ಯದ ಗೃಹ ಇಲಾಖೆ ಹೊಸ ಕಾನೂನು ಜಾರಿಗೆ ತರಬೇಕು. ಈಗಾಗಲೇ ಪತ್ರವನ್ನ ಸರ್ಕಾರಕ್ಕೆ ಬರೆದು ಮನವಿ ಮಾಡಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ; ಆರೋಪಿಗಳನ್ನು ಜುಲೈ 17ರ ವರೆಗೆ ಪೊಲೀಸ್ ವಶಕ್ಕೊಪ್ಪಿಸಿದ ನ್ಯಾಯಾಲಯ
ವಿರೋಧ ಪಕ್ಷದ ನಾಯಕರಿಲ್ಲದೇ ಅಧಿವೇಶನ ನಡೆಯುತ್ತಿರುವುದು ದುರಂತ. ಬಿಜೆಪಿ ನಾಯಕರಿಗೆ ತಮ್ಮ ನಾಯಕರನ್ನ ಆಯ್ಕೆ ಮಾಡುವ ಕೆಪ್ಯಾಸಿಟಿ ಇಲ್ಲ. ಕಾಂಗ್ರೆಸ್ನವರು ಮುಸ್ಲಿಂ ಮೀಸಲಾತಿ ಮರುಸ್ಥಾಪಿಸುತ್ತೇವೆ ಅಂತ ಹೇಳಿದರೂ ಆಗಿಲ್ಲ. ಭಜರಂಗದಳ ಬ್ಯಾನ್ ಮಾಡುತ್ತೇನಿ ಅಂದಿದ್ದರೂ ಅದು ಆಗಿಲ್ಲ ಎಂದು ವಾಗ್ದಾಳಿ ಮಾಡಿದರು.
ಯಾವುದೇ ಕೊಲೆಗಳನ್ನ ಒಂದು ಕೋಮು, ಜಾತಿಗೆ ಸಮೀಕರಿಸುವುದು ದೂರವಿಡಿ. ಕೊಲೆಗಡುಕರಿಗೆ ಯಾವುದೇ ಜಾತಿ ಧರ್ಮ ಇರುವುದಿಲ್ಲ. ಈ ಕೊಲೆಯನ್ನ ಎಸ್‌ಡಿಪಿಐ ಸಂಘಟನೆ ಖಂಡನೆ ಮಾಡುತ್ತೇವೆ. ಹಸನ್ ದಲಾಯತ್ ಕೊಲೆ ಮಾಡಿದ್ದರೇ ಅವನಿಗೂ ಕಠಿಣ ಶಿಕ್ಷೆ ಕೊಡಿ. ಜೈನ ಮುನಿ ಹತ್ಯೆಗೆ ಐಸಿಸಿ ಲಿಂಕ್ ಇದೆ ಅನ್ನೋದು ಊಹಾಪೋಹ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ