- Kannada News Photo gallery Belagavi Mangai Devi's Jatreli Check out what is typical of the festival by flying chicks
ಮಂಗಾಯಿ ದೇವಿಯ ಜಾತ್ರೆಲಿ ಕೋಳಿ ಮರಿಗಳನ್ನ ಹಾರಿಸಿ ವಿಶಿಷ್ಟ ಆಚರಣೆ; ಏನಿದು ಅಂತೀರಾ? ಇಲ್ಲಿದೆ ನೋಡಿ
ಜಾತ್ರೆಯಲ್ಲಿ ತೇರು ಎಳೆಯುವುದು, ಕೆಂಡ ಹಾಯೋದು, ಭಂಡಾರ ಎರಚುವುದು ಸಾಮಾನ್ಯವಾಗಿ ನೋಡಿರುತ್ತಿರಾ. ಆದ್ರೆ, ಮಳೆಗಾಲದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆಯುವ ಈ ದೇವಿ ಜಾತ್ರೆಗೆ ಕೋಳಿ ಮರಿಗಳನ್ನ ಹಾರಿಸಿ ಜಾತ್ರೆ ಮಾಡುವುದು ವಿಶೇಷ. ಅಷ್ಟಕ್ಕೂ ಕೋಳಿ ಮರಿಗಳನ್ನ ದೇವಿಗೆ ಹಾರಿಸೋದ್ಯಾಕೆ ಅಂತೀರಾ? ಈ ಸ್ಟೋರಿ ನೋಡಿ.
Updated on:Jul 15, 2023 | 2:46 PM

ಅದ್ದೂರಿಯಾಗಿ ನಡೆಯುತ್ತಿರುವ ಜಾತ್ರೆ, ಸಾವಿರಾರು ಭಕ್ತರ ನಡುವೆ ದೇವಿಗೆ ವಿಶೇಷ ಪೂಜೆ, ಎಲ್ಲರ ಕೈಯಲ್ಲಿ ಪುಟ್ಟ ಪುಟ್ಟ ಕೋಳಿ ಮರಿಗಳ, ಅದನ್ನ ದೇವರ ಮೇಲೆ ಹಾರಿಸಿ ಹರಕೆ ತೀರಿಸುತ್ತಿರುವ ಭಕ್ತರು ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ನಗರದ ವಡಗಾವಿಯಲ್ಲಿ.

ಈ ಕಾಲೋನಿಯಲ್ಲಿರುವ ಮಂಗಾಯಿ ದೇವಸ್ಥಾನದ ಅದ್ದೂರಿ ಜಾತ್ರೆ ಆರಂಭವಾಗಿದ್ದು, 5 ದಿನಗಳ ಕಾಲ ನಡೆಯುವ ಜಾತ್ರೆ ವಿಭಿನ್ನ ಹಾಗೂ ರೈತರಿಗೆ ವಿಶೇಷವಾಗಿದೆ. ಹೌದು ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಈ ದೇವಿಯ ಜಾತ್ರೆ ಆಚರಿಸಿಕೊಂಡು ಬರುತ್ತಿದ್ದು ರೈತರು ಉತ್ತಮ ಮಳೆಯಾಗಿ ಒಳ್ಳೆಯ ಫಸಲು ಬರಲೆಂದು ದೇವಿಗೆ ಪೂಜೆ ಪುನಸ್ಕಾರ ಮಾಡುತ್ತಾರೆ.

ಇತ್ತ ಸಾವಿರಾರು ಭಕ್ತರು ದೇವಿಗೆ ಕೋಳಿ ಮರಿಗಳನ್ನ ಹಾರಿಸಿ ತಮ್ಮ ಹರಕೆ ತೀರಿಸುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳನ್ನ ದೂರ ಮಾಡುವಂತೆ, ಇಷ್ಟಾರ್ಥ ಸಿದ್ದಿಯಾದ ಬಳಿಕ ದೇವಿಗೆ ಪುಟ್ಟ ಪುಟ್ಟ ಕೋಳಿ ಮರಿಗಳನ್ನ ಹಾರಿಸಿ ಬೇಡಿಕೊಂಡು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಐದು ದಿನಗಳ ಕಾಲ ನಡೆಯುವ ಈ ದೇವಿ ಜಾತ್ರೆಗೆ ಬೆಳಗಾವಿ ಸುತ್ತಮುತ್ತಲಿನ ರೈತರು ಕುಟುಂಬ ಸಮೇತ ಬಂದು ದೇವಿಯ ದೇವಸ್ಥಾನದ ಮೇಲೆ ಕೋಳಿ ಮರಿ ಹಾಗೂ ಹುಂಜಗಳನ್ನ ಹಾರಿಸುತ್ತಾರೆ. ಹೀಗೆ ಹಾರಿಸಿದ ಮರಿಗಳನ್ನ ಜಾತ್ರೆಗೆ ಬಂದ ಕೆಲವರು ತೆಗೆದುಕೊಂಡು ಹೋಗಿ ಸಾಕುತ್ತಾರೆ.

ಈ ಜಾತ್ರೆಗೆ ದೂರದ ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಮಳೆಗಾಲದ ಸಂದರ್ಭದಲ್ಲೇ ನಡೆಯುವ ಈ ಜಾತ್ರೆ. ಈ ಬಾರಿ ಮಳೆ ಕೈಕೊಟ್ಟಿದ್ದು, ಮತ್ತಷ್ಟು ಭಕ್ತರಲ್ಲಿ ಆತಂಕ ಮೂಡಿಸಿದ್ದು ದೇವಿಗೆ ಮಳೆ ತರಿಸುವಂತೆ ಕೇಳಿಕೊಂಡಿದ್ದಾರೆ.

ಇತ್ತ ಜಾತ್ರೆಗೆಂದೇ ಸಾವಿರಾರು ಕೋಳಿ ಮರಿಗಳನ್ನ ಸಾಕಿ ತಂದು ಮಾರಾಟ ಮಾಡಿ ವ್ಯಾಪಾರಸ್ಥರು ವಹಿವಾಟು ಮಾಡಿದ್ರೇ, ಬಂದ ಭಕ್ತರು ಅದ್ದೂರಿಯಾಗಿ ಜಾತ್ರೆ ಮಾಡಿ ವಾಪಾಸ್ ಆಗ್ತಾರೆ.

ಪ್ರತಿವರ್ಷ ಮಳೆಗಾಲದಲ್ಲಿ ನಡೆಯುವ ಮಂಗಾಯಿ ದೇವಿಯ ಜಾತ್ರೆಗೆ ಕೋಳಿ ಮರಿಗಳನ್ನ ಹಾರಿಸಿ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಈ ಬಾರಿ ಸರಿಯಾಗಿ ಮಳೆ ಆಗದಿದ್ದಕ್ಕೆ ರೈತರು ಕಂಗಾಲಾಗಿದ್ದು ದೇವಿಯ ಬಳಿ ಮಳೆ ತರಿಸಿ ತಮ್ಮ ಬದುಕು ಹಸನಾವುವಂತೆ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ದೂರದ ಊರುಗಳಿಂದ ಆಗಮಿಸುವ ಸಾವಿರಾರು ಭಕ್ತರು ಜಾತ್ರೆಯಲ್ಲಿ ಮಿಂದೆದ್ದು ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.
Published On - 2:45 pm, Sat, 15 July 23



















