ಬೆಳಗಾವಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಕೇಂದ್ರ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ನಿಲ್ದಾಣದಲ್ಲಿ ಅಧಿಕಾರಿಗಳ ಜೊತೆ ರೌಂಡ್ಸ್ ಹೊಡೆದ ಸಾರಿಗೆ ಸಚಿವರು, ಮಹಿಳಾ ಪ್ರಯಾಣಿಕರ ಜೊತೆ ಮಾತುಕತೆ ನಡೆಸಿ ಶಕ್ತಿ ಯೋಜನೆ (Shakti Scheme) ಲಾಭದ ಬಗ್ಗೆ ವಿಚಾರಿಸಿದರು. ಈ ವೇಳೆ ಮಹಿಳಾ ಮಣಿಗಳು ಸಂತಸ ಹಂಚಿಕೊಂಡರು.
ಅಧಿಕಾರಿಗಳ ಜೊತೆ ಮಹಿಳಾ ಪ್ರಯಾಣಿಕರನ್ನು ಭೇಟಿಯಾದ ಸಚಿವರು, ಏನಮ್ಮಾ ಖುಷಿಯಾಗಿದೀರಾ ಎಂದು ಕೇಳಿದ್ದಾರೆ. ಇದಕ್ಕೆ ಮಹಿಳೆಯರು ಚೆನ್ನಾಗಿದೀವಿ ಸರ್ ಎಂದು ಹೇಳಿದ್ದಾರೆ. ಇದೇ ವೇಳೆ ಶಕ್ತಿ ಯೋಜನೆ ಬಗ್ಗೆ ಮಾಹಿತಿ ಪಡೆಯಲು ಮುಂದಾದ ಸಚಿವರು, ಶಕ್ತಿ ಯೋಜನೆಯಿಂದ ಲಾಭವಾಗಿದೆಯೇ ಎಂದು ಕೇಳಿದ್ದಾರೆ. ಈ ಯೋಜನೆಯಿಂದ ಲಾಭವಾಗಿದೆ ಎಂದು ಮಹಿಳಾ ಪ್ರಯಾಣಿಕರು ಸಂತಸ ಹಂಚಿಕೊಂದರು.
ಬಳಿಕ ಸಾರಿಗೆ ಕಂಡಕ್ಟರ್ ಹಾಗೂ ಡ್ರೈವರ್ಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ದಿನನಿತ್ಯದ ಮಾಹಿತಿ ಪಡೆದರು. ನಂತರ ಬಸ್ ನಿಲ್ದಾಣದಲ್ಲಿರುವ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಮಾಹಿತಿ ಪಡೆದರು. ಸಾರಿಗೆ ಸಚಿವರ ಜೊತೆ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್, ಎನ್‌ಡಬ್ಲ್ಯೂಕೆಆರ್‌ಟಿಸಿ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ್ ರಾಠೋಡ್ ಸೇರಿ ಹಲವರು ಇದ್ದರು.
ಇದನ್ನೂ ಓದಿ: ಸಾರಿಗೆ ಇಲಾಖೆಗೆ ಲಾಸ್ ಹೇಗಾಗುತ್ತೆ, ನಷ್ಟದ ಪ್ರಶ್ನೆಯೇ ಬರಲ್ಲ ಎಂದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಈ ವೇಳೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ 6 ಡಿಪೋಗಳಿಂದ ನಿತ್ಯ 3 ಲಕ್ಷ 53 ಸಾವಿರ ಜನ ಪ್ರಯಾಣ ಮಾಡುತ್ತಿದ್ದಾರೆ. ಈ ಪೈಕಿ 2 ಲಕ್ಷ 20 ಸಾವಿರ ಮಹಿಳೆಯರು, 1 ಲಕ್ಷ 33 ಸಾವಿರ ಪುರುಷರು. ಬೆಳಗಾವಿ ಜಿಲ್ಲೆಯಲ್ಲಿ ಶೇಕಡ 62ರಷ್ಟು ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ ಎಂದರು. ಅಲ್ಲದೆ, ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರು ವ್ಯವಸ್ಥೆಗೆ ಸೂಚನೆ ನೀಡಲಾಗಿದ್ದು, ಪ್ರಯಾಣಿಕರಿಗೆ ಆರೋಗ್ಯದಲ್ಲಿ ತೊಂದರೆಯಾದರೆ ನಿಲ್ದಾಣದಲ್ಲಿರುವ ಕ್ಲಿನಿಕ್ಗೆ ಹೋಗಿ ತಪಾಸಣೆ ನಡೆಸಬಹುದು ಎಂದರು.
NWKRTCಯಿಂದ ಹಳೆಯ BMTC ಬಸ್‌ಗಳ ಖರೀದಿ ವಿಚಾರವಾಗಿ ಮಾತನಾಡಿದ ಅವರು, ನಾನು ಹಿಂದೆ ಸಚಿವನಾಗಿದ್ದ ಆ ರೀತಿ ಯಾವುದೇ ಟ್ರಾನ್ಸ್‌ಫರ್ ಮಾಡುತ್ತಿರಲಿಲ್ಲ. ಎಲ್ಲ ನಿಗಮಗಳಿಗೆ ಹೊಸ ಬಸ್‌ಗಳನ್ನೇ ನೀಡುತ್ತಿದ್ದೇವು. ಹೋದ ವರ್ಷ ಖರೀದಿ ಮಾಡಿದ್ದಾರಂತೆ ನನ್ನ ಗಮನಕ್ಕೆ ಬಂದಿಲ್ಲ. ಬೆಳಗಾವಿ ನಗರ ದೊಡ್ಡ ನಗರ ಇಲ್ಲಿ ಹೊಸ ಬಸ್‌ಗಳು ಬೇಕಾಗುತ್ತದೆ. ಆ ಬಸ್‌ಗಳ ವ್ಯವಸ್ಥೆ ಮಾಡುವ ಜವಾಬ್ದಾರಿ ನನ್ನದು. ಬೆಳಗಾವಿ ಜಿಲ್ಲೆಯ 20 ಹಳ್ಳಿಗಳಿಗೆ ಬಸ್ ಸಂಪರ್ಕ ಇಲ್ಲ ಎಂಬ ದೂರು ಬಂದಿತ್ತು. ಎರಡು ಹಳ್ಳಿಗಳಿಗೆ ಬಸ್ ನೀಡಿದ್ದು ಉಳಿದೆಡೆಯೂ ರಸ್ತೆ ಸರಿ ಇದ್ದರೆ ನೀಡುತ್ತೇವೆ ಎಂದರು.
ನಿನ್ನೆ (ಜೂನ್ 24) ವಿವಿಧ ಸಾರಿಗೆ ಇಲಾಖೆಗಳ ಎಂಡಿಗಳ ಜೊತೆ ಸಭೆ ನಡೆಸಿದ್ದ ಸಾರಿಗೆ ಸಚಿವರು, ಶಕ್ತಿ ಯೋಜನೆಯ ಬಗ್ಗೆ ಮಾಹಿತಿ ಪಡೆದಿದ್ದರು. ನಂತರ ಮಾತನಾಡಿದ್ದ ಅವರು, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಮಾಡಿದ ನಂತರ ಸರ್ಕಾರಿ ಬಸ್ಗಳನ್ನು ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದರು. ಶಕ್ತಿ ಯೋಜನೆ ಜಾರಿಗೂ ಮೊದಲು 84.15 ಲಕ್ಷ ಜನರ ಪ್ರಯಾಣ ಮಾಡುತ್ತಿದ್ದರು. ಜೂನ್ 24 ರಂದು ಒಂದೇ ದಿನ 1.05 ಕೋಟಿ ಜನ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Sun, 25 June 23